ADVERTISEMENT

ತುರ್ತು ಪರಿಸ್ಥಿತಿ ಹೇರಿದಾಗ ಇಂದಿರಾ ಗಾಂಧಿ ಬೆಂಬಲಿಸಿದ್ದ ಆರ್‌ಎಸ್‌ಎಸ್‌: ಪ್ರಕಾಶ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:57 IST
Last Updated 23 ಆಗಸ್ಟ್ 2025, 4:57 IST
ಕಲಬುರಗಿಯಲ್ಲಿ ನಡೆದ ‘ತುರ್ತು ಪರಿಸ್ಥಿತಿ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ಮಾತನಾಡಿದರು. ಪ್ರಭು ಖಾನಾಪುರೆ, ಆರ್.ಕೆ. ಹುಡಗಿ, ಕೆ.ನೀಲಾ ಭಾಗವಹಿಸಿದ್ದರು
ಕಲಬುರಗಿಯಲ್ಲಿ ನಡೆದ ‘ತುರ್ತು ಪರಿಸ್ಥಿತಿ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ಮಾತನಾಡಿದರು. ಪ್ರಭು ಖಾನಾಪುರೆ, ಆರ್.ಕೆ. ಹುಡಗಿ, ಕೆ.ನೀಲಾ ಭಾಗವಹಿಸಿದ್ದರು   

ಕಲಬುರಗಿ: ‘ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಜಯಪ್ರಕಾಶ್ ನಾರಾಯಣ್ ಜೊತೆಗೆ ಒಂದು ಕಡೆ ಆರ್‌ಎಸ್‌ಎಸ್‌ ವಿರೋಧಿಸಿತ್ತು. ಆದರೆ, ಮತ್ತೊಂದು ಕಡೆ ಇಂದಿರಾ ಅವರ ಪರವಾಗಿ ಕೆಲಸ ಮಾಡಲು ತಮ್ಮ ಕಾರ್ಯಕರ್ತರು ತಯಾರಿದ್ದಾರೆ ಎಂದು ಸಂಘದ ಸರ ಸಂಘಚಾಲಕರು ಪತ್ರ ಬರೆದಿದ್ದರು. ಹೀಗಾಗಿ ಆರ್‌ಎಸ್‌ಎಸ್ ಎರಡು ತಲೆಯ ಹಾವಿದ್ದಂತೆ’ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್ ಆರೋಪಿಸಿದರು.

ನಗರದ ಸಿಪಿಎಂ ಕಚೇರಿ ಹಸನ್‌ಖಾನ್ ಭವನದಲ್ಲಿ ಶುಕ್ರವಾರ ಪಕ್ಷದ ವತಿಯಿಂದ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಅಂದು, ಇಂದು, ಮುಂದಿನ ಸವಾಲುಗಳು’ ಕುರಿತು ಅವರು ಉಪನ್ಯಾಸ ನೀಡಿದರು. 

‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಯಾವತ್ತಿಗೂ ಅನುಕೂಲಸಿಂಧು ರಾಜಕಾರಣವನ್ನು ಮಾಡಿಕೊಂಡು ಬಂದಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಅಂಡಮಾನ್ ಜೈಲಿನಲ್ಲಿ 80 ಸಾವಿರ ಹೋರಾಟಗಾರರಿಗೆ ಕರಿನೀರಿನ ಶಿಕ್ಷೆ ವಿಧಿಸಿದ್ದರು. ಅದರಲ್ಲಿ ಕ್ಷಮಾಪಣೆ ಕೇಳಿದ ಏಕೈಕ ವ್ಯಕ್ತಿ ಆರ್‌ಎಸ್‌ಎಸ್‌ನೊಂದಿಗೆ ನಿಕಟ ಸಂಬಂಧ ಹೊಂದಿದ್ದ ವಿ.ಡಿ. ಸಾವರ್ಕರ್. ಇಂದಿರಾ ಗಾಂಧಿ ತಮ್ಮ ಅಧಿಕಾರದ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿದ ಹಲವು ಮುಖಂಡರನ್ನು ಜೈಲಿಗೆ ಹಾಕಿದ್ದರು. ಆಗ ಇಂದಿರಾ ಅವರಿಗೆ ಪತ್ರ ಬರೆದ ಆರ್‌ಎಸ್‌ಎಸ್‌ನ ಸರಸಂಘ ಚಾಲಕ ಬಾಳಾಸಾಹೇಬ ದೇವರಸ್ ಅವರು ನೀವು ರಾಷ್ಟ್ರಕಟ್ಟುವ ಕೆಲಸವನ್ನು ಮಾಡುತ್ತಿದ್ದೀರಿ. ನಿಮ್ಮನ್ನು ಬೆಂಬಲಿಸಲು ತಯಾರಿದ್ದೇವೆ. ಬೆಂಬಲಿಸಿದ್ದಕ್ಕೆ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದಿದ್ದರು. ಆ ಪತ್ರಗಳನ್ನು ಈಗಲೂ ರಕ್ಷಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಚುನಾವಣಾ ಪ್ರಕ್ರಿಯೆಯನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಮುಂದಾಗಿರುವ ನರೇಂದ್ರ ಮೋದಿ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇರದಂತೆ ಕಾಯ್ದೆ ರೂಪಿಸಿದ್ದಾರೆ. ಹೀಗಾಗಿ, ಅವರು ಬಯಸಿದ ವ್ಯಕ್ತಿಯನ್ನು ಚುನಾವಣಾ ಆಯುಕ್ತರನ್ನಾಗಿ ಮಾಡಬಹುದಾಗಿದೆ. ಈಗ ಇರುವ ಚುನಾವಣಾ ಆಯುಕ್ತರು ನಿಷ್ಪಕ್ಷಪಾತದಿಂದ ಕೆಲಸ ಮಾಡುವ ಬದಲು ಬಿಜೆಪಿ ಬೆಂಬಲಿಗನಂತೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಚಿಂತಕ ಆರ್.ಕೆ. ಹುಡಗಿ ಮಾತನಾಡಿ, ‘ಮೋದಿ ಅವರು ಅಧಿಕಾರಕ್ಕೆ ಬರುವುದಕ್ಕೂ ಮೊದಲು ದೇಶದ ಒಟ್ಟು ಸಾಲ ₹57 ಲಕ್ಷ ಕೋಟಿ ಇತ್ತು. ಅವರು ಅಧಿಕಾರ ವಹಿಸಿಕೊಂಡ ಮೇಲೆ ಸಾಲದ ಪ್ರಮಾಣ ₹130 ಲಕ್ಷ ಕೋಟಿ ಆಗಿದೆ. ಈ ಸಾಲಕ್ಕೆ ವಾರ್ಷಿಕ ₹12 ಲಕ್ಷ ಕೋಟಿ ಬಡ್ಡಿ ಕಟ್ಟಬೇಕಿದೆ. ಮೋದಿ ಅವಧಿಯಲ್ಲಿ 4.25 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ 757 ರೈತರು ಪ್ರತಿಭಟನಾ ಸ್ಥಳದಲ್ಲಿಯೇ ಸಾವಿಗೀಡಾದರು. ಸಾವಿರಾರು ಕಾರ್ಖಾನೆಗಳು ಬಂದ್ ಆಗಿವೆ. ಇಂತಹ ದುರಾಡಳಿತವನ್ನು ಜನರು ವಿರೋಧಿಸಬೇಕು’ ಎಂದರು.

ಲೇಖಕ ಪ್ರಭು ಖಾನಾಪುರೆ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಮಂತ ಬಿರಾದಾರ, ಕೋದಂಡರಾಮಪ್ಪ, ದಲಿತ ಹಕ್ಕುಗಳ ಸಮಿತಿಯ ಪಾಂಡುರಂಗ ಮಾವಿನಕರ್, ಪಿಯು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಡಿವೈಎಫ್‌ಐ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ ಭಾಗವಹಿಸಿದ್ದರು.

ಚುನಾವಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಿದೆ. ಬಹುಮತದ ಬದಲು ಒಟ್ಟಾರೆ ಮತಗಳ ಅನುಪಾತದಲ್ಲಿ ಸೀಟುಗಳ ಆಯ್ಕೆಯನ್ನು ಮಾಡಬೇಕು. ಇದರಿಂದ ಪ್ರತಿಯೊಂದು ಮತಕ್ಕೂ ಬೆಲೆ ಬಂದಂತಾಗುತ್ತದೆ. ಈ ಬೇಡಿಕೆ ಬಗ್ಗೆ ಚುನಾವಣಾ ಆಯೋಗ ಕಣ್ಣೆತ್ತಿಯೂ ನೋಡುತ್ತಿಲ್ಲ
ಕೆ. ಪ್ರಕಾಶ್ ಸಿಪಿಎಂ ರಾಜ್ಯ ಕಾರ್ಯದರ್ಶಿ
ಮೋದಿ ಕಾರ್ಯವೈಖರಿಗೆ ಬೇಸತ್ತ ಸಂಘವು ಅವರನ್ನು ಬದಲಾಯಿಸಲು ಚಿಂತನೆ ನಡೆಸಿದೆ. ಪ್ರಧಾನಿ ಕುರ್ಚಿ ಉಳಿಸಿಕೊಳ್ಳಲು ಸ್ವಾತಂತ್ರ್ಯ ದಿನಾಚರಣೆಯಂದು ಆರ್‌ಎಸ್‌ಎಸ್‌ ಕಾರ್ಯವನ್ನು ಹಾಡಿ ಹೊಗಳಿದ್ದಾರೆ.
ಆರ್.ಕೆ.ಹುಡಗಿ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.