
ಕಲಬುರಗಿ: ‘ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ಹೆಸರಿನಲ್ಲಿ ಈ ಬಾರಿ ಒಟ್ಟು ₹5 ಕೋಟಿ ಶಿಷ್ಯವೇತನ ನೀಡಲಾಗುತ್ತಿದೆ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಎಸ್.ಅಪ್ಪ ತಿಳಿಸಿದರು.
ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರವೇಶಕ್ಕಾಗಿ ನಡೆಸುವ ‘ಎಸ್‌ಬಿಆರ್ ಸಿಇಟಿ–2026’ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ 180 ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಮೂಲಕ ಶಿಷ್ಯವೇತನದ ಲಾಭ ಪಡೆಯಲಿದ್ದಾರೆ’ ಎಂದರು.
‘ಟಾಪ್ 60 ವಿದ್ಯಾರ್ಥಿಗಳಿಗೆ ವಸತಿ ಹಾಗೂ ಕಾಲೇಜಿನ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇರುತ್ತದೆ. ನಂತರದ 60 ವಿದ್ಯಾರ್ಥಿಗಳು ಹಾಸ್ಟೆಲ್ ಹಾಗೂ ಕಾಲೇಜಿನ ಶುಲ್ಕದಲ್ಲಿ ಶೇ 50ರಷ್ಟು, ತದನಂತರದ 60 ವಿದ್ಯಾರ್ಥಿಗಳು ಶೇ 25ರಷ್ಟು ವಿನಾಯಿತಿ ಪಡೆಯುತ್ತಾರೆ’ ಎಂದು ವಿವರಿಸಿದರು.
‘ನಮ್ಮ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಆರ್‌ಬಿಐ, ಕೆಎಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ರಾಷ್ಟ್ರದ ಸೇವೆಯಲ್ಲಿ ತೊಡಗಿದ್ದಾರೆ. ಸೈನಿಕರಾಗಿ ರಕ್ಷಣಾ ಸೇವೆಯಲ್ಲಿದ್ದಾರೆ. ಈ ವರ್ಷ ಎಂಬಿಬಿಎಸ್ 322, ಬಿಡಿಎಸ್, ಬಿಎಚ್‌ಎಂಎಸ್ ಮತ್ತು ಬಿಎಎಂಎಸ್ 126, ವೆಟರ್ನರಿ/ ಬಿಎಸ್‌ಸಿ ಅಗ್ರಿ 74, ಜೆಇಇ ಮೇನ್ಸ್ 244, ಜೆಇಇ ಅಡ್ವಾನ್ಸ್ಡ್ 35, ಬಿಟೆಕ್/ಬಿಇ 550 ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ ಅಭ್ಯಾಸಕ್ಕಾಗಿ ಪ್ರವೇಶ ಪಡೆದಿದ್ದಾರೆ’ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ಕಳೆದ ಬಾರಿ 120 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗಿತ್ತು. ಈ ಬಾರಿ ಶಿಷ್ಯವೇತನವನ್ನು ₹3.5 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸಲಾಗಿದೆ. ಶಿಷ್ಯವೇತನದಿಂದ ಹಳ್ಳಿಗಳ, ಕೂಲಿಕಾರ್ಮಿಕರ ಮಕ್ಕಳು ಕೂಡ ನಮ್ಮ ಕಾಲೇಜಿನಲ್ಲಿ ಅಧ್ಯಯನ ಮಾಡಿ ದೇಶದ ಪ್ರತಿಷ್ಠಿತ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ’ ಎಂದರು.
ಡಾ.ಅಲ್ಲಮಪ್ರಭು ದೇಶಮುಖ ಇದ್ದರು.
ವಿದ್ಯಾವರ್ಧಕ ಸಂಘವನ್ನು ದೊಡ್ಡಪ್ಪ ಅಪ್ಪ ಶರಣಬಸವಪ್ಪ ಅಪ್ಪ ಅವರು ಹೆಮ್ಮರವಾಗಿ ಬೆಳೆಸಿದ್ದಾರೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆದಾಕ್ಷಾಯಣಿ ಎಸ್.ಅಪ್ಪ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ
ಕಳೆದ ವರ್ಷ ಎಸ್‌ಬಿಆರ್ ಸಿಇಟಿಗೆ ಸುಮಾರು 9000 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಬಾರಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆ ಇದೆಬಸವರಾಜ ದೇಶಮುಖ ಕಾರ್ಯದರ್ಶಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ
‘ಮಾ.15 ಏ.5 12ರಂದು ಪರೀಕ್ಷೆ’
‘10ನೇ ತರಗತಿ ವಾರ್ಷಿಕ ಪರೀಕ್ಷೆ ಮುಗಿದ ನಂತರ ಎಸ್‌ಬಿಆರ್ ಪ್ರವೇಶ ಪರೀಕ್ಷೆ ಇಟ್ಟುಕೊಳ್ಳಲಾಗಿದೆ. ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಮಾರ್ಚ್ 15ರಂದು ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಪ್ರವೇಶ ಪರೀಕ್ಷೆ ಇದ್ದು ಮಾರ್ಚ್ 13ರವರೆಗೆ ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ಇದೆ’ ಎಂದು ಎಂದು ದಾಕ್ಷಾಯಣಿ ಎಸ್.ಅಪ್ಪ ತಿಳಿಸಿದರು. ‘ಐಸಿಎಸ್‌ಇ ವಿದ್ಯಾರ್ಥಿಗಳಿಗೆ ಏಪ್ರಿಲ್ 5ರಂದು ಪರೀಕ್ಷೆ ಇದ್ದು ಏ.3ರವರೆಗೆ ನೋಂದಣಿ ಮಾಡಬಹುದು. ಎಸ್‌ಎಸ್‌ಎಲ್‌ಸಿ ಸ್ಟೇಟ್ ಬೋರ್ಡ್ ವಿದ್ಯಾರ್ಥಿಗಳಿಗೆ ಏಪ್ರಿಲ್ 12ರಂದು ಪರೀಕ್ಷೆ ಇದ್ದು ಏ.10ರವರೆಗೆ ನೋಂದಣಿಗೆ ಅವಕಾಶ ಇದೆ’ ಎಂದರು. ಕಾಲೇಜಿನ ಮೇಲ್ವಿಚಾರಕ ಶ್ರೀಶೈಲ್ ಹೊಗಾಡೆ ಮಾತನಾಡಿ ‘https://sbrcet.eduwizerp4.in/ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮಿಪುತ್ರ ಆರ್.ಕೆ. ಮೊ.9886319125 ಹನುಮಂತ ಪಿ.ಜಿ. 9986523757 ಮಲ್ಲಿಕಾರ್ಜುನ ಬಿ. 9900951717 ಅವರನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.