ADVERTISEMENT

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕ್ಷಣಗಣನೆ; ಪೊಲೀಸ್‌ ಸರ್ಪಗಾವಲು

ಚಿತ್ತಾಪುರ ಪಟ್ಟಣದಲ್ಲಿ ರಾರಾಜಿಸುತ್ತಿರುವ ‘ಭಗವಾ ಧ್ವ‌ಜ’ಗಳು; ಪೊಲೀಸರಿಂದ ನಾಕಾ ಬಂಧಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:44 IST
Last Updated 16 ನವೆಂಬರ್ 2025, 5:44 IST
   

ಕಲಬುರಗಿ: ರಾಜ್ಯದ ಗಮನ ಸೆಳೆದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಪಥಸಂಚಲನಕ್ಕೆ ಚಿತ್ತಾಪುರ ಪಟ್ಟಣ ಸಜ್ಜಾಗಿದೆ.

ಹೈಕೋರ್ಟ್‌ ಅಂಗಳದಲ್ಲಿ ‌ಚಿತ್ತಾಪುರ ತಾಲ್ಲೂಕು ಆಡಳಿತ ನೀಡಿರುವ ಷರತ್ತು ಬದ್ಧ ಅನುಮತಿಯೊಂದಿಗೆ ‌ಇಂದು (ಭಾನುವಾರ) ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಆರ್‌ಎಸ್‌ಎಸ್‌ ಗಣವೇಷಧಾರಿಗಳ ಪಥಸಂಚಲನ ನಡೆಯಲಿದೆ. ಇದಕ್ಕಾಗಿ ಇಡೀ ಪಟ್ಟಣ ‌‘ಕೇಸರಿ’ಮಯವಾಗಿದೆ.

ಪಥಸಂಚಲನ ಶುರುವಾಗಿ, ಸಂಪನ್ನಗೊಳ್ಳುವ ಬಜಾಜ್‌ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಕೇಸರಿ ಬಾವುಟ, ಬಂಟಿಂಗ್ಸ್‌ ರಾರಾಜಿಸುತ್ತಿವೆ. ನಾಲ್ಕು ಕಡೆ ಪಥಸಂಚಲನಕ್ಕೆ ಸ್ವಾಗತ ಕೋರುವ ಕಮಾನುಗಳನ್ನು ನಿರ್ಮಿಸಲಾಗಿದೆ.

ADVERTISEMENT

ಪೊಲೀಸ್‌ ಸರ್ಪಗಾವಲು: ಪಥಸಂಚಲನದ ವೇಳೆ ಯಾವುದೇ ರೀತಿಯ ತೊಂದರೆ ಹಾಗೂ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಪಟ್ಟಣವನ್ನು ಸಂಪರ್ಕಿಸುವ ನಾಲ್ಕೂ ರಸ್ತೆಗಳಲ್ಲಿ ಪೊಲೀಸ್‌ ನಾಕಾ ಬಂಧಿ ಹಾಕಿದ್ದು, ಪಟ್ಟಣ ಪ್ರವೇಶಿಸುವ ಬಸ್‌ ಸೇರಿದಂತೆ ಬಹುತೇಕ ಎಲ್ಲ ವಾಹನಗಳನ್ನೂ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಪಥಸಂಚಲನದ ಭದ್ರತೆಗಾಗಿ ಒಬ್ಬರು ಹೆಚ್ಚುವರಿ ಎಸ್‌ಪಿ, ಐವರು ಡಿವೈಎಸ್ಪಿ, 18 ಸಿಪಿಐಗಳು, 51 ಪಿಎಸ್ಐಗಳು, 110 ಎಎಸ್ಐ, 501 ಕಾನ್‌ಸ್ಟೆಬಲ್, 250 ಹೋಮ್‌ಗಾರ್ಡ್, ಕೆಎಸ್ಆರ್‌ಪಿ ತುಕಡಿ–8, ಡಿಎಆರ್ ತುಕಡಿ–6, ಬಿಡಿಎಸ್–1, ಎಎಸ್‌ಸಿ–1 ತುಕಡಿ ಸೇರಿ ಒಟ್ಟು 1,200 ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಹಿರಿಯ ‍ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಆರ್‌ಎಸ್ಎಸ್ ಪಥಸಂಚಲನ ಸಾಗುವ ಮಾರ್ಗದಲ್ಲಿ ಪುರಸಭೆ–12, ಪೊಲೀಸ್ ಇಲಾಖೆಯಿಂದ 44 ಸಿಸಿಟಿವಿ ಕ್ಯಾಮೆರಾ ಅಳವಡಿಸಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪಥಸಂಚಲನ ಸಾಗುವ ಸಮಯದಲ್ಲಿ ಹತ್ತು ಡ್ರೋನ್‌ ಕ್ಯಾಮೆರಾಗಳು ದೃಶ್ಯ ಸೆರೆ ಹಿಡಿದು ನಿಗಾ ವಹಿಸಲು ಸಜ್ಜಾಗಿವೆ. ಸಮಗ್ರ ದೃಶ್ಯ ಸೆರೆ ಹಿಡಿಯಲೆಂದು ವಿಡಿಯೊ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

ಪಥಸಂಚಲನ ನಡೆಯುವ ಮಾರ್ಗದಲ್ಲಿ 200 ಧ್ವಜ ಮತ್ತು ಬಂಟಿಂಗ್ಸ್, ಫ್ಲೆಕ್ಸ್ ಕಟ್ಟಲು ಪುರಸಭೆ ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.