ADVERTISEMENT

ವಾಕ್‌ಥಾನ್‌ನಲ್ಲಿ ಮಾರ್ದನಿಸಿದ ಸಾಮಾಜಿಕ ಪ್ರಜ್ಞೆ

ಶರಣಬಸವೇಶ್ವರ ಪಬ್ಲಿಕ್‌ ಶಾಲೆಯ ಸುವರ್ಣ ಮಹೋತ್ಸವ, ಅಲ್ಯುಮಿನಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 11:34 IST
Last Updated 29 ಅಕ್ಟೋಬರ್ 2018, 11:34 IST
ಕಲಬುರ್ಗಿಯಲ್ಲಿ ಸೋಮವಾರ ಶರಣಬಸವೇಶ್ವರ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ನಡೆಸಿದ ವಾಕ್‌ಥಾನ್‌ನಲ್ಲಿ ನೃತ್ಯ ಪ್ರದರ್ಶಿಸಿದರು
ಕಲಬುರ್ಗಿಯಲ್ಲಿ ಸೋಮವಾರ ಶರಣಬಸವೇಶ್ವರ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ನಡೆಸಿದ ವಾಕ್‌ಥಾನ್‌ನಲ್ಲಿ ನೃತ್ಯ ಪ್ರದರ್ಶಿಸಿದರು   

ಕಲಬುರ್ಗಿ: ಇಲ್ಲಿನ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಸಾವಿರಾರು ‘ಹಕ್ಕಿಗಳು’ ಹಿಂಡುಹಿಂಡಾಗಿ ಬೀಡುಬಿಟ್ಟವು! ಸಾಮಾಜಿಕ ಜಾಗೃತಿ ಹಾಗೂ ಸ್ವಚ್ಛತೆಯ ಅರಿವು ಮೂಡಿಸಲು ಹಲವು ದನಿಗಳು ಒಂದಾಗಿ ಸೇರಿದವು. ನಗರದ ಪ್ರಮುಖ ರಸ್ತೆಗಳಲ್ಲಿ ವಾಕ್‌ಥಾನ್‌ ನಡೆಸಿ ಘೋಷಣೆ ಕೂಗಿದವು. ಬೀದಿನಾಟಕ, ಹಾಡು, ನೃತ್ಯದ ಮೂಲಕ ಮನರಂಜನೆ ನೀಡಿದವು.

ಅಂದಹಾಗೆ, ಇದಕ್ಕೆ ಕಾರಣ ಶರಣಬಸವೇಶ್ವರ ಪಬ್ಲಿಕ್‌ ಶಾಲೆಯ ಸುವರ್ಣ ಮಹೋತ್ಸವ ಹಾಗೂ ಅಲ್ಯುಮಿನಿ ಸಮಾವೇಶ.
ಶಾಲೆಯ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ವಾಕ್‌ಥಾನ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಹಳದಿ ಟಿ–ಷರ್ಟ್‌, ಕಪ್ಪು ಜೀನ್ಸ್‌, ಬಿಳಿ ಟೊಪ್ಪಿಗೆ ಧರಿಸಿ ದೇವಸ್ಥಾನ ಆವರಣದಲ್ಲಿ ಸೇರಿದಾಗ ಹಕ್ಕಿಗಳ ಸಾಲೇ ನಿಂತ ನೋಟ. ಇಲ್ಲಿಂದ ನಡಿಗೆ ಆರಂಭಿಸಿದ ಮಕ್ಕಳ ದಂಡು ಕಿಲೋಮೀಟರ್‌ವರೆಗೂ ಬೆಳೆಯಿತು.

ದುಶ್ಚಟಗಳಿಂದ ದೂರವಿರಿ, ಕುಡಿತವೇ ಕೆಡಕು, ನಿಮ್ಮ ಮನೆಗಳ ಸ್ವಚ್ಛತೆ ಕಾಪಾಡಿ, ನಗರದ ಮಾಲಿನ್ಯ ನಿಯಂತ್ರಿಸಿ, ಭ್ರೂಣಹತ್ಯೆ ನಿಲ್ಲಿಸಿ, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿ... ಎಂಬಿತ್ಯಾದಿ ಘೋಷಣೆ ಕೂಗಿಸಿದರು. ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ADVERTISEMENT

ಲಾಳಗೇರಿ ಕ್ರಾಸ್‌, ಸೂಪರ್‌ ಮಾರುಕಟ್ಟೆ, ಚೌಕ್‌ಪೊಲೀಸ್‌ ಠಾಣೆ, ಜಗತ್‌ ಸರ್ಕಲ್‌, ಎಸ್‌.ಎಂ.ಪಂಡಿತ ರಂಗಮಂದಿರ, ಆನಂದ ಹೋಟೆಲ್‌ ಸರ್ಕಲ್‌ ಮೂಲಕ ಸಾಗಿದ ವಾಕ್‌ಥಾನ್ ಎಸ್‌ಬಿಆರ್‌ ಶಾಲೆಗೆ ಬಂದು ಸಮಾಪನಗೊಂಡಿತು.

ಶರಣಬಸವೇಶ್ವರ ಅವರ ಕಾಯಕ, ಸೇವೆಗಳನ್ನು ತಿಳಿಸುವ ಚಿತ್ರಪಟ ಹೊತ್ತ ಟ್ಯಾಬ್ಲೊ ಮುಂಚೂಣಿಯಲ್ಲಿ ಸಾಗಿತು. ಇದರ ಹಿಂದೆ ಅಪ್ಪಾ ಬ್ಯಾಂಡ್‌ ಮೇಳ, ಅವರ ಹಿಂದೆ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು, ನಂತರ ಎಸ್‌ಬಿಆರ್‌ ಬ್ಯಾಂಡ್‌ ಮೇಳ ಹಾಗೂ ಶಾಲೆಯ ವಿದ್ಯಾರ್ಥಿಗಳು, ಬಳಿಕ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಗುಂಪು ಒಂದಾದ ಬಳಿಕ ಒಂದು ಶಿಸ್ತಿನಿಂದ ಸಂಚರಿಸಿದವು. ಎಲ್ಲ ಶಿಕ್ಷಕ– ಶಿಕ್ಷಕಿಯರೂ ಸಮವಸ್ತ್ರದಲ್ಲಿ ಬಂದು ಗುಂಪುಗಳ ಜತೆಗೆ ನಡೆದರು.

ಮಾರ್ಗಮಧ್ಯೆ ಜನಸಂದಣಿ ಪ್ರದೇಶಗಳಲ್ಲಿ, ವೃತ್ತ, ಚೌಕ್‌ಗಳಲ್ಲಿ ವಿದ್ಯಾರ್ಥಿಗಳು ಬೀದಿನಾಟಕ ಪ್ರದರ್ಶಿಸಿದರು. ‘ಭೇಟಿ ಬಚಾವೊ, ಭೇಟಿ ಪಢಾವೊ’, ‘ಸ್ವಚ್ಛ ಭಾರತ ಅಭಿಯಾನ’ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದರು. ಮತ್ತೆ ಕೆಲವರು ಲೆಜಿಮ್‌ ಆಡಿ, ವ್ಯಾಯಾಮ ಪ್ರದರ್ಶಿಸಿ ಗಮನ ಸೆಳೆದರು. ಕಿವಿಗಡಚಿಕ್ಕುವ ಡಿಜೆ ಸೌಂಡ್‌ನೊಂದಿಗೆ ವಿವಿಧ ಚಿತ್ರಗೀತೆಗಳನ್ನು ಹಾಕಿ, ರಸ್ತೆಯಲ್ಲೇ ನೃತ್ಯ ಮಾಡಿ ರಂಜಿಸಿದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಸದಸ್ಯರೂ ಸಮವಸ್ತ್ರದಲ್ಲಿ ಬ್ಯಾಂಡ್‌ಸೆಟ್‌ನೊಂದಿಗೆ ಪಾಲ್ಗೊಂಡರು.

ಮಾರ್ಗದುದ್ದಕ್ಕೂ ಶಾಲೆಯ ಧ್ವಜಗಳು ರಾರಾಜಿಸಿದವು. ವಿದ್ಯಾರ್ಥಿಗಳ ಕೂಗಾಟ, ಸಂಭ್ರಮ, ಜಯಘೋಷ ಮಾರ್ದನಿಸಿದವು. ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ವಾಕ್‌ಥಾನ್‌ನ ಸಂಭ್ರಮ ಸವಿದರು.

ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪ ವಾಕ್‌ಥಾನ್‌ಗೆ ಚಾಲನೆ ನೀಡಿದರು. ಕಾರ್ಯದರ್ಶಿ ಬಸವರಾಜ ದೇಶಮುಖ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ, ಪಾಲಿಕೆ ಸದಸ್ಯ ಶರಣಕುಮಾರ ಮೋದಿ ಶುಭ ಕೋರಿದರು.

*
ದೊಡ್ಡಪ್ಪ ಅಪ್ಪ ಅವರ ಕನಸಿನ ಶಾಲೆ ಈಗ ಅರ್ಧ ಶತಮಾನ ಪೂರೈಸಿದೆ. ಇದರ ಅಂಗವಾಗಿ ಆಯೋಜಿಸಿದ ವಾಕ್‌ಥಾನ್‌ ಕಲಬುರ್ಗಿ ಜನರಿಗಾಗಿ ಮೀಸಲು.
-ಡಾ.ಶರಣಬಸವಪ್ಪ ಅಪ್ಪ, ಕುಲಾಧಿಪತಿ, ಶರಣಬಸವ ವಿ.ವಿ

*
ವಿದ್ಯಾರ್ಥಿಗಳು ವಾಕ್‌ಥಾನ್‌ ಮೂಲಕ ಸಾಮಾಜಿಕ ಜಾಗೃತಿಗೆ ಮುಂದಾಗಿದ್ದು ಖುಷಿಯಾಗಿದೆ. ಪೊಲೀಸರು ಮಾಡಬೇಕಾದ ಕೆಲಸವನ್ನು ಎಸ್‌ಬಿಆರ್‌ ಶಾಲೆ ಮಾಡುತ್ತಿದೆ.
-ಎನ್‌.ಶಶಿಕುಮಾರ, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.