ADVERTISEMENT

ಶಾಲಾ ಹಂತದಲ್ಲೇ ವಿಜ್ಞಾನ ಕುಸಿತ: ಪ್ರೊ.ಮುಜಾಫರ್ ಅಸಾದಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 11:51 IST
Last Updated 13 ಅಕ್ಟೋಬರ್ 2018, 11:51 IST
ರಾಯಚೂರು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಪ್ರೊ.ಮುಜಾಫರ್ ಅಸಾದಿ ಮಾತನಾಡಿದರು
ರಾಯಚೂರು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಪ್ರೊ.ಮುಜಾಫರ್ ಅಸಾದಿ ಮಾತನಾಡಿದರು   

ಕಲಬುರ್ಗಿ: ‘ಪ್ರಾಥಮಿಕ ಶಾಲಾ ಹಂತದಲ್ಲೇ ವಿಜ್ಞಾನ ಕುಸಿಯುತ್ತಿದೆ. ಹೀಗಾಗಿ ಪಿಯುಸಿ ನಂತರ ಹೆಚ್ಚಿನ ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಆಸಕ್ತಿ ತೋರುತ್ತಿಲ್ಲ’ ಎಂದು ರಾಯಚೂರು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಪ್ರೊ.ಮುಜಾಫರ್ ಅಸಾದಿ ಕಳವಳ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜವಿಜ್ಞಾನ ವಿಭಾಗದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಲಾಗುತ್ತಿದೆ. ಶಾಲಾ ಹಂತದಲ್ಲಿ ವಿಜ್ಞಾನಕ್ಕೆ ಜಾಗವೇ ಇಲ್ಲದಂತಾಗಿದೆ. ವಿಜ್ಞಾನವನ್ನು ಕೆಳಸ್ತರದಿಂದಲೇ ಕಲಿಸಬೇಕು. ಕನ್ನಡ ಶಾಲೆಗಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಬೇಕು. ವಿಜ್ಞಾನ ನಮ್ಮ ಸಂಸ್ಕೃತಿಯ ಭಾಗವಾದರೆ ಮಾತ್ರ ಜನಪ್ರಿಯವಾಗುತ್ತದೆ. ಆದ್ದರಿಂದ ಶಿಕ್ಷಕರು, ಪಾಲಕರು ಈ ಬಗ್ಗೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸರ್ಕಾರಿ ಶಾಲೆ ಎಂದರೆ ದಡ್ಡರ ಶಾಲೆ, ಸರ್ಕಾರಿ ಶಾಲೆಯಿಂದ ಬಂದವರು ದಡ್ಡರು ಎಂದು ಬಿಂಬಿಸುವುದು ಸರಿಯಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ತಿಳಿವಳಿಕೆ ಮಟ್ಟ ಚೆನ್ನಾಗಿರುತ್ತದೆ. ಆದರೆ, ಇಂಗ್ಲಿಷ್‌ನಲ್ಲಿ ಅವರು ಹಿಂದುಳಿದಿರುತ್ತಾರೆ. ಇನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಸುಸಲಿತವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಆದರೆ, ಅವರ ತಿಳಿವಳಿಕೆ ಮಟ್ಟ ಕಡಿಮೆ ಇರುತ್ತದೆ. ಇದನ್ನು ಪ್ರತಿಯೊಬ್ಬ ಪಾಲಕರು ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕಡಿಮೆ ಮಕ್ಕಳು ದಾಖಲಾಗಿರುವ ಕಾರಣಕ್ಕೆ 24,887 ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. 16 ಸಾವಿರಕ್ಕೂ ಅಧಿಕ ಶಾಲೆಗಳನ್ನು 8,480 ಶಾಲೆಗಳೊಂದಿಗೆ ವಿಲೀನಗೊಳಿಸುವ ಚಿಂತನೆ ಸರ್ಕಾರದ ಮುಂದಿದೆ. ವಿಜ್ಞಾನ, ಇಂಗ್ಲಿಷ್ ಮತ್ತು ಗಣಿತ ವಿಷಯಗಳಿಗೆ ಪ್ರಾಥಮಿಕ ಹಂತದಲ್ಲಿ ಆದ್ಯತೆ ನೀಡದೆ ಹೋದರೆ ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ’ ಎಂದು ಹೇಳಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಅಣು ಭೌತವಿಜ್ಞಾನಿ ಪ್ರೊ.ಎಂ.ಆರ್.ಎನ್.ಮೂರ್ತಿ ಮಾತನಾಡಿ, ‘ವಿಜ್ಞಾನದ ಬಹಳಷ್ಟು ವಿಷಯಗಳು ಆಕಸ್ಮಿಕವಾಗಿಯೇ ತಿಳಿದು ಬಂದಿವೆ. ವಿಜ್ಞಾನದಲ್ಲಿ ಸಮಸ್ಯೆ ಇಲ್ಲ, ಆದರೆ ವಿಜ್ಞಾನಿಗಳಲ್ಲಿ ಸಮಸ್ಯೆ ಇದೆ. ಹೀಗಾಗಿ ವೈಜ್ಞಾನಿಕವಾಗಿ ನಾವು ಇನ್ನಷ್ಟು ಬಲವಾಗಬೇಕು’ ಎಂದು ತಿಳಿಸಿದರು.

‘ಇಂದ್ರಿಯ ಅನುಭವದಿಂದ ಕಂಡುಕೊಂಡಿರುವುದು ಸತ್ಯವಾಗಿರುತ್ತದೆ. ಅನುಭವದಿಂದ ಜ್ಞಾನೋದಯವಾಗುತ್ತದೆ. ಬುದ್ಧನ ಅನುಭವವೇ ಆತನಿಗೆ ಜ್ಞಾನೋದಯ ಉಂಟು ಮಾಡಿತು. ಆಸೆಯೇ ದುಃಖಕ್ಕೆ ಮೂಲ ಎಂಬುದು ಅರಿವಾಗಿದ್ದು ಕೂಡ ಅನುಭವದಿಂದ. ವಿಜ್ಞಾನ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಆದ್ದರಿಂದ ಇಂದಿನ ಮಕ್ಕಳನ್ನು ಮೂಲವಿಜ್ಞಾನದತ್ತ ಸೆಳೆಯಬೇಕು’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜಕ ಡಾ. ರಮೇಶ ಲಂಡನಕರ್, ಬಿಜಿವಿಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಎಚ್.ಎಸ್.ಜಯಕುಮಾರ, ಜಿಲ್ಲಾ ಸಮಿತಿ ಗೌರವ ಅಧ್ಯಕ್ಷ ಡಾ. ಶ್ರೀಶೈಲ ಘೂಳಿ, ಅಧ್ಯಕ್ಷ ಪ್ರೊ.ಶಿವಶರಣಪ್ಪ ಮುಳೆಗಾಂವ, ಕಾರ್ಯದರ್ಶಿ ನಾಗೇಂದ್ರಪ್ಪ ಅವರಾದ. ಖಜಾಂಚಿ ಪ್ರೇಮಾನಂದ ಚಿಂಚೋಳಿಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.