ADVERTISEMENT

ಉತ್ತಮ ಆಹಾರ ಪದ್ಧತಿ ಮುಖ್ಯ: ನಾ.ಸೋಮೇಶ್ವರ

ಶರಣಬಸವ ವಿವಿ: ಪದವಿ ವಿದ್ಯಾರ್ಥಿಗಳಿಗೆ 21 ದಿನ ದೀಕ್ಷಾರಂಭ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:30 IST
Last Updated 1 ಆಗಸ್ಟ್ 2019, 14:30 IST
ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆರಂಭಿಸಿದ್ದ ದೀಕ್ಷಾರಂಭ (ಇಂಡೆಕ್ಷನ್) ಕಾರ್ಯಕ್ರಮದಲ್ಲಿ ಡಾ.ನಾ ಸೋಮೇಶ್ವರ, ಕುಲಪತಿ ಡಾ.ನಿರಂಜನ್ ನಿಷ್ಠಿ, ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಲಕ್ಷ್ಮಿ ಪಾಟೀಲ ಇದ್ದರು
ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆರಂಭಿಸಿದ್ದ ದೀಕ್ಷಾರಂಭ (ಇಂಡೆಕ್ಷನ್) ಕಾರ್ಯಕ್ರಮದಲ್ಲಿ ಡಾ.ನಾ ಸೋಮೇಶ್ವರ, ಕುಲಪತಿ ಡಾ.ನಿರಂಜನ್ ನಿಷ್ಠಿ, ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಲಕ್ಷ್ಮಿ ಪಾಟೀಲ ಇದ್ದರು   

ಕಲಬುರ್ಗಿ: ‘ಹಾನಿಕರ ಆಹಾರ ಸೇವನೆ ಮಾಡದೇ ವಿದ್ಯಾರ್ಥಿಗಳು ಉತ್ತಮ ಆಹಾರ ಪದ್ಧತಿ ಆಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಶಿಕ್ಷಣದಲ್ಲಿ ಯಶಸ್ಸು, ಗುರಿ ಸಾಧಿಸಬೇಕಾದರೆ ವಿದ್ಯಾರ್ಥಿಗಳು ಉತ್ತಮ ಅಧ್ಯಯನ ನಡೆಸಬೇಕು’ ಎಂದು ವ್ಯಕ್ತಿತ್ವ ವಿಕಸನ ಗುರು ಡಾ.ನಾ.ಸೋಮೇಶ್ವರ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ವಿಭಾಗಳಲ್ಲಿ ವಿವಿಧ ಕೋರ್ಸ್‍ಗಳಲ್ಲಿ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳಿಗೆ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 21 ದಿನಗಳ ದೀಕ್ಷಾರಂಭ (ಇಂಡೆಕ್ಷನ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶೈಕ್ಷಣಿಕ ಅನ್ವೇಷಣೆಯಲ್ಲಿ ಯಶಸ್ವಿಯಾಗಲು ಮತ್ತು ಉನ್ನತ ಶಿಕ್ಷಣ ಸಾಧಿಸಲು ದೈಹಿಕ ಆರೋಗ್ಯ ಕಾಪಾಡಿಕೊಂಡಷ್ಟೇ ಭಾವನಾತ್ಮಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು.ಸಮಗ್ರ ಆರೋಗ್ಯ ವಿಧಾನವನ್ನು ಯುವಜನರು ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

‘ಆಹಾರ ಪದ್ಧತಿ ವಿದ್ಯಾರ್ಥಿಯ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬಿರುತ್ತದೆ. ಇದರಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುವ ವಿವಿಧ ಕಂಪನಿಗಳು ತಯಾರಿಸುತ್ತಿರುವ ತಂಪು ಪಾನೀಯಗಳು, ಜಂಕ್ ಫುಡ್, ಕೇಕ್, ಬಿಳಿ ಬ್ರೆಡ್, ಐಸ್ ಕ್ರೀಮ್‍ಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ತರಕಾರಿ, ಹಣ್ಣುಗಳು ಸೇರಿದಂತೆ ಸಾತ್ವಿಕ ಆಹಾರ ಕೊಡಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳ ನಿರ್ಮಾಣ ಸಾಧ್ಯ’ ಎಂದರು.

ಮಕ್ಕಳ ಹಿಮೋಗ್ಲೋಬಿನ್ ಮಟ್ಟ 12ಕ್ಕಿಂತ ಕಡಿಮೆಯಾದರೆ ಅಧ್ಯಯನ ಗ್ರಹಿಕೆ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಹಿಮೋಗ್ಲೋಬಿನ್ ಮಟ್ಟ ವಿದ್ಯಾರ್ಥಿಗಳ ಗ್ರಹಿಕೆಯ ಶಕ್ತಿಗಳೊಂದಿಗೆ ನೇರ ಸಂಬಂಧ ಹೊಂದಿರುವುದರಿಂದ ಪೋಷಕರು ತಮ್ಮ ಮಕ್ಕಳ ಹಿಮೋಗ್ಲೋಬಿನ್ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸಲಹೆ ನೀಡಿದರು.

ಡಾ.ಸೋಮೇಶ್ವರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರಿಸಿ ಆರೋಗ್ಯ ಮತ್ತು ಅಭ್ಯಾಸಗಳಿಗೆ ಸಂಬಂಧಿಸಿದ ಅನುಮಾನಗಳನ್ನು ಪರಿಹರಿಸಿದರು.

ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ನಿಷ್ಠಿ ಮಾತನಾಡಿ, ‘ಶರಣಬಸವ ವಿವಿಯಲ್ಲಿ ಪಾರದರ್ಶಕ ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು. ದೇಶದಲ್ಲಿ ಯುವ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜಾಗಾತಿಕ ಮಟ್ಟದಲ್ಲಿ ಭಾರತೀಯ ಆರ್ಥಿಕ ವ್ಯವಸ್ಥೆ ಸುಧಾರಿಸಲಿದೆ. ಜಾಗತಿಕ ಮಟ್ಟದಲ್ಲೇ ಭಾರತ ದೇಶ ಉತ್ಪಾದಕರ ವಯಸ್ಸು ಹೆಚ್ಚಾಗಿದೆ. ಇದರಿಂದ ಬರುವ ದಿನದಲ್ಲಿ ಪ್ರತಿಯೊಂದು ವಲಯದಲ್ಲಿ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವ ಶಕ್ತಿ ಹೊಂದಿದೆ’ ಎಂದರು.

ಶರಣಬಸವ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ವಿವಿಯು 100 ವರ್ಷಗಳ ಶ್ರೀಮಂತ ಇತಿಹಾಸ ಹೊಂದಿದೆ. ಮತ್ತು 1930ರ ದಶಕದಲ್ಲಿ ಮೊದಲ ಬಾರಿಗೆ ಮಹಿಳೆಯರ ಶೈಕ್ಷಣಿಕ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಹೇಳಿದರು.

ರೇವತಿ ಪ್ರಾರ್ಥಿಸಿದರು. ಶಾಂತಕುಮಾರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.