ADVERTISEMENT

‘‍ಪ್ರಿಯಾಂಕ್‌ ಖರ್ಗೆ ವಜಾ, ಡಿ.ಸಿ, ಎಸ್ಪಿಗೆ ಅಮಾನತು ಮಾಡಿ’: ಅವ್ವಣ್ಣ ಮ್ಯಾಕೇರಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:19 IST
Last Updated 22 ಮೇ 2025, 13:19 IST
ಅವ್ವಣ್ಣ ಮ್ಯಾಕೇರಿ
ಅವ್ವಣ್ಣ ಮ್ಯಾಕೇರಿ   

ಕಲಬುರಗಿ: ‘ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮರಳು ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಅಂದಾಜು ₹2,500 ಕೋಟಿ ತೆರಿಗೆ ವಂಚನೆ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಕ್ರಮದ ತನಿಖೆಗೆ ಬಳ್ಳಾರಿಯಿಂದ ಬಂದಿದ್ದ ಅಧಿಕಾರಿಗಳ ತಂಡ ನಡೆಸಿದ ಅಧ್ಯಯನದಿಂದ ಇದು ಗೊತ್ತಾಗಿದೆ’ ಎಂದು ಜಿಲ್ಲಾ ರೈತ ಹೋರಾಟ ಸಮಿತಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದರು.

‘ಈ ಅಕ್ರಮಕ್ಕೆ ಸಹಕಾರ ನೀಡಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಸೇಡಂ ಉಪವಿಭಾಗಾಧಿಕಾರಿ, ಶಹಾಬಾದ ಡಿವೈಎಸ್ಪಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮರಳು ಟಾಸ್ಕ್‌ಫೋರ್ಸ್‌ ಸಮಿತಿಯ ಎಲ್ಲರನ್ನೂ ಅಮಾನತುಗೊಳಿಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮತಕ್ಷೇತ್ರದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ. ಸಚಿವರಾಗಿ, ಕ್ಷೇತ್ರದ ಶಾಸಕರಾಗಿ ನೆಲ, ಜಲದಂಥ ಸಂಪನ್ಮೂಲ ಸಂರಕ್ಷಣೆ ಅವರ ಜವಾಬ್ದಾರಿ. ಅದನ್ನು ನಿಭಾಯಿಸುವಲ್ಲಿ ವಿಫಲರಾದ ಪ್ರಿಯಾಂಕ್‌ ಖರ್ಗೆ ಅವರನ್ನು ರಾಜ್ಯಪಾಲರು ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮರಳು ಅಕ್ರಮ ಗಣಿಗಾರಿಕೆ ಕುರಿತು ಗಮನ ಸೆಳೆಯಲು ಏಪ್ರಿಲ್‌ 16ರಂದು ಕಲಬುರಗಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಭೇಟಿಗೆ ಅನುಮತಿ ಕೋರಲಾಗಿತ್ತು. ಭೇಟಿಗೆ ಅನುಮತಿ ನೀಡಿದ್ದ ಅಧಿಕಾರಿಗಳು, ಅಕ್ರಮ ಬಯಲಿಗೆ ಬರುತ್ತೆ ಎಂದು ಬಳಿಕ ಅವಕಾಶ ನಿರಾಕರಿಸಿದರು. ವಶಕ್ಕೆ ಪಡೆದು ಫರಹತಾಬಾದ್‌ ಠಾಣೆಗೆ ಕರೆದೊಯ್ದರು. ನಂತರ ಏಪ್ರಿಲ್‌ 28ರಂದು ಮುಖ್ಯಮಂತ್ರಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಎಲ್ಲ ಹಗರಣಗಳ ಬಗೆಗೆ ನಾನು ದೂರು ನೀಡಿದ್ದೆ. ಅದರಂತೆ ಗಣಿ ಇಲಾಖೆಯ ಉತ್ತರ ವಲಯದ ಹೆಚ್ಚುವರಿ ನಿರ್ದೇಶಕರ ನೇತೃತ್ವದ ತಂಡ ಬಳ್ಳಾರಿಯಿಂದ ಕಲಬುರಗಿಗೆ ಬಂದು ಸಮೀಕ್ಷೆ ನಡೆಸಿದೆ’ ಎಂದು ವಿವರಿಸಿದರು.

‘ಕೆಆರ್‌ಐಡಿಎಲ್‌ನಿಂದ ನಡೆದ ಅಕ್ರಮ ಗಣಿಗಾರಿಕೆಯಿಂದ ₹2 ಸಾವಿರ ಕೋಟಿ, 12 ಪಟ್ಟಾ ಜಮೀನಿನಲ್ಲಿ ನಡೆದ ಮರಳು ಅಕ್ರಮ ಗಣಿಗಾರಿಕೆಯಿಂದ ₹500 ಕೋಟಿ ರಾಜಧನ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ’ ಎಂದು ಆರೋಪಿಸಿದರು.

‘ಕೆಆರ್‌ಐಡಿಎಲ್‌ ಗುತ್ತಿಗೆ ಪ್ರದೇಶದ ಹೊರಗೆ ಕೆಲವು ಕಿಲೊ ಮೀಟರ್‌ ತನಕ ಅನಧಿಕೃತ ಮರಳುಗಾರಿಕೆ ನಡೆಸಿದೆ. ಯಾರ್ಡ್‌ನಲ್ಲಿ 98,030 ಟನ್‌ ಮರಳು ದಾಸ್ತಾನಿದೆ. ನದಿಯಲ್ಲಿ ಮರಳುಗಾರಿಕೆ ನಡೆಸಿದ ಪ್ರದೇಶದಲ್ಲಿ ಮ್ಯಾನುವಲ್‌ ಆಗಿ ಸಮೀಕ್ಷೆ ಮಾಡಲು ಸಾಧ್ಯವಿಲ್ಲ. ಡ್ರೋನ್‌ನಂಥ ಆಧುನಿಕ ತಂತ್ರಜ್ಞಾನ ಬಳಸಿ ಅಳತೆ ಮಾಡುವ ಅಗತ್ಯವಿದೆ ಎಂದು ತಂಡವು ಅಭಿಪ್ರಾಯಪಟ್ಟಿದೆ’ ಎಂದು ಮಾಹಿತಿ ನೀಡಿದರು.

ಬಳಿಕ ತನಿಖಾ ತಂಡ ಭೇಟಿ ನೀಡಿದ ಸಂದರ್ಭದಲ್ಲಿನ ವಿಡಿಯೊ ದೃಶ್ಯಾವಳಿಗಳನ್ನು ಪ್ರೊಜೆಕ್ಟರ್‌ ಮೂಲಕ ಪ್ರದರ್ಶಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಂದ್ರಕಾಂತ ಕಿರಸಾವಳಗಿ, ಪ್ರೇಮ ಕೋಳಿ, ಬೋಗೇಶ ಜಮಾದಾರ, ಪ್ರವೀಣ ತೆಗ್ಗಳ್ಳಿ ಸೇರಿದಂತೆ ಹಲವರು ಇದ್ದರು.

‘ರಾಜಧನ ಅಲ್ಪ; ದಾಸ್ತಾನು ಅಪಾರ’

‘ದಾಖಲೆಗಳ ಪ್ರಕಾರ ಕೆಆರ್‌ಐಡಿಎಲ್‌ 2022ರಿಂದ 25ರ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 19137 ಟನ್‌ ಮರಳು ಸರಬರಾಜು ಮಾಡಿ ₹16.19 ಲಕ್ಷ ರಾಜಧನ ಸರ್ಕಾರಕ್ಕೆ ಪಾವತಿಸಿದೆ. ಆದರೆ ತನಿಖಾ ತಂಡವು 98030 ಟನ್‌ ಮರಳು ದಾಸ್ತಾನಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದು ಇದರ ಮೊತ್ತವೇ ₹7.50 ಕೋಟಿಗಳಷ್ಟಾಗುತ್ತದೆ. ಮೂರು ವರ್ಷದಲ್ಲಿ ಬರೀ 19 ಸಾವಿರ ಟನ್‌ ಮರಳು ಮಾರಾಟ ಲೆಕ್ಕ ನೀಡಿ ಕೆಆರ್‌ಐಡಿಎಲ್‌ ಸರ್ಕಾರಕ್ಕೆ ರಾಜಧನ ವಂಚಿಸಿದೆ’ ಎಂದು ಅವ್ವಣ್ಣ ಮ್ಯಾಕೇರಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.