ADVERTISEMENT

ಕನ್ನಡ ಶಾಲೆ ಮುಚ್ಚದಿರುವ ನಿರ್ಧಾರ ಕೈಗೊಳ್ಳಲಿ

ಸಾಹಿತ್ಯ ಸಮ್ಮೇಳನದ ಸಮಾರೋಪ; ಹಿರಿಯ ಕವಿ ಜರಗನಹಳ್ಳಿ ಶಿವಶಂಕರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 15:42 IST
Last Updated 9 ಡಿಸೆಂಬರ್ 2018, 15:42 IST
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಿರಿಯ ಕವಿ ಜರಗನಹಳ್ಳಿ ಶಿವಶಂಕರ (ಎಡದಿಂದ ಎರಡನೆಯವರು) ಹಾಗೂ ಕಾಂಗ್ರೆಸ್ ಮುಖಂಡ ಡಾ. ಶರಣಪ್ರಕಾಶ ಪಾಟೀಲ ಸಮಾಲೋಚನೆಯಲ್ಲಿ ತೊಡಗಿದ್ದರು
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಿರಿಯ ಕವಿ ಜರಗನಹಳ್ಳಿ ಶಿವಶಂಕರ (ಎಡದಿಂದ ಎರಡನೆಯವರು) ಹಾಗೂ ಕಾಂಗ್ರೆಸ್ ಮುಖಂಡ ಡಾ. ಶರಣಪ್ರಕಾಶ ಪಾಟೀಲ ಸಮಾಲೋಚನೆಯಲ್ಲಿ ತೊಡಗಿದ್ದರು   

ಕಲಬುರ್ಗಿ: ‘ರಾಜ್ಯ ಸರ್ಕಾರವು ಕನ್ನಡ ಶಾಲೆಗಳನ್ನು ಮುಚ್ಚದಿರುವ ನಿರ್ಧಾರ ಕೈಗೊಳ್ಳಬೇಕು. ಯಾವ ಕಾರಣಕ್ಕೂ, ಯಾವ ಶಾಲೆಗಳನ್ನೂ ಮುಚ್ಚಬಾರದು’ ಎಂದು ಹಿರಿಯ ಕವಿ ಜರಗನಹಳ್ಳಿ ಶಿವಶಂಕರ ಒತ್ತಾಯಿಸಿದರು.

ನಗರದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಭಾನುವಾರ ಜರುಗಿದ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜ್ಞಾನ ಎಲ್ಲಿ ಸಿಗುತ್ತದೆ ಎಂಬುದು ಬಹಳ ಮುಖ್ಯ. ಹೀಗಾಗಿ 12ನೇ ಶತಮಾನದಲ್ಲಿ ನಾಡಿನ ವಿವಿಧೆಡೆಯಿಂದ ವಚನಕಾರರು ಅನುಭವ ಮಂಟಪಕ್ಕೆ ಬಂದು ಸೇರಿದ್ದರು. 12ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿಯಷ್ಟು ದೊಡ್ಡ ಕ್ರಾಂತಿ ಎಲ್ಲಿಯೂ ನಡೆದಿಲ್ಲ. ಆಗ ಜ್ಞಾನದಾಹವಿತ್ತು, ಅದಕ್ಕೆಂದು ಹುಡುಕಿಕೊಂಡು ಬಂದಿದ್ದರು. ಇದೇ ರೀತಿ ಸರ್ಕಾರಿ ಶಾಲೆಗಳಿಗೂ ಬಡ ಮಕ್ಕಳು ಕೂಡ ಜ್ಞಾನಾರ್ಜನೆಗಾಗಿ ಬರುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಆಸ್ತಿ, ಅಧಿಕಾರ ತಾವಾಗಿಯೇ ಬರುತ್ತವೆ. ಆದರೆ, ಗುಣ, ಸಂಸ್ಕೃತಿಯನ್ನು ನಾವಾಗಿಯೇ ಬೆಳೆಸಿಕೊಳ್ಳಬೇಕು. ಈ ಕೆಲಸ ಮನೆಯಿಂದಲೇ ಆರಂಭವಾಗಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ಸಾಹಿತ್ಯ ಕಡೆಗಣನೆಗೆ ಒಳಗಾಗಿದೆ. ಇಂತಹ ಸಂದರ್ಭದಲ್ಲಿ ಡಾ. ನಾಗಾಬಾಯಿ ಬುಳ್ಳಾ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷೆಯನ್ನಾಗಿ ಮಾಡಿರುವುದು ಸಂತಸ ತಂದಿದೆ’ ಎಂದರು.

‘ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ, ಜವಾಬ್ದಾರಿ ಮಹತ್ವದ್ದಾಗಿದೆ. ಆದರೆ, ಟಿಆರ್‌ಪಿಗೋಸ್ಕರ ಮಾಧ್ಯಮಗಳು ಇಂದು ಏನೇನೋ ತೋರಿಸುತ್ತಿವೆ. ಜ್ಯೋತಿಷ್ಯ, ನಗರ ಕೇಂದ್ರೀತ ಅಪರಾಧಗಳು ರಾರಾಜಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ನಾಗಾಬಾಯಿ ಬುಳ್ಳಾ ಮಾತನಾಡಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಪಿ.ಎಸ್.ಮಾಲಿಪಾಟೀಲ ಬಳಬಟ್ಟಿ, ಸಂಗನಗೌಡ ಎಸ್.ಬಿರಾದಾರ, ಡಾ. ಕೆ.ಎಸ್.ಬಂಧು, ಬಸವರಾಜ ಮಂಟಗಿ, ವೀರಣ್ಣ ಶಿವಪುರ, ವಾಸುದೇವ ಮುಂಡರಗಿ, ಧನಶೆಟ್ಟಿ ಸಕ್ರಿ, ವಿಷ್ಣು ಪೇಂಟರ್ ಜಡಿ, ನಾಗಪ್ಪ ಬೆಳಮಗಿ, ಮುನೀರ್ ಪಟೇಲ್, ಸೈಬಣ್ಣ ಪೂಚಾಲಿ, ಮಲ್ಲಿಕಾರ್ಜುನ ಮಡಿವಾಳ, ಶಿವಲಿಂಗಪ್ಪ ಮೂಲಗೆ, ಬಿ.ಎಚ್.ಭಜಂತ್ರಿ, ಬಸವರಾಜ ಹೂಗಾರ, ಭಗವಂತರಾವ ದೀಕ್ಷಿತ್, ಡಾ. ವಾಸುದೇವ ಕುಲಕರ್ಣಿ, ರೇವಣಸಿದ್ದಪ್ಪ ಸಾಹು, ದತ್ತಣ್ಣ ಹಿರೋಳಿ, ಬಿ.ವಿ.ಚಕ್ರವರ್ತಿ, ಬೋರಮ್ಮ ಹಿರೇಮಠ, ಎಂ.ಎನ್.ಸುಗಂಧಿ, ಗುರುನಾಥ ಸೊನ್ನದ, ಐ.ಎಚ್.ಮುಲ್ಲಾ, ಡಾ. ಎಸ್.ಎಂ.ನೀಲಾ, ಮಹೇಶ ಎಸ್.ಧರಿ, ಮಲ್ಲಪ್ಪ ಹೊಸ್ಮನಿ, ಡಾ. ಎಂ.ಜಿ.ದೇಶಪಾಂಡೆ, ಶಂಕರ ಜಿ.ಹಿಪ್ಪರಗಿ, ಶಿವಶರಣಪ್ಪ ಪೊಲೀಸ್‌ ಪಾಟೀಲ, ಶಿವಶರಣಪ್ಪ ಕಮಲಾಪುರ, ಹಣಮಂತ ಕೊಟ್ರಗಸ್ತಿ, ಈರಣ್ಣ ಭೂತಪುರ, ವಿಜಯಕುಮಾರ ಮಳ್ಳಿ, ಅಣ್ಣಪ್ಪ ಜಿ.ಮೂಲಗೆ, ಮಂಜುನಾಥ ನಾಲವಾರಕರ್, ಮನೋಹರಕುಮಾರ ಬಿರನೂರ, ದತ್ತು ಎಚ್.ಭಾಸಗಿ ಅವರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಮುಖಂಡ ಡಾ. ಶರಣಪ್ರಕಾಶ ಪಾಟೀಲ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಇದ್ದರು.

ಧನಂಜಯ ಹೊಸ್ಮನಿ ಸ್ವಾಗತಿಸಿದರು. ವಿಜಯಲಕ್ಷ್ಮಿ ರೆಡ್ಡಿ ನಿರೂಪಿಸಿ, ಸಂತೋಷ ಪತಂಗೆ ವಂದಿಸಿದರು.

ಸಮ್ಮೇಳನದ ನಿರ್ಣಯಗಳು
*ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನವನ್ನು ಕಂದಾಯ ವಿಭಾಗವಾರು ವಿಂಗಡಿಸಿ ಹಂಚಿಕೆ ಮಾಡಬೇಕು

*ನದಿ–ಹಳ್ಳಗಳು ಅಳಿದು ಹೋಗುತ್ತಿರುವುದರಿಂದ ಅವುಗಳ ಹೂಳೆತ್ತುವ ಕಾರ್ಯ ತ್ವರಿತಗೊಳಿಸಬೇಕು. ಸಿ.ಸಿ ರಸ್ತೆ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು.

*ಜಿಲ್ಲೆಯ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.

*ಕಲಬುರ್ಗಿ ರೈಲ್ವೆ ವಿಭಾಗೀಯ ಕೇಂದ್ರವನ್ನು ಕೂಡಲೇ ಅನುಷ್ಠಾನಗೊಳಿಸಬೇಕು.

*ರೈತರಿಗೆ ಸಾಲ ಮನ್ನಾ ಯೋಜನೆಗಳಿಗಿಂತಲೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಮತ್ತು ಅತಿ ಸಣ್ಣ ರೈತರಿಗೆ ಮಾಸಾಶನ ಜಾರಿಗೊಳಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.