
ಕಲಬುರಗಿ: ಈ ಭಾಗದ ಭಕ್ತರ ಆರಾಧ್ಯ ದೈವ ಶರಣಬಸವೇಶ್ವರರ 204 ನೇ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ ಮಾ. 8ರಂದು ಜರುಗಲಿದೆ. ಹೀಗಾಗಿ ಇಲ್ಲಿನ ದೇವಸ್ಥಾನದ ಆವರಣದಲ್ಲಿ ತೇರು ಕಟ್ಟುವ ಕಾರ್ಯ ಭರದಿಂದ ಸಾಗಿದೆ.
ಬಹುತೇಕ ದೇವಸ್ಥಾನಗಳಲ್ಲಿ ಒಮ್ಮೆ ತೇರು ನಿರ್ಮಿಸಿದರೆ ಹಲವು ವರ್ಷಗಳ ಕಾಲ ರಥೋತ್ಸವಕ್ಕೆ ಅದನ್ನೇ ಬಳಸಲಾಗುತ್ತದೆ. ಆದರೆ ಕಲಬುರಗಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಜಾತ್ರೆಯ ಸಂದರ್ಭದಲ್ಲಿ ಹೊಸದಾಗಿ ತೇರು ಕಟ್ಟುವುದು ಇಲ್ಲಿನ ವಿಶೇಷ.
60 ಅಡಿ ಎತ್ತರದ, 20X20 ಅಡಿ ವಿಸ್ತೀರ್ಣದ ಭವ್ಯ ರಥವನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಪಶ್ಚಿಮ ಘಟ್ಟದಲ್ಲಿ ದೊರೆಯುವ ಕರಿಮತ್ತಿ ಮರದ ಕಟ್ಟಿಗೆ ಮತ್ತು ನಾರಿನಿಂದ ತಯಾರಿಸಿದ ಹಗ್ಗದ ಮೂಲಕ ಸುಮಾರು 30 ಜನರ ತಂಡ ತೇರು ಕಟ್ಟುವ ಕಾರ್ಯ ನಿರ್ವಹಿಸುತ್ತಿದೆ.
‘ಸುಮಾರು ನಾಲ್ಕು ತಲೆಮಾರಿನಿಂದ ಶರಣಬಸವೇಶ್ವರರ ಜಾತ್ರೆ ಸಂದರ್ಭದಲ್ಲಿ ತೇರು ಕಟ್ಟುವ ಕಾರ್ಯದಲ್ಲಿ ಭಾಗಿಯಾಗುವ ಸೌಭಾಗ್ಯ ನಮ್ಮ ಕುಟುಂಬಕ್ಕೆ ದೊರೆತಿದೆ. 12ನೇ ವಯಸ್ಸಿನಲ್ಲಿ ತಂದೆಯೊಂದಿಗೆ ತೇರು ಕಟ್ಟಲು ಬರಲು ಪ್ರಾರಂಭಿಸಿದ್ದ ನನಗೆ 60 ವರ್ಷಗಳಿಂದ ಶರಣರ ಸೇವೆ ಮಾಡುತ್ತಿರುವ ತೃಪ್ತಿ ಇದೆ’ ಎನ್ನುತ್ತಾರೆ ಹಗ್ಗ ಕಟ್ಟುವ ಜವಾಬ್ದಾರಿ ಹೊತ್ತಿರುವ 73 ವಯಸ್ಸಿನ ಬಾಬುರಾವ್ ಕಟ್ಟಿಮನಿ.
‘ಈ ಮೊದಲು ಸುತ್ತಲಿನ ಹಳ್ಳಿಗಳಲ್ಲಿ ಪುಂಡಿ ಸೊಪ್ಪು ಬೆಳೆಯುತ್ತಿದ್ದರು. ಆದರೆ ಪ್ರಸುತ್ತ ರೈತರು ವಾಣಿಜ್ಯ ಬೆಳೆಗಳ ಕಡೆಗೆ ವಾಲಿದ್ದಾರೆ. ಹೀಗಾಗಿ ಸುಮಾರು 10 ಕ್ವಿಂಟಲ್ ನಾರಿನ ಹಗ್ಗವನ್ನು ಹೊರಗಿನಿಂದಲೇ ಖರಿದಿಸಲಾಗಿದೆ’ ಎಂದರು.
‘ಕರಿಮತ್ತಿ ಮರದ ದಿಮ್ಮಿಯಿಂದ ರಥಕ್ಕೆ ಅವಶ್ಯವಿರುವ ಅಳತೆಯಲ್ಲಿ ತುಂಡುಗಳನ್ನು ತಯಾರಿಸಲಾಗುತ್ತದೆ. ನಂತರ ಅಗಸಿಯಿಂದ ತಯಾರಿಸಿದ ಎಣ್ಣೆಯನ್ನು ಲೇಪಿಸಿ ಬಿಸಿಲಿಗೆ ಇಡಲಾಗುತ್ತದೆ. ನಂತರ ಅವುಗಳ ಸ್ಥಾನಕ್ಕೆ ಅನುಗುಣವಾಗಿ ಪ್ರತಿ ಕಂಬಕ್ಕೂ ಸಂಖ್ಯೆಯನ್ನು ನೀಡುತ್ತೇವೆ’ ಎಂದು ಪ್ರಕಾಶ ಬಡಿಗೇರ ಮಾಹಿತಿ ನೀಡಿದರು.
‘ಶರಣಬಸವೇಶ್ವರ ಜಾತ್ರೆಯ ಮಹಾರಥವನ್ನು ಒಟ್ಟು ಒಂಬತ್ತು ಅಂತಸ್ತುಗಳಲ್ಲಿ ಕಟ್ಟಲಾಗುತ್ತದೆ. ಮೊದಲನೇ ಅಂತಸ್ತನಲ್ಲಿ ಲಂಬವಾಗಿ 20 ಕಟ್ಟಿಗೆಯ ಕಂಬಗಳನ್ನು, ಎರಡರಿಂದ ಐದನೇ ಅಂತಸ್ತುಗಳಲ್ಲಿ ತಲಾ 16, ಆರನೇ ಹಂತದಲ್ಲಿ 12 ಮತ್ತು ಏಳನೇ ಅಂತಸ್ತನಲ್ಲಿ ನಾಲ್ಕು ಕಟ್ಟಿಗೆ ಕಂಬಗಳನ್ನು ಲಂಬವಾಗಿ ಬಳಸಲಾಗುತ್ತದೆ. ಎಂಟನೇ ಹಂತದಲ್ಲಿ ಗೋಳಾಕಾರ ಮತ್ತು ಒಂಬತ್ತನೇ ಅಂತಸ್ತನಲ್ಲಿ ಕಳಸವನ್ನು ಕಟ್ಟಲಾಗುತ್ತದೆ’ ಎಂದು ವಿವರಿಸಿದರು.
‘ರಥದ ನಾಲ್ಕು ಚಕ್ರಗಳು ಎಂಟು ಅಡಿಯ ವ್ಯಾಸ ಹೊಂದಿವೆ. ಈಗಲೂ ರಥದ ಚಕ್ರಗಳಿಗೆ ಅಡುಗೆಗೆ ಬಳಸುವ ಎಣ್ಣೆಯನ್ನು ಹಾಕಲಾಗುತ್ತದೆ ಹೊರತು ಯಾವುದೇ ರೀತಿಯ ಗ್ರೀಸ್ ಮಾದರಿಯ ಆಧುನಿಕ ಪದಾರ್ಥಗಳನ್ನು ಬಳಸುವುದಿಲ್ಲ’ ಎಂದು ರಥ ಕಟ್ಟುವ ತಂಡದ ಸದಸ್ಯ ಸಂಗಮೇಶ ರಂಜೋಳ ತಿಳಿಸಿದರು.
‘ಪ್ರತಿ ವರ್ಷವೂ ಹೋಳಿ ಹುಣ್ಣಿಮೆಯ ಮರುದಿನದಿಂದ ತೇರು ಕಟ್ಟುವ ಕಾರ್ಯ ಪ್ರಾರಂಭಿಸುವುದು ವಾಡಿಕೆ. ಆದರೆ ಈ ಬಾರಿ ಹೊಸ ಕಟ್ಟಿಗೆಗಳು ಬಳಸುತ್ತಿರುವುದರಿಂದ ವಿಳಂಬ ಮತ್ತು ಅವಘಡಗಳು ಸಂಭವಿಸಬಾರದು ಎಂಬ ಮುಂಜಾಗ್ರತೆಯಿಂದ ಒಂದು ವಾರ ಮೊದಲೇ ತೇರು ಕಟ್ಟುವ ಕಾರ್ಯವನ್ನ ಪ್ರಾರಂಭಿಸಲಾಗಿದೆ’ ಎನ್ನುತ್ತಾರೆ ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮತ್ತು ತೇರು ಕಟ್ಟುವ ಕಾರ್ಯದ ಉಸ್ತುವಾರಿ ಬಾಬುರಾವ್ ಚವ್ಹಾಣ.
‘₹40 ಲಕ್ಷ ಮೌಲ್ಯದ ಕರಿಮತ್ತಿ ಮರದ ದಿಮ್ಮಿ ಬಳಕೆ’
‘ಪಶ್ಚಿಮ ಘಟ್ಟದಲ್ಲಿ ದೊರೆಯುವ ಕರಿಮತ್ತಿ ಎಂಬ ವಿಶೇಷ ಮರದ 1800 ಚದರ ಅಡಿ ದಿಮ್ಮಿಯನ್ನು ರಥ ಕಟ್ಟಲು ಬಳಸಲಾಗುತ್ತಿದ್ದು ಸುಮಾರು ₹40 ಲಕ್ಷ ಮೌಲ್ಯದ ಈ ದಿಮ್ಮಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಸಂಸ್ಥಾನಕ್ಕೆ ಭಕ್ತಿಯಿಂದ ಸಮರ್ಪಿಸಿದ್ದಾರೆ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದ್ದಾರೆ. ‘ಕರಿಮತ್ತಿ ಕಟ್ಟಿಗೆಯು ಅತ್ಯಂತ ಗಟ್ಟಿಯಾಗಿರುವುದರಿಂದ ರಥಕ್ಕೆ ಬಳಸಲಾಗುತ್ತಿದೆ. ಇದರ ಖರೀದಿಯನ್ನು ನಿಯಮಾನುಸಾರ ಸರ್ಕಾರದ ಡಿಪೊ ಮೂಲಕವೇ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.