ADVERTISEMENT

ಸಾಹಿತ್ಯ ಸಮ್ಮೇಳನ: ಪುಸ್ತಕ ಮಳಿಗೆಗಳಲ್ಲಿ ಅರ್ಧದಷ್ಟು ರಿಯಾಯಿತಿ

ಪುಸ್ತಕ ಪ್ರದರ್ಶನ, ವಾಣಿಜ್ಯ ಮಳಿಗೆ ಸಮಿತಿ ಅಧ್ಯಕ್ಷ ಅಜಯ ಸಿಂಗ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 9:04 IST
Last Updated 29 ಜನವರಿ 2020, 9:04 IST
ಕಲಬುರ್ಗಿಯಲ್ಲಿ ಮಂಗಳವಾರ ಶಾಸಕ ಡಾ.ಅಜಯ ಸಿಂಗ್‌ ಅವರು ಮಳಿಗೆ ಸಮಿತಿಯ ಸಭೆ ನಡೆಸಿದರು
ಕಲಬುರ್ಗಿಯಲ್ಲಿ ಮಂಗಳವಾರ ಶಾಸಕ ಡಾ.ಅಜಯ ಸಿಂಗ್‌ ಅವರು ಮಳಿಗೆ ಸಮಿತಿಯ ಸಭೆ ನಡೆಸಿದರು   

ಕಲಬುರ್ಗಿ: ‘ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಸ್ಥಾಪನೆಗೆ ಹೆಚ್ಚಿನ ಅವಕಾಶ ನೀಡಬೇಕು. ಅಲ್ಲದೇ ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಲ್ಲೂ ಪುಸ್ತಕ ಓದುವ ಅಭಿರುಚಿ ಬೆಳೆಸಲು ಮುಂದಾಗಬೇಕು’ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಸಮಿತಿಯ ಅಧ್ಯಕ್ಷ, ಶಾಸಕ ಡಾ.ಅಜಯ ಸಿಂಗ್ ಹೇಳಿದರು.

ನಗರದಲ್ಲಿ ಮಂಗಳವಾರ ಜರುಗಿದ ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈಗಾಗಲೇ 583 ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳ ನೋಂದಣಿಯಾಗಿವೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಿಂದ 176 ಹಾಗೂ ಕಲಬುರ್ಗಿ ಜಿಲ್ಲೆಯಿಂದ 205 ಪುಸ್ತಕ ಮಳಿಗೆಗಳು ನೋಂದಣಿಯಾಗಿವೆ. 150 ಬೆಂಗಳೂರು ಕೇಂದ್ರದಿಂದ ಹಾಗೂ ಕಲಬುರ್ಗಿ ಜಿಲ್ಲೆಯಿಂದ 34 ವಾಣಿಜ್ಯ ಮಳಿಗೆಗಳು ನೋಂದಣಿಯಾಗಿವೆ. ಇನ್ನುಳಿದಂತೆ ಚಿತ್ರಕಲಾ ಪ್ರದರ್ಶನಕ್ಕೆ 100 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಪುಸ್ತಕಗಳನ್ನು ಶೇ 50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ
ಮಾಡಲಾಗುತ್ತದೆ’ ಎಂದರು.

ADVERTISEMENT

‘ಜಿಲ್ಲೆಯ ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ, ಸೂಫಿ ಸಂತರ, ದಾಸರ ವಚನಗಳ ಕುರಿತು ಪುಸ್ತಕಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು. ಆದ್ದರಿಂದ ಸಮ್ಮೇಳನಕ್ಕೆಬರುವ ಸಾರ್ವಜನಿಕರು, ಸಾಹಿತ್ಯಾಸಕ್ತರು ಪುಸ್ತಕಗಳನ್ನು ಖರೀದಿಸಬಹುದು’ ಎಂದು ಅವರು ಹೇಳಿದರು.

ಮಳಿಗೆ ಸಮಿತಿಯ ಕಾರ್ಯಾಧ್ಯಕ್ಷ ಡಾ.ಶರಣಪ್ಪ ಬಿ.ಸತ್ಯಂಪೇಟ ಮಾತನಾಡಿ, ‘ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳ ಸಮಿತಿ ಸದಸ್ಯರಿಗೆ ಹಾಗೂ ಸ್ವಯಂ ಸೇವಕರಿಗೆ ಬ್ಯಾಡ್ಜ್ ಮತ್ತು ಪಾಸ್‌ಗಳನ್ನು ವಿತರಿಸಬೇಕು. ಅಲ್ಲದೇ ಸ್ವಯಂ ಸೇವಕರಿಗೆ ಟಿ–ಶರ್ಟ್, ಟೋಪಿಗಳನ್ನು ನೀಡುವ ವ್ಯವಸ್ಥೆ ಮಾಡಬೇಕು. ಮಳಿಗೆಗಳಿಗೆ ಮೂರು ದಿನಗಳವರೆಗೆ ಊಟ, ಉಪಾಹಾರ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಅವರು ಹೇಳಿದರು.

‘ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಸಮಿತಿ ಸದಸ್ಯರು ಜಿಲ್ಲೆಯ ಎಲ್ಲಾ ಶಾಲಾ– ಕಾಲೇಜುಗಳಿಗೆ ತೆರಳಿ ಸಮ್ಮೇಳನದ ಕುರಿತು ಮಾಹಿತಿ ಒದಗಿಸಬೇಕು. ತಾಲ್ಲೂಕು ಮತ್ತು ಗ್ರಾಮ ಪಂಚಾಯಿಗಳಿಗೆ ಪತ್ರ ಬರೆದು ಸಮ್ಮೇಳನದಲ್ಲಿ ಭಾಗವಹಿಸುವಂತೆ ತಿಳಿಸಬೇಕು ಎಂದು ಸಮಿತಿ ಸದಸ್ಯರಿಗೆ ಸೂಚಿಸಿದರು.

ಸಮಿತಿ ಕಾರ್ಯಾಧ್ಯಕ್ಷರಾದ ಪಾರ್ವತಿ ರೆಡ್ಡಿ, ಕಾರ್ಯದರ್ಶಿಗಳಾದ ಅಜಯಕುಮಾರ, ಪರಶುರಾಮ ಕಟ್ಟಿಮನಿ, ರಾಜು ಜಿ.ತೆಗ್ಗೆಳ್ಳಿ, ಬಿ.ಸತೀಶ್ ಕುಮಾರ್, ಮಂಜುನಾಥ ಎ, ಬಸವರಾಜ ಮಂಗಲಗಿ, ಕಾಶಿನಾಥ ಅಂಬಲಗಿ ಹಾಗೂ ಸದಸ್ಯರಾದ ಸಂಜೀವ ಕುಮಾರ್ ಯಾಕಾಪೂರ, ಶಿವಶರಣಪ್ಪ, ಬಸವರಾಜ ವಾಲಿ, ರವೀಂದ್ರ ಮುಕ್ಕಾ, ಅರುಣಕುಮಾರ, ಅಂಕುಶ್ ಬಿ.ಶಾ, ಡಾ.ಸೋಮಣ್ಣ, ಡಾ.ಚಿ.ಸಿ.ನಿಂಗಣ್ಣ, ಶಿವಣ್ಣಗೌಡ ಪಾಟೀಲ, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.