ADVERTISEMENT

ಸದಾಶಿವ ವರದಿ ಜಾರಿಗೆ ಒತ್ತಾಯಿಸಿ ಬೈಕ್ ರ‍್ಯಾಲಿ: ಚಂದ್ರಕಾಂತ ನಾಟೀಕಾರ

ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಡಿ.13ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 15:30 IST
Last Updated 13 ನವೆಂಬರ್ 2021, 15:30 IST
ಚಂದ್ರಕಾಂತ
ಚಂದ್ರಕಾಂತ   

ಕಲಬುರಗಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಲು ಐದು ಸಾವಿರ ಜನರು ಬೈಕ್ ರ‍್ಯಾಲಿ ಮಾಡುವ ಮೂಲಕ ಡಿ.13ರಂದು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ನಾಟೀಕಾರ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ನಮ್ಮ ಮನವಿಗೆ ಸರ್ಕಾರ ಓಗೊಡುತ್ತಿಲ್ಲ. ಹೀಗಾಗಿ, ಬೈಕ್ ರ‍್ಯಾಲಿ ಮೂಲಕ ಬೆಳಗಾವಿಗೆ ತೆರಳಿ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದೇವೆ’ ಎಂದರು.

‘ಡಿ.10ರಂದು ಬೀದರ್, ಯಾದಗಿರಿ ಜಿಲ್ಲೆಯ ಸಮಾಜದ ಮುಖಂಡರು ಕಲಬುರಗಿಯಲ್ಲಿ ಸೇರಲಿದ್ದಾರೆ. ಅಲ್ಲಿಂದ ಬೈಕ್ ಮೂಲಕ ಜೇವರ್ಗಿ, ಸಿಂದಗಿ ಮಾರ್ಗವಾಗಿ ವಿಜಯಪುರಕ್ಕೆ ತೆರಳಿ ಅಲ್ಲಿನ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಲಾಗುವುದು. ಅಲ್ಲಿಂದ ಮುಧೋಳಕ್ಕೆ ತಲುಪಿ ಅಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದೇವೆ. ಡಿ.12ರಂದು ಮುಧೋಳದಿಂದ ಹೊರಟು ಲೋಕಾಪುರ, ಯರಗಟ್ಟಿ ಮಾರ್ಗವಾಗಿ ಬೆಳಗಾವಿ ರಾತ್ರಿ ತಲುಪಲಿದ್ದೇವೆ. 13ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ವರದಿ ಜಾರಿಗೆ ಒತ್ತಾಯಿಸುವುದರ ಜೊತೆಗೆ ನಿಜಶರಣ ಮಾದಾರ ಚನ್ನಯ್ಯನವರ ಜಯಂತಿಯನ್ನು ಸರ್ಕಾರದಿಂದಲೇ ಆಚರಣೆ ಮಾಡಬೇಕು. ಬೆಳಗಾವಿ ಜಿಲ್ಲೆ ರಾಯಬಾಗ ಮತಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ ಹಾಗೂ ಲಿಡಕರ್ ಅಭಿವೃದ್ಧಿ ನಿಗಮನಕ್ಕೆ ಈಗ ಇರುವ ಅನುದಾನವನ್ನು ತಲಾ ₹ 500 ಕೋಟಿಗೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ವಿಭಾಗೀಯ ಕಾರ್ಮಿಕ ಘಟಕದ ಅಧ್ಯಕ್ಷ ವಿಠಲ ಎಚ್. ವಾಲೀಕಾರ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಲಿಂಗ ಕಟ್ಟಿಮನಿ, ರೇವಣಸಿದ್ದಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.