ADVERTISEMENT

ಕಲಬುರಗಿ: ‘ತಡೆ’ಯ ಮಧ್ಯೆಯೂ ಆರ್‌ಎಸ್‌ಎಸ್‌ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 15:19 IST
Last Updated 19 ಅಕ್ಟೋಬರ್ 2025, 15:19 IST
   

ಸೇಡಂ (ಕಲಬುರಗಿ ಜಿಲ್ಲೆ): ಸೇಡಂನಲ್ಲಿ ಆರ್‌ಎಸ್‌ಎಸ್‌ ಶತಾಬ್ದಿ ನಿಮಿತ್ತ ಭಾನುವಾರ ಆಯೋಜಿಸಲಾಗಿದ್ದ ಗಣವೇಷಧಾರಿಗಳ ಪಥಸಂಚಲನ ಪೊಲೀಸರ ತಡೆಯ ಮಧ್ಯೆಯೂ ಆಕರ್ಷಕವಾಗಿ ಜರುಗಿತು.

ಪಟ್ಟಣದ ನರ್ಮದಾ ಕಾಲೇಜು ಆವರಣದಿಂದ ಆರಂಭವಾದ ಪಥಸಂಚಲನ ಡಿಬಿಆರ್ ಕಾಪೌಂಡ್ ಮೂಲಕ ಮುಖ್ಯ ರಸ್ತೆ ಪ್ರವೇಶಿಸುತ್ತಿದ್ದಂತೆಯೇ ಪೊಲೀಸರು ಗಣವೇಷಧಾರಿಗಳನ್ನು ವಶಕ್ಕೆ ಪಡೆದು ವಾಹನಗಳಿಗೆ ಹತ್ತಿಸಿದರು. ಇದನ್ನು ಸಾರ್ವಜನಿಕರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ವಾಗ್ವಾದ-ನೂಕು ನುಗ್ಗುಲು ಉಂಟಾಯಿತು.

ಕೆಲಕಾಲದ ಬಳಿಕ ವಶಕ್ಕೆ ‍ಪಡೆದಿದ್ದ ಗಣವೇಷಧಾರಿಗಳನ್ನು ಪೊಲೀಸರು ಬಸ್ ನಿಲ್ದಾಣ, ತಾಲ್ಲೂಕು ಪಂಚಾಯಿತಿ ಸೇರಿದಂತೆ ವಿವಿಧೆಡೆ ಬಿಡುಗಡೆ ಮಾಡಿದರು. ನಂತರ ಪುನಃ ಗಣವೇಷಧಾರಿಗಳು ಅಲ್ಲಿಂದಲೇ ತಮ್ಮ ಪಥಸಂಚಲನ ಪ್ರಾರಂಭಿಸಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹೆಜ್ಜೆಹಾಕಿದರು.

ADVERTISEMENT

ಪಥ ಸಂಚಲನದ ಬರುವಿಕೆಗಾಗಿ ಕಾದಿದ್ದ ಬಡಾವಣೆಯ ಜನರು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದರು. ಪಟ್ಟಣದ ಕೆಲವು ಬಡಾವಣೆಗಳಲ್ಲಿ ಹಲವು ತಂಡಗಳಾಗಿ ವಿಭಜನೆಗೊಂಡರೂ ಗಣವೇಷಧಾರಿಗಳು ಬಹುತೇಕ ನಿಗದಿತ ಮಾರ್ಗದಲ್ಲೇ ಸಾಗಿದರು. ಕೆಲವೆಡೆ ಪುಟಾಣಿಗಳು ವಿವಿಧ ನಾಯಕರ ವೇಷಭೂಷಣಗಳಲ್ಲಿ ಕಂಗೊಳಿಸಿದರು.

ನರ್ಮದಾ ಕಾಲೇಜಿನಿಂದ ಆರಂಭಗೊಂಡ ಪಥಸಂಚಲನ ಹಲವು ಮಾರ್ಗಗಳಿಂದ ಸಂಚಲನ ನಡೆಸಿ ಪುನಃ ನರ್ಮದಾ ಕಾಲೇಜು ತಲುಪಿ ಸಂಪನ್ನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.