ADVERTISEMENT

ಸೂರು ವಂಚಿತ ಬಡವರಿಗೆ ಸುಸಜ್ಜಿತ ಲೇಔಟ್‌

ಭಕ್ತಂಪಳ್ಳಿ: ಗ್ರಾಮೀಣ ಜನರಿಗೆ ಮೂಲಸೌಕರ್ಯ ಕಲ್ಪಿಸಿ ನೂತನ ಬಡಾವಣೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:57 IST
Last Updated 24 ಜನವರಿ 2026, 2:57 IST
ಚಿಂಚೋಳಿ ತಾಲ್ಲೂಕು ಭಕ್ತಂಪಳ್ಳಿಯ ಹೊರ ವಲಯದಲ್ಲಿ ಬರುವ ಸ.ನಂ.28ರಲ್ಲಿ ನಿರ್ಮಿಸಿದ ಹೊಸ ಲೇಔಟನಲ್ಲಿ ಸಿಡಿ ಹಾಗೂ ರಸ್ತೆ ನಿರ್ಮಿಸಿರುವುದು
ಚಿಂಚೋಳಿ ತಾಲ್ಲೂಕು ಭಕ್ತಂಪಳ್ಳಿಯ ಹೊರ ವಲಯದಲ್ಲಿ ಬರುವ ಸ.ನಂ.28ರಲ್ಲಿ ನಿರ್ಮಿಸಿದ ಹೊಸ ಲೇಔಟನಲ್ಲಿ ಸಿಡಿ ಹಾಗೂ ರಸ್ತೆ ನಿರ್ಮಿಸಿರುವುದು   

ಚಿಂಚೋಳಿ: ತಾಲ್ಲೂಕಿನ ಭಕ್ತಂಪಳ್ಳಿ ಗ್ರಾಮದಲ್ಲಿ ನಿವೇಶನ ಹಾಗೂ ಸೂರು ವಂಚಿತ ಬಡವರಿಗೆ ಸುಸಜ್ಜಿತ ಲೇಔಟ ನಿರ್ಮಿಸಲಾಗಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಮೂಲಸೌಕರ್ಯ ಕಲ್ಪಿಸುವ ಮೂಲಕ ನೂತನ ಬಡಾವಣೆ ನಿರ್ಮಿಸುತ್ತಿರುವುದು ತಾಲ್ಲೂಕಿನಲ್ಲಿಯೇ (ಗ್ರಾಮೀಣ ಭಾಗ) ಇದು ಮೊದಲ ಪ್ರಯತ್ನ.

2015 ರಲ್ಲಿ ಭಕ್ತಂಪಳ್ಳಿ ಗ್ರಾಮದ ಸ.ನಂ.28ರಲ್ಲಿ ಬಡವರಿಗೆ ನಿವೇಶನಗಳ ಹಕ್ಕುಪತ್ರಗಳನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ವಿತರಿಸಿದ್ದರು. ರಾಜೀವಗಾಂಧಿ ವಸತಿ ನಿಗಮದಿಂದ ಭೂಮಿ ಸಮತಟ್ಟುಗೊಳಿಸಲು ₹3.60ಲಕ್ಷ ಮಂಜೂರು ಕೂಡ ಮಾಡಲಾಗಿತ್ತು. ಆದರೇ ಮಂಜೂರಾದ ಹಣ ಬಳಕೆಯಾಗದೆ ಹಕ್ಕುಪತ್ರ ವಿತರಣೆಗೆ ಮಾತ್ರ ಸೀಮಿತವಾಗಿತ್ತು.

ADVERTISEMENT

2023ರಲ್ಲಿ ಶರಣಪ್ರಕಾಶ ಪಾಟೀಲ ಮತ್ತೆ ಶಾಸಕರಾಗಿ ಆಯ್ಕೆಯಾದ ನಂತರ ಸ.ನಂ 28ರ ಜಮೀನಿನ ನಕಾಶೆ ಪಡೆದು ಸುಸಜ್ಜಿತ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೌಸಿಂಗ್ ಬೋರ್ಡ ನಿರ್ಮಿಸುವ ಲೇಔಟ್‌ಗಳ ಮಾದರಿಯಲ್ಲಿ ಭಕ್ತಂಪಳ್ಳಿಯಲ್ಲಿ ಸರ್ಕಾರವೇ ಲೇಔಟ್ ನಿರ್ಮಿಸಿ ಬಡವರಿಗೆ ನೆರವಾಗುತ್ತಿದೆ.

‘ಬಡಾವಣೆಯಲ್ಲಿ ಒಟ್ಟು 120 ನಿವೇಶನಗಳಿದ್ದು, ಮುಖ್ಯರಸ್ತೆ 30 ಅಡಿ ಅಗಲ, ಒಳ ರಸ್ತೆ 20 ಅಡಿ ಅಗಲ ಹೊಂದಿದೆ. 6 ಎಕರೆ 10 ಗುಂಟೆ ಸರ್ಕಾರಿ ಜಮೀನಿನಲ್ಲಿ ಲೇಔಟ್ ನಿರ್ಮಿಸಲಾಗಿದೆ. ಕೆಕೆಆರ್‌ಡಿಬಿಯಿಂದ ಪಂಚಾಯತ್‌ರಾಜ್ ತಾಂತ್ರಿಕ ಉಪ ವಿಭಾಗಕ್ಕೆ ₹20 ಲಕ್ಷ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ₹15 ಲಕ್ಷ ಮಂಜೂರು ಮಾಡಲಾಗಿದೆ’ ಎಂದು ಗರಗಪಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹೀರಾಸಿಂಗ್ ತಿಳಿಸಿದರು.

‘ಗುತ್ತಿಗೆದಾರರು ಈಗಾಗಲೇ ಕಚ್ಚಾ ರಸ್ತೆ, ಎರಡು ಸಿಡಿ ನಿರ್ಮಿಸಿದ್ದಾರೆ. ನಿವೇಶನಗಳಿಗೆ ನಂಬರ್‌ ಹಾಕಲಾಗಿದೆ. ಸಿಮೆಂಟ್ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣ ಕೆಲಸ ಆರಂಭಿಸಬೇಕಿದೆ. ಇನ್ನು ವಿದ್ಯುತ್ ಸೌಕರ್ಯಕ್ಕಾಗಿ ಕಂಬಗಳ ಸ್ಥಾಪನೆ ಮತ್ತು ಉದ್ಯಾನವನ ಅಭಿವೃದ್ಧಿ ಹಾಗೂ ಬಾಕಿ ಉಳಿದ ಚರಂಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರು ಮಾಡಿಸಲು ಸಚಿವರಿಗೆ ಮನವಿ ಸಲ್ಲಿಸುತ್ತೇವೆ’ ಎಂದು ಗ್ರಾಮದ ಮುಖಂಡ ಶಿವಶರಣರೆಡ್ಡಿ ಭಕ್ತಂಪಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಲೇಔಟ್‌ನಲ್ಲಿ ಗ್ರಾಮ ಪಂಚಾಯಿತಿಗೆ, ಉದ್ಯಾನವನಕ್ಕೆ ಹಾಗೂ ನಾಗರಿಕ ಸೌಕರ್ಯಗಳಿಗಾಗಿ ಪ್ರತ್ಯೇಕ ಜಾಗ ಮೀಸಲಿರಿಸಲಾಗಿದೆ. ಅಲ್ಲದೇ ಇದೇ ಲೇಔಟ್‌ ಪಕ್ಕದಲ್ಲಿ ಸರ್ಕಾರಿ ಶಾಲೆಗೆ 2 ಎಕರೆ ಜಮೀನು ಮತ್ತು ಅಂಗನವಾಡಿ ಕೇಂದ್ರಕ್ಕೆ 10 ಗುಂಟೆ ಜಮೀನು ಪ್ರತ್ಯೇಕವಾಗಿ ಮಂಜೂರು ಮಾಡಿಸಲಾಗಿದೆ.

‘ಸಚಿವರ ವಿಶೇಷ ಮುತುವರ್ಜಿಯಿಂದ ಸರ್ಕಾರವೇ ಸುಸಜ್ಜಿತ ಲೇಔಟ್‌ ನಿರ್ಮಿಸಿ ಬಡವರಿಗೆ ಉಚಿತವಾಗಿ ನಿವೇಶನ ನೀಡಿದ್ದು ಮಾದರಿ ಕೆಲಸ’ ಎನ್ನುತ್ತಾರೆ ತಾಪಂ ಮಾಜಿ ಸದಸ್ಯ ಜಗನ್ನಾಥ ಈದ್ಲಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.