ADVERTISEMENT

ಕಾಗಿಣಾ ಪ್ರವಾಹದಲ್ಲಿ ಬಂದ ಮರಳು ಆಡಳಿತದ ವಶಕ್ಕೆ

ಮರಳಿಗಾಗಿ ನಡೆದ ಪೈಪೋಟಿ, ಮೂರು ದಿನ ಪೊಲೀಸ್‌ ಕಾವಲು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 20:15 IST
Last Updated 19 ಅಕ್ಟೋಬರ್ 2020, 20:15 IST
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿಯ ಪ್ರವಾಹದಲ್ಲಿ ಹರಿದು ಬಂದು ಸಂಗ್ರಹಗೊಂಡ ಮರಳು.
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿಯ ಪ್ರವಾಹದಲ್ಲಿ ಹರಿದು ಬಂದು ಸಂಗ್ರಹಗೊಂಡ ಮರಳು.   

ಚಿತ್ತಾಪುರ: ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿಯ ಪ್ರವಾಹದಲ್ಲಿ ಮರಳು ಹರಿದು ಬಂದು ಸೇತುವೆಯ ಹತ್ತಿರ ಸಂಗ್ರಹಗೊಂಡಿದೆ.

ಅ.13ರ ರಾತ್ರಿಯಿಂದ ಅ.16ರ ಬೆಳಗಿನವರೆಗೆ ನದಿಯು ಪ್ರವಾಹದಿಂದ ತುಂಬಿ ಹರಿದು ತನ್ನ ಗಡಿ ಮೀರಿ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಭೋರ್ಗರೆಯುತ್ತಾ ಹರಿದಿತ್ತು. ಪ್ರವಾಹದ ರಭಸಕ್ಕೆ ನದಿ ದಂಡೆಯ ಜಮೀನುಗಳಲ್ಲಿನ ಮರಳು ಹರಿದು ಬಂದು ಸೇತುವೆಯ ಹತ್ತಿರ ತಗ್ಗು ಪ್ರದೇಶದಲ್ಲಿ ಮತ್ತು ರಸ್ತೆಯ ಮೇಲೆ ಸಂಗ್ರಹಗೊಂಡಿತ್ತು.

ಸಂಗ್ರಹಗೊಂಡ ಮರಳನ್ನು ಕಂಡು ಕೆಲವರು ಅಕ್ರಮವಾಗಿ ಸಾಗಾಟ ಮಾಡಲು ಮುಂದಾಗಿದ್ದರು. ಪಕ್ಕದ ಜಮೀನು ಮಾಲೀಕರು ಮರಳು ನಮಗೆ ಸೇರಿದ್ದು ಎಂದು ತಕರಾರು ಮಾಡಿದ್ದರು. ವಿಷಯ ಮಾಡಬೂಳ ಪೊಲೀಸ್ ಠಾಣೆಗೆ ತಲುಪಿ ಎರಡು ಟ್ರ್ಯಾಕ್ಟರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಮೂರು ದಿನ ಹಗಲು ರಾತ್ರಿ ಸೇತುವೆ ಹತ್ತಿರ ಮರಳು ಸಾಗಾಟ ಆಗದಂತೆ ನಿಗಾ ವಹಿಸಿದ್ದರು.

ADVERTISEMENT

ನದಿಯ ಪ್ರವಾಹದಲ್ಲಿ ಹರಿದು ಬಂದಿರುವ ಮರಳು ಸರ್ಕಾರಕ್ಕೆ ಸೇರಿದ್ದು. ಅದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನಕ್ಕೆ ಒಪ್ಪಿಸಿ ರಾಜಧನದಲ್ಲಿ ಮಾರಾಟ ಮಾಡಲು ಸರ್ಕಾರಿ ಜಾಗದಲ್ಲಿ ದಾಸ್ತಾನು ಮಾಡಲು ಸೂಚಿಸಲಾಗಿತ್ತು. ಭಾನುವಾರ ರಾತ್ರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಉಸ್ತುವಾರಿಯಲ್ಲಿ ಮರಳನ್ನು ಟಿಪ್ಪರ್ ಮೂಲಕ ಬೇರೆಡೆಗೆ ಸಾಗಿಸಲಾಗಿದೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದ್ದಾರೆ.

ಸೇತುವೆ ಹತ್ತಿರ ನೈಸರ್ಗಿಕವಾಗಿ ಸಂಗ್ರಹಗೊಂಡಿದ 6 ಬ್ರಾಸಿನ 7 ಟಿಪ್ಪರ್ ಹಾಗೂ 8 ಬ್ರಾಸಿನ 4 ಟಿಪ್ಪರ್, ಒಟ್ಟು 11 ಟಿಪ್ಪರ್ ಮರಳನ್ನು ಸ್ಥಳದಿಂದ ಬೇರೆಡೆಗೆ ಸಾಗಿಸಿ ದಾಸ್ತಾನು ಮಾಡಲಾಗಿದೆ. ಅದನ್ನು ಮರಳು ನಿಯಮದಂತೆ ರಾಜಧನದಲ್ಲಿ ಮಾರಾಟ ಮಾಡಲು ಸಂಬಂದಿತ ಇಲಾಖೆಯ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಹದಿಂದ ಹರಿದು ಬಂದ ಮರಳಿನ ರಾಶಿ ನಮ್ಮ ಹೊಲದ ಪಕ್ಕದಲ್ಲಿ ಸಂಗ್ರಹಗೊಂಡಿದ್ದು, ಅದು ನಮ್ಮದು ಎನ್ನುತ್ತಿದ್ದಾರೆ ಹೊಲದ ಮಾಲೀಕರು. ರಸ್ತೆಯ ಮೇಲೆ ಸಂಗ್ರಹಗೊಂಡಿದ್ದರಿಂದ ಅದು ಯಾರಿಗೂ ಸೇರಿಲ್ಲ ಎನ್ನುತ್ತಾರೆ ಜನರು. ಅಂತಹ ಮರಳು ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿದ ಆಡಳಿತ ಮರಳು ವಶಕ್ಕೆ ಪಡೆದು ದಾಸ್ತಾನು ಮಾಡಿಕೊಂಡಿದೆ.

ಪ್ರವಾಹದಿಂದ ಹರಿದು ಬಂದು ನದಿ ದಂಡೆಯ ಕೆಲವು ಹೊಲಗಳಲ್ಲಿ ಸಂಗ್ರಹಗೊಂಡ ಮರಳು ವಶಕ್ಕೆ ಪಡೆದು ದಾಸ್ತಾನು ಮಾಡಿಕೊಳ್ಳಲಾಗುವುದು ಎಂದು ತಹಶೀಲ್ದಾರ್ಉಮಾಕಾಂತ ಹಳ್ಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.