ADVERTISEMENT

ಚಿಂಚೋಳಿ: ಸಾಲೇಬೀರನಹಳ್ಳಿ ಕೆರೆ ಭರ್ತಿ, ನಾಲೆಗಳಿಗೆ ನೀರು ಬಿಡುಗಡೆ

ಎಡ ಹಾಗೂ ಬಲದಂಡೆ ನಾಲೆಗಳಿಗೆ ನೀರು; ರೈತರಲ್ಲಿ ಸಂಭ್ರಮ

ಜಗನ್ನಾಥ ಡಿ.ಶೇರಿಕಾರ
Published 15 ಸೆಪ್ಟೆಂಬರ್ 2020, 7:22 IST
Last Updated 15 ಸೆಪ್ಟೆಂಬರ್ 2020, 7:22 IST
ಚಿಂಚೋಳಿ ತಾಲ್ಲೂಕಿನ ಸಾಲೇಬೀರನಹಳ್ಳಿ ಕೆರೆ ತುಂಬಿ ಹರಿಯುತ್ತಿರುವುದು
ಚಿಂಚೋಳಿ ತಾಲ್ಲೂಕಿನ ಸಾಲೇಬೀರನಹಳ್ಳಿ ಕೆರೆ ತುಂಬಿ ಹರಿಯುತ್ತಿರುವುದು   

ಚಿಂಚೋಳಿ: ರಾಜ್ಯದ ಎರಡನೇ ಅತಿ ದೊಡ್ಡ ಸಣ್ಣ ನೀರಾವರಿ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನ ಸಾಲೇಬೀರನಹಳ್ಳಿ ಕೆರೆ ಭರ್ತಿಯಾಗಿದೆ. ಕಳೆದ ವರ್ಷ ಶೇ 25ರಷ್ಟು ಕೂಡ ಭರ್ತಿಯಾಗದ ಈ ಕೆರೆ ಪ್ರಸಕ್ತ ವರ್ಷ ಭರ್ತಿಯಾಗಿ ಹೆಚ್ಚುವರಿ ನೀರು ಗೇಟಿನ ಮೇಲ್ಭಾಗದಿಂದ ಹರಿದು ಹೋಗುತ್ತಿದೆ.

1980ರ ದಶಕದಲ್ಲಿ ನಿರ್ಮಾಗೋಂಡ ಈ ನೀರಾವರಿ ಯೋಜನೆಯಿಂದ 1950 ಹೆಕ್ಟೇರ್ ಜಮೀನಿಗೆ ನೀರುಣಿಸಬಹುದಾಗಿದೆ. ಸದ್ಯ ಎಡದಂಡೆಯ 6.13 ಕಿ.ಮೀ, ಬಲದಂಡೆ 9.5 ಕಿ.ಮೀ ಮುಖ್ಯ ಕಾಲುವೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿದೆ. ಹೂಳನ್ನು ತೆಗೆದು ಹಿಂಗಾರು ಕೃಷಿಗೆ ರೈತರಿಗೆ ನೆರವಾಗಬೇಕು ಎಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪ್ರಭುಲಿಂಗ ಲೇವಡಿ ಒತ್ತಾಯಿಸಿದರು.

65 ಹೆಕ್ಟೇರ್ ವಿಸ್ತಾರವಾದ ಕೆರೆಯಲ್ಲಿ 0.25 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದಾಗಿದೆ. ಈ ಕೆರೆ ತುಂಬಿದ್ದರಿಂದ ಸಾಲೇಬೀರನಹಳ್ಳಿ, ಶೀಕಾರಮೋತಕಪಳ್ಳಿ, ಮರಪಳ್ಳಿ, ಹಸರಗುಂಡಗಿ, ತುಮಕುಂಟಾ, ಯಂಪಳ್ಳಿ ಗ್ರಾಮಗಳ ರೈತರಿಗೆ ವರದಾನವಾಗಿದೆ.

ADVERTISEMENT

21 ಕೆರೆಗಳು ಭರ್ತಿ: ನೂತನ ಕಾಳಗಿ ತಾಲ್ಲೂಕಿನ ಮೂರು ಕೆರೆಗಳು ಹಾಗೂ ಚಿಂಚೋಳಿ ತಾಲ್ಲೂಕಿನ 18 ಕೆರೆಗಳು ಸೇರಿ ಎಲ್ಲಾ 21 ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿವೆ. ಕೋಡ್ಲಿ ಅಲ್ಲಾಪುರ, ಮುಕರಂಬಾ ಮತ್ತು ಹುಲ್ಸಗೂಡ ಹಾಗೂ ಸಾಲೇಬೀರನಹಳ್ಳಿ, ಚಿಕ್ಕಲಿಂಗದಳ್ಳಿ, ಪಂಗರಗಾ, ಖಾನಾಪುರ, ಐನಾಪುರ ಹಳೆ ಮತ್ತು ಹೊಸ, ತುಮಕುಂಟಾ, ದೋಟಿಕೊಳ, ಹೂಡದಳ್ಳಿ, ಯಲಕಪಳ್ಳಿ, ಲಿಂಗಾನಗರ, ಅಂತಾವರಂ, ಧರ್ಮಾಸಾಗರ, ನಾಗಾಈದಲಾಯಿ,ಕೊಳ್ಳೂರು, ಚಿಂದಾನೂರ, ಹಸರಗುಂಡಗಿ, ಚಂದನ ಕೇರಾ, ಕೆರೆಗಳು ಭರ್ತಿಯಾಗಿವೆ.

ಇವುಗಳಿಂದ 7,178 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಬಹುದಾಗಿದ್ದು ಕೆಲವು ಕಡೆ ಕಾಲುವೆಗಳು ಸುಸ್ಥಿತಿಯಲ್ಲಿರದ ಕಾರಣ ನಿರೀಕ್ಷಿತ ಮಟ್ಟದಲ್ಲಿ ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ. ಬಹುತೇಕ ಕೆರೆಗಳ ಕಾಲುವೆಗಳು ಹಾಗೂ ಕೆರೆ ಬಂಡ್ ಬಲವರ್ಧನೆಗೆ ಕಾಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.