ADVERTISEMENT

ಗ್ರಾಮ ಭಾರತದ ಸಂಸ್ಕೃತಿ ಅನಾವರಣ

ಸಾಹಿತ್ಯ ಅಕಾದೆಮಿಯಿಂದ ಸಮಕಾಲೀನ ಕನ್ನಡ ಸಣ್ಣ ಕತೆ ಓದುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 14:39 IST
Last Updated 11 ಆಗಸ್ಟ್ 2019, 14:39 IST
ಸಾಹಿತ್ಯ ಅಕಾದೆಮಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಾಂತೇಶ ನವಲಕಲ್‌, ಡಾ.ಬಾಳಾಸಾಹೇಬ ಲೋಕಾಪುರ, ಪ್ರಭಾಕರ ನಿಂಬರಗಿ, ಡಾ.ಬಸವರಾಜ ಡೋಣೂರ, ಡಾ.ಅಪ್ಪಗೆರೆ ಸೋಮಶೇಖರ, ಬಿ.ಎಚ್‌.ನೀರಗುಡಿ ಭಾಗವಹಿಸಿದ್ದರು
ಸಾಹಿತ್ಯ ಅಕಾದೆಮಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಾಂತೇಶ ನವಲಕಲ್‌, ಡಾ.ಬಾಳಾಸಾಹೇಬ ಲೋಕಾಪುರ, ಪ್ರಭಾಕರ ನಿಂಬರಗಿ, ಡಾ.ಬಸವರಾಜ ಡೋಣೂರ, ಡಾ.ಅಪ್ಪಗೆರೆ ಸೋಮಶೇಖರ, ಬಿ.ಎಚ್‌.ನೀರಗುಡಿ ಭಾಗವಹಿಸಿದ್ದರು   

ಕಲಬುರ್ಗಿ: ಕತೆಗಾರರಾದ ಡಾ.ಬಸವರಾಜ ಡೋಣೂರ ಹಾಗೂ ಮಹಾಂತೇಶ ನವಲಕಲ್‌ ಅವರ ಕತೆಗಳು ಹಿಂದಿನ ಗ್ರಾಮ ಭಾರತದ ಸಂಸ್ಕೃತಿ ಹಾಗೂ ಇಂದಿನ ಜಾಗತೀಕರಣದ ಕರಾಳ ಮುಖಗಳನ್ನು ಅನಾವರಣಗೊಳಿಸುತ್ತವೆ ಎಂದು ವಿಮರ್ಶಕ ಡಾ.ಅಪ್ಪಗೆರೆ ಸೋಮಶೇಖರ ಅಭಿಪ್ರಾಯಪಟ್ಟರು.

ಕೇಂದ್ರ ಸಾಹಿತ್ಯ ಅಕಾದೆಮಿ ಹಾಗೂ ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಇಬ್ಬರೂ ಕತೆಗಾರರ ಕತೆಗಳನ್ನು ವಿಮರ್ಶಿಸಿ ಅವರು ಮಾತನಾಡಿದರು.

ಡೋಣೂರರ ಕತೆಗಳಲ್ಲಿ ಹಳ್ಳಿಯ ಸೊಗಡು, ಅಲ್ಲಿನ ಸಾಮಾಜಿಕ ಹಂದರ ಪ್ರಮುಖವಾಗಿ ತೆರೆದುಕೊಂಡಿದೆ. ನವಲಕಲ್‌ ಅವರ ಕತೆಗಳಲ್ಲಿ ಜಾಗತೀಕರಣದ ನಂತರದ ನಗರ ಭಾರತದ ಬಗ್ಗೆ ಹಲವು ಕಥನಗಳಿವೆ. ಇಬ್ಬರೂ ಉತ್ತರ ಕರ್ನಾಟಕದ ಕತೆಗಳಾಗಿದ್ದರಿಂದ ಭಾಷೆಯೂ ಈ ಭಾಗದ್ದೇ ಇರಬೇಕು ಎಂಬ ನಿರೀಕ್ಷೆ ಇತ್ತು. ಆದರೆ, ಆಧುನಿಕ ಸಮಾಜಕ್ಕೆ ತೆರೆದುಕೊಂಡ ಶಿಷ್ಟ ಭಾಷೆಯನ್ನು ಕತೆಗಳಲ್ಲಿ ಬಳಸಿಕೊಂಡಿದ್ದಾರೆ. ಇದು ಈ ಹೊತ್ತಿನ ಅನಿವಾರ್ಯತೆಯೂ ಇರಬಹುದು ಎಂದು ಹೇಳಿದರು.

ADVERTISEMENT

ಕತೆಗಾರ, ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಬಸವರಾಜ ಡೋಣೂರ ಮಾತನಾಡಿ, ’ನಮ್ಮ ಊರು ವಿಜಯಪುರ ಜಿಲ್ಲೆಯ ಸಾತಿಹಾಳ. ಬಾಲ್ಯದ ದಿನಗಳನ್ನು ಅಲ್ಲಿಯೇ ಕಳೆಯಬೇಕಾಯಿತು. ಊರ ಜಾತ್ರೆಯ ಸಂದರ್ಭದಲ್ಲಿ ಮಾಡುವ ನಾಟಕಗಳಲ್ಲಿ ಪಾರ್ಟ್ ಮಾಡುವಾಗ ಆದ ಅನುಭವಗಳು ಹಾಗೂ ಸಹ ಪಾತ್ರಧಾರಿಯಾಗಿದ್ದ ಸಂಬಂಧಿ ಆಡಿದ ಮಾತು ನನ್ನನ್ನು ನಾಟಕ ಬರೆಯಲು ಪ್ರೇರೇಪಿಸಿತು. ಊರಿನ ಜಮೀನ್ದಾರರು, ಜಾತಿ ವ್ಯವಸ್ಥೆ, ಊರಿನಲ್ಲಿ ನನ್ನ ಹೆಸರಿನವರನ್ನೇ ಜಾತಿಗೆ ಅನುಗುಣವಾಗಿ ಬಸಯ್ಯ, ಬಸವರಾಜಪ್ಪ, ಬಸ್ಯಾ ಎಂದು ಕರೆಯುವ ಬಗೆಯೇ ಅಚ್ಚರಿ ಹುಟ್ಟಿಸಿತ್ತು‘ ಎಂದರು.

ಕತೆಗಾರ ಮಹಾಂತೇಶ ನವಲಕಲ್‌ ಮಾತನಾಡಿ, ’ನಮ್ಮ ಕುಟುಂಬದ ಹಿರೀಕರು ಬೃಹನ್‌ ಮಠವನ್ನು ಕಟ್ಟಿದ್ದರು. ನಾನು ಚಿಕ್ಕವನಿದ್ದಾಗ ತಂದೆ ತೀರಿಕೊಂಡರು. ಆಗ ನನ್ನ ಮೂವರು ದೊಡ್ಡಮ್ಮಂದಿರು ನನ್ನ ರಕ್ಷಣೆಗಾಗಿ ಮಠಕ್ಕೆ ಬಂದು ನೆಲೆಸಿದರು. ಇತ್ತೀಚೆಗೆ ಮಠವನ್ನು ಪಂಚಾಚಾರ್ಯರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಮಠವನ್ನು ಬಿಟ್ಟು ಬೇರೆ ನೆಲೆಸಬೇಕಾಗಿದೆ. ನಮ್ಮ ಮನೆ ದೇವರು ಬಸವಣ್ಣ. ಬಸವ ಪರಂಪರೆಯನ್ನು ಆಚರಿಸುತ್ತಿರುವ ನಮಗೆ ನಿಮ್ಮ ಮನೆದೇವರು ವೀರಭದ್ರ ಎಂದು ಹೇಳುತ್ತಿದ್ದಾರೆ. ಇದು ನಮ್ಮ ಕುಟುಂಬವನ್ನು ಸಂದಿಗ್ಧದಲ್ಲಿ ಸಿಲುಕಿದೆ. ನಾನು ಈಗಲೂ ಬಸವ ಧರ್ಮದ ಅನುಯಾಯಿಯೇ‘ ಎಂದು ಸ್ಪಷ್ಟಪಡಿಸಿದರು.

ಅಕಾದೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕ ಪ್ರಭಾಕರ ನಿಂಬರಗಿ ಅಧ್ಯಕ್ಷತೆ ವಹಿಸಿದ್ದರು. ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್.ನೀರಗುಡಿ, ಜ್ಯೋತಿ ಕುಲಕರ್ಣಿ, ಡಾ.ಗಣೇಶ ಪವಾರ, ಸಂಧ್ಯಾ ಹುನಕುಂಟೆಕರ್‌, ಮಹೇಂದ್ರ ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.