ಡಾ.ಎಸ್.ಎ.ಪಾಟೀಲ ಪ್ರತಿಷ್ಠಾನ ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ರೈತರಾದ ಸೋನಬಾಯಿ ರಾಮಚಂದ್ರ, ಲಿಂಗರಾಜ ಪಾಟೀಲ ಅವರಿಗೆ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಚಿತ್ರ
ಕಲಬುರಗಿ: ಕಳೆದ ವರ್ಷ ನಿಧನರಾದ ಕೃಷಿ ವಿಜ್ಞಾನಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಎ.ಪಾಟೀಲ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಅವರ ಕುಟುಂಬದವರು ಹಾಗೂ ಅಭಿಮಾನಿಗಳು ಸೇರಿ ಸ್ಥಾಪಿಸಿದ ಡಾ. ಎಸ್.ಎ.ಪಾಟೀಲ ಪ್ರತಿಷ್ಠಾನಕ್ಕೆ ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಬಂದಿದ್ದ ಅವರ ಶಿಷ್ಯರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷಿ ಸಂತ ಎಸ್.ಎ.ಪಾಟೀಲ ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.
ಪ್ರತಿಷ್ಠಾನ ಉದ್ಘಾಟಿಸಿದ ರಾಜ್ಯಸಭೆ ಮಾಜಿ ಸದಸ್ಯ, ವಿಕಾಸ ಅಕಾಡೆಮಿ ಸಂಸ್ಥಾಪಕ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಕಲಬುರಗಿ ನೆಲದ ಎಸ್.ಎ. ಪಾಟೀಲರು ಭೂಮಿಗೆ ಅತ್ಯಂತ ಸಮೀಪದ ವ್ಯಕ್ತಿ. ಸುಮಾರು 10 ಸಾವಿರಕ್ಕೂ ಅಧಿಕ ರೈತರನ್ನು ಭೇಟಿ ಮಾಡಿ ಅವರ ಕೃಷಿ ಪ್ರಯೋಗಗಳನ್ನು ಗಮನಿಸಿದ್ದಾರೆ. ಕೃಷಿ ಜಗತ್ತಿಗೆ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಇವರ ಕೃಷಿ ಬಗೆಗಿನ ಕಾಳಜಿಯನ್ನು ಗಮನಿಸಿ 200ಕ್ಕೂ ಅಧಿಕ ರೈತರ ಸಭೆಗಳಿಗೆ ಅವರನ್ನು ಕರೆದುಕೊಂಡು ಹೋಗಿದ್ದೆ. ದೂರದ ಉತ್ತರ ಪ್ರದೇಶದವರೆಗೂ ಅವರು ಬಂದಿದ್ದರು. ಸೇಡಂ ಹೊರವಲಯದಲ್ಲಿ ನಡೆದ 7ನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಬೇಕಿತ್ತು. ಅಷ್ಟರಲ್ಲಿ ನಮ್ಮನ್ನು ಅಗಲಿದರು’ ಎಂದರು.
ಪಾಟೀಲ ಅವರ ಹೆಸರಿನಲ್ಲಿ ಅವರ ಕುಟುಂಬದವರು ಪ್ರತಿಷ್ಠಾನವನ್ನು ಆರಂಭಿಸಿದ್ದು, ಆ ಮೂಲಕ ಪ್ರಗತಿಪರ ರೈತರು, ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಸಂಗತಿ. ಅವರು ನೀಡುವ ಬಹುಮಾನದ ಮೊತ್ತಕ್ಕೆ ನಮ್ಮಿಂದ ಆದಷ್ಟು ಹಣವನ್ನು ಸೇರಿಸಿ ಹೆಚ್ಚಿನ ಮೊತ್ತವನ್ನು ಬಹುಮಾನವಾಗಿ ನೀಡಬಹುದೇ ಎಂಬ ಬಗ್ಗೆ ಚಿಂತನೆ ನಡೆಯಬೇಕು. ಅವರ ಹೆಸರಿನಲ್ಲಿ ಕೃಷಿ ಮಹಾವಿದ್ಯಾಲಯದಲ್ಲಿ ನಿರ್ಮಿಸಿರುವ ನವಗ್ರಹ ವನ ಮುಂದಿನ 25 ವರ್ಷಗಳ ಬಳಿಕವೂ ಉತ್ತಮ ನಿರ್ವಹಣೆಯಲ್ಲಿರಬೇಕು ಎಂದು ಸಲಹೆ ನೀಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್.ಪಾಟೀಲ ಮಾತನಾಡಿ, ‘ಗುರುಗಳಾದ ಎಸ್.ಎ.ಪಾಟೀಲ ಅವರು ಹತ್ತಿ ಬೆಳೆಯ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದರು. ಹೀಗಾಗಿ, ಆಗಸ್ಟ್ 5ರಂದು ಗುಜರಾತ್‌ನ ಹತ್ತಿ ಸಂಶೋಧನಾ ಕೇಂದ್ರದ ಮುಖ್ಯಸ್ಥರನ್ನು ವಿಶ್ವವಿದ್ಯಾಲಯಕ್ಕೆ ಕರೆಸಿ ವಿಶೇಷ ಉಪನ್ಯಾಸ ಕೊಡಿಸಲಾಗುತ್ತಿದೆ. ಕೃಷಿ ವಿ.ವಿ, ಬೀಜ ಘಟಕ ಹಾಗೂ ಸಂಶೋಧನಾ ಕೇಂದ್ರಗಳ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದರು’ ಎಂದರು.
ಮುತ್ಯಾನ ಬಬಲಾದನ ಪೀಠಾಧಿಪತಿ ಗುರುಪಾದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಡೋಳಾದ ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಡಾ. ಎಸ್.ಎ.ಪಾಟೀಲ ಪ್ರತಿಷ್ಠಾನದ ಅಧ್ಯಕ್ಷೆ ಅನ್ನಪೂರ್ಣಾದೇವಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಹನುಮಂತಪ್ಪ, ಗುಜರಾತ್‌ನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ. ಸೂಗೂರ, ಹಿರಿಯ ವಕೀಲ ಶರಣಬಸಪ್ಪ ನಿಷ್ಟಿ, ನೀಲಾಂಬಿಕಾ ಪೊಲೀಸ್ ಪಾಟೀಲ, ಕೃಷಿ ಮಹಾವಿದ್ಯಾಲಯದ ಡೀನರಾದ ಶಿವಶರಣಪ್ಪ ಬಿ. ಗೌಡಪ್ಪ, ಪ್ರಕಾಶ ಎಚ್. ಕುಚನೂರ, ಸಹ ಸಂಶೋಧನಾ ನಿರ್ದೇಶಕ ಬಿ.ಎಂ. ದೊಡ್ಡಮನಿ, ಕೆವಿಕೆ ಮುಖ್ಯಸ್ಥ ರಾಜು ಜಿ. ತೆಗ್ಗೆಳ್ಳಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಇತರರು ವೇದಿಕೆಯಲ್ಲಿದ್ದರು.
ಅತ್ಯುತ್ತಮ ರೈತ ಪ್ರಶಸ್ತಿ ಪ್ರದಾನ
ಎಸ್.ಎ.ಪಾಟೀಲ ಅವರ ಸ್ಮರಣಾರ್ಥ ಕಲಬುರಗಿ ತಾಲ್ಲೂಕಿನ ನಂದೂರು ಸಮೀಪದ ಕಾನುನಾಯಕ ತಾಂಡಾದ ರೈತ ಮಹಿಳೆ ಸೋನಬಾಯಿ ರಾಮಚಂದ್ರ ಅವರಿಗೆ ಅತ್ಯುತ್ತಮ ರೈತ ಮಹಿಳೆ ಹಾಗೂ ನಿಂಬಾಳದ ಲಿಂಗರಾಜ ಗುರುಶಾಂತ ಪಾಟೀಲ ಅವರಿಗೆ ಅತ್ಯುತ್ತಮ ರೈತ ಪ್ರಶಸ್ತಿಯನ್ನು ತಲಾ ₹ 5 ಸಾವಿರ ನಗದು ಬಹುಮಾನದೊಂದಿಗೆ ನೀಡಲಾಯಿತು. ವಿದ್ಯಾರ್ಥಿನಿಯರಾದ ಮಾಧುರಿ ಪೂಜಾರ ಹಾಗೂ ಸಿಂಧು ಅವರಿಗೆ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ನಮ್ಮ ತಂದೆಯವರು ಕೃಷಿ ಹಾಗೂ ಕೃಷಿಕರ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಅವರ ಅಭಿಮಾನಿಗಳು ಕೈಗೊಳ್ಳುವ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಮ್ಮ ಕುಟುಂಬ ಸಾಧ್ಯವಾದಷ್ಟು ಸಹಕಾರ ನೀಡಲಿದೆ-ಡಾ.ಶಶಿಕಾಂತ ಪಾಟೀಲ, ವೈದ್ಯ ಪ್ರತಿಷ್ಠಾನದ ಉಪಾಧ್ಯಕ್ಷ
ಕೃಷಿ ಸ್ನಾತಕೋತ್ತರ ಪದವಿಗೆ ಕೊಯಮತ್ತೂರು ಕೃಷಿ ಸಂಶೋಧನಾ ಸಂಸ್ಥೆಗೆ ಆಯ್ಕೆಯಾಗಬೇಕಿತ್ತು. ಆದರೆ ಮದುರೆ ಕಾಲೇಜಿಗೆ ಹೋಗುವಂತೆ ಅಧಿಕಾರಿಗಳು ಹೇಳಿದ್ದರು. ಎಸ್.ಎ.ಪಾಟೀಲ ಅವರಿಗೆ ಕರೆ ಮಾಡಿದ ಬಳಿಕ ಕೊಯಮತ್ತೂರಿಗೇ ಕೊಟ್ಟರು- ಶರಣಪ್ಪ ಎಸ್.ಡಿ. ಪೊಲೀಸ್ ಕಮಿಷನರ್
ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಕೃಷಿ ಸಮ್ಮೇಳನಕ್ಕೆ ಎಸ್.ಎ.ಪಾಟೀಲ ಅವರು ಕರೆದುಕೊಂಡು ಹೋಗಿದ್ದರು. ಭಾಷಣ ಮಾಡಲು ಅವಕಾಶ ಕೊಡಿಸಿದ್ದರಿಂದ ಇಂಗ್ಲೆಂಡಿನ ತಂಡದವರು ನಮ್ಮ ಹೊಲಕ್ಕೆ ಬಂದು ಸಾಕ್ಷ್ಯಚಿತ್ರ ನಿರ್ಮಿಸಿದರು- ಕವಿತಾ ಮಿಶ್ರಾ ಪ್ರಗತಿಪರ ರೈತ ಮಹಿಳೆ ರಾಯಚೂರು
ಭೀಮರಾಯನಗುಡಿ ಕೃಷಿ ಕಾಲೇಜಿಗೆ 600 ಆಸನದ ಸಭಾಂಗಣ ವಿಜಯಪುರ ಕೃಷಿ ಕಾಲೇಜಿಗೆ 450 ಆಸನದ ಸಭಾಂಗಣ ಮಂಜೂರು ಮಾಡಿದ್ದರು. ನನ್ನ ಮನವಿಗೆ ಸ್ಪಂದಿಸಿ ವಿಜಯಪುರಕ್ಕೂ ಹೆಚ್ಚುವರಿ ಆಸನದ ಸಭಾಂಗಣಕ್ಕೆ ಅನುಮೋದನೆ ನೀಡಿದ್ದರು- ಎ.ಬಿ.ಪಾಟೀಲ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.