ADVERTISEMENT

ಹಾಳಾದ ರಸ್ತೆ, ಚರಂಡಿ: ಜನರ ಪರದಾಟ

ಅಫಜಲಪುರ: 30 ಸಾವಿರಕ್ಕೂ ಅಧಿಕ ಜನಸಂಖ್ಯೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ

ಶಿವಾನಂದ ಹಸರಗುಂಡಗಿ
Published 18 ಜುಲೈ 2021, 14:36 IST
Last Updated 18 ಜುಲೈ 2021, 14:36 IST
ಅಫಜಲಪುರದ ಕೊರೊನಾ ಲಸಿಕೆ ಹಾಕುವ ಕೇಂದ್ರದ ಸುತ್ತ ಚರಂಡಿ ನೀರು ತುಂಬಿಕೊಂಡಿರುವುದು
ಅಫಜಲಪುರದ ಕೊರೊನಾ ಲಸಿಕೆ ಹಾಕುವ ಕೇಂದ್ರದ ಸುತ್ತ ಚರಂಡಿ ನೀರು ತುಂಬಿಕೊಂಡಿರುವುದು   

ಅಫಜಲಪುರ: ಪಟ್ಟಣದ ಸುಮಾರು 23 ವಾರ್ಡ್‌ಗಳಲ್ಲಿ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಮತ್ತು ಅಲ್ಲಲ್ಲಿ ರಸ್ತೆಗಳಲ್ಲಿ ಬಿದ್ದಿರುವ ತಗ್ಗುಗಳಿಂದ ಮಳೆ ನೀರು ತುಂಬಿಕೊಂಡಿದ್ದು, ಜನರು ಸಂಚಾರಕ್ಕೆ ನಿತ್ಯ ಪರದಾಡುತ್ತಿದ್ದಾರೆ.

ಮಳೆಗಾಲದಲ್ಲಿ ಪಟ್ಟಣದ ರಸ್ತೆಗಳು ನೀರಿನಿಂದ ತುಂಬಿಕೊಂಡಿರುತ್ತವೆ. ಚರಂಡಿ ನೀರು ಮುಂದೆ ಹರಿದು ಹೋಗದೆ ಮಳೆ ನೀರಿಗೆ ರಸ್ತೆಯಲ್ಲಿ ಹರಿಯುತ್ತದೆ. ಅದೇ ನೀರನ್ನು ನಳದ ತಗ್ಗುಗಳಿಗೆ ಹರಿದು ಹೋಗಿ ಅಂತಹ ನೀರನ್ನು ಜನರು ಕುಡಿಯುತ್ತಿದ್ದಾರೆ. ಪಿಕಾರ್ಡ್ ಬ್ಯಾಂಕ್ ರಸ್ತೆ, ಘತ್ತರಗಾ ಒಳಭಾಗದ ರಸ್ತೆಗಳು ಕೆಲವು ಕಡೆ ಹಾಳಾಗಿದ್ದು, ಮಳೆ ಬಂದರೆ ಮಳೆಯ ನೀರು ಮನೆಯಲ್ಲಿ ಸೇರುತ್ತವೆ. ಹೀಗಾಗಿ ಜನರು ಭಯದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿ 30 ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆಯಿದ್ದು, ಭೀಮಾನದಿ ನೀರನ್ನೇ ನೇರವಾಗಿ ಜನರು ಕುಡಿಯುತ್ತಾರೆ. ಈ ಕುರಿತು ಈಚೆಗೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಅಪರ್ಣಾ ದತ್ತು ದೇವರನಾವದಗಿ ಅವರು, ಮಾಲಿನ್ಯ ನೀರನ್ನು ಜನರು ಕುಡಿಯುವ ಬಗ್ಗೆ ಬೇಸರ ವ್ಯಕ್ತಪಡಿಸಿ, ‘ನಾನು 2ನೇ ಅವಧಿಗೆ ಪುರಸಭೆಗೆ ಆಯ್ಕೆಯಾಗಿ ಬಂದರೂ ಇನ್ನೂವರೆಗೂ ಜನರಿಗೆ ಶುದ್ಧ ಕುಡಿಯುವ ನೀರು ಕೊಡಿಸಲು ಸಾದ್ಯವಾಗಿಲ್ಲ. ಈ ಸಮಸ್ಯೆ ಬಗೆಹರಿಸಿ‘ ಎಂದರು.

ADVERTISEMENT

ಪಟ್ಟಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಿರಂತರವಾಗಿ 2 ವರ್ಷಗಳಿಂದ ಪುರಸಭೆಗೆ ಅನುದಾನ ಬಿಡುಗಡೆಯಾದರೂ ಇದನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಟೆಂಡರ್‌ನಲ್ಲಿಯೂ ವಿಳಂಬವಾಗುತ್ತಿದೆ. ಹೀಗಾಗಿ ಅನುದಾನ ಬಿಡುಗಡೆಯಾದರೂ ಸಹ ಅದು ಬಳಕೆ ಆಗುತ್ತಿಲ್ಲ. ಹೀಗಾಗಿ ನೀರಿಕ್ಷಿತ ಮಟ್ಟದಲ್ಲಿ ಪಟ್ಟಣ ಅಭಿವೃದ್ಧಿಯಾಗುತ್ತಿಲ್ಲ ಎಂದು ಪುರಸಭೆ ಸದಸ್ಯ ಚಂದು ದೇಸಾಯಿ ಹೇಳುತ್ತಾರೆ.

ಲೊಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕೊರೊನಾ ಲಸಿಕೆ ಹಾಕುವ ಕೇಂದ್ರ ಮಾಡಲಾಗಿದೆ. ಅದರ ಸುತ್ತಮುತ್ತಲೂ ಚರಂಡಿ ನೀರು ತುಂಬಿಕೊಂಡಿದೆ. ಹಂದಿಗಳು ವಾಸವಾಗಿವೆ. ಲಸಿಕಾ ಕೇಂದ್ರಕ್ಕೆ ಬರಲು ರಸ್ತೆ ಹಾಳಾಗಿ ಹೋಗಿದೆ. ಅಲ್ಲಲ್ಲಿ ನಿಲ್ಲಲೂ ಸ್ಥಳವಿಲ್ಲ. ಅಂತಹ ರಸ್ತೆಯಲ್ಲಿ ಮಹಿಳೆಯರೂ, ವೃದ್ಧರು ಬರುವುದು ಹೇಗೆ ಎಂಬುದು ಜನರ ಪ್ರಶ್ನೆಯಾಗಿದೆ. ಅದಕ್ಕಾಗಿ ಸಾರ್ವಜನಿಕ ಆಸ್ಪತ್ರೆಯವರು ಲಸಿಕಾ ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಮಾಡಬೇಕು. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಜನರು ಒತ್ತಾಯಿಸುತ್ತಾರೆ.

--

ಮಳೆಗಾಲದಲ್ಲಿ ಜನರು ಹೊರಗೆ ಬರುವುದೇ ಕಷ್ಟವಾಗುತ್ತದೆ ಇದರ ಬಗ್ಗೆ ಹಲವಾರು ಸಂಘಟನೆಗಳು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ.
ಸಿದ್ದರಾಮಪ್ಪ ಮನ್ಮಿ, ನಿರ್ದೇಶಕರು ಎಸ್‌ಎಂವಿವಿ ಸಂಘ

--

ಪುರಸಭೆಗೆ ನೀರಿನಂತೆ ಹಣ ಹರಿದು ಬಂದರೂ ಅಭಿವೃದ್ಧಿಯಾಗಿಲ್ಲ, ಮಾಲೀನ್ಯ ನೀರನ್ನೆ ಕುಡಿಯುವ ವ್ಯವಸ್ಥೆ ನಡೆದಿದೆ. ಚರಂಡಿ ನೀರು ಭೀಮಾನದಿ ಸೇರುತ್ತದೆ, ಅದೇ ನೀರು ಕುಡಿಯುವಂತಾಗಿದೆ.
ಮಕ್ಬೂಲ್ ಪಟೇಲ, ಮಾಜಿ ಅಧ್ಯಕ್ಷರು, ತಾಲ್ಲೂಕು ಬ್ಲಾಕ್ ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.