ADVERTISEMENT

3 ವರ್ಷಗಳಿಂದ ರಚನೆಯಾಗದ ಎಸ್‌ಡಿಎಂಸಿ: ಸೌಲಭ್ಯ ವಂಚಿತ ‘ಮಾದರಿ’ ಶಾಲೆ

ಇದ್ದರೂ ಇಲ್ಲದಂತಿರುವ ಸ್ಮಾರ್ಟ್‌ಕ್ಲಾಸ್

ಮಂಜುನಾಥ ದೊಡಮನಿ
Published 29 ಡಿಸೆಂಬರ್ 2021, 4:29 IST
Last Updated 29 ಡಿಸೆಂಬರ್ 2021, 4:29 IST
ಯಡ್ರಾಮಿ ತಾಲ್ಲೂಕಿನ ಹಂಗರಗಾ(ಕೆ) ಸರ್ಕಾರಿ ಮಾದರಿ ಶಾಲೆ
ಯಡ್ರಾಮಿ ತಾಲ್ಲೂಕಿನ ಹಂಗರಗಾ(ಕೆ) ಸರ್ಕಾರಿ ಮಾದರಿ ಶಾಲೆ   

ಯಡ್ರಾಮಿ: ತಾಲ್ಲೂಕಿನ ಹಂಗರಗಾ (ಕೆ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಈಗ ಹೆಸರಿಗಷ್ಟೇ ಮಾದರಿಯಾಗಿದೆ. ಈ ಶಾಲೆಯನ್ನು ಹಲವು ಸಮಸ್ಯೆಗಳು ಕಾಡುತ್ತಿವೆ.

1 ರಿಂದ 8ನೇ ತರಗತಿಯಲ್ಲಿ ಪ್ರಸಕ್ತ ವರ್ಷ 159 ಬಾಲಕರು, 133 ಬಾಲಕಿಯರು ಇದ್ದಾರೆ. ನಾಲ್ವರು ಶಿಕ್ಷಕರು ಮತ್ತು ನಾಲ್ವರು ಅತಿಥಿ ಶಿಕ್ಷಕರು ಇದ್ದಾರೆ.

1 ರಿಂದ 5ನೇ ತರಗತಿಯವರೆಗೆ ವಿಜ್ಞಾನ ಬೋಧನೆಗೆ ಶಿಕ್ಷಕರಿಲ್ಲ. ಗಣಿತ, ಹಿಂದಿ, ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಶಾಲೆಯಲ್ಲಿ 290ಕ್ಕೂ ಹೆಚ್ಚು ಮಕ್ಕಳಿದ್ದರೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ರಚನೆ 3 ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ADVERTISEMENT

ಶಾಲಾ ಆವರಣ ಕೊಠಡಿಗಳ ಕಸವನ್ನು ಗುಡಿಸುವವರಿಲ್ಲ. ವಿದ್ಯಾರ್ಥಿಗಳಿಗೆ ಶೌಚಾಲಯವಿಲ್ಲ. 10 ವರ್ಷಗಳ ಹಿಂದೆ ಕಟ್ಟಿದ ನೀರಿನ ಟ್ಯಾಂಕ್ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.

ಸ್ಪರ್ಧಾತ್ಮಕ ಯುಗದಲ್ಲಿದ್ದರೂ ಇಲ್ಲಿಯ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಮರೀಚಿಕೆಯಾಗಿದೆ. ಸ್ಮಾರ್ಟ್‌ಕ್ಲಾಸ್ ಹೆಸರಿಗೆ ಮಾತ್ರ ಇದೆ. ಹೈಟೆಕ್ ಶೌಚಾಲಯ ಈವರೆಗೂ ಮಂಜೂರು ಆಗಿಲ್ಲ. ಮಕ್ಕಳಿಗೆ, ಶಿಕ್ಷಕರಿಗೆ ಕುಡಿಯಲು ನಲ್ಲಿ (ನಳ) ವ್ಯವಸ್ಥೆ ಇಲ್ಲ. ಹೀಗಾಗಿ ಮುಖ್ಯಶಿಕ್ಷಕರ ಕೊಠಡಿಗೂ ನೀರಿಲ್ಲ. ಶುದ್ಧ ನೀರು ಹುಡುಕಿ ಅಡುಗೆ ಕೋಣೆಗೆ ಹೋಗಿ ಕುಡಿಯಬೇಕು. ಶಾಲೆ ಸುತ್ತಲು ಕಾಂಪೌಂಡ್ ಇಲ್ಲ. ರಾತ್ರಿ ವೇಳೆ ಶಾಲೆ ಮದ್ಯಪಾನಿಗಳ ತಾಣವಾಗುತ್ತದೆ. ಹೊರಗಿನಿಂದ ಬಂದ ಜನರಿಗೆ ಪ್ರದೇಶ ದ್ವಾರದಲ್ಲಿ ಮೊದಲು ಹಂದಿಗಳ ದರ್ಶನ ಆಗುತ್ತದೆ. ‘ಸೌಲಭ್ಯ ಕೊರತೆ ಮತ್ತು ನಿರ್ಲಕ್ಷ್ಯದ ಕಾರಣ ಶಾಲೆಯಲ್ಲಿ ಗುಣಮಟ್ಟ ಕುಸಿಯುತ್ತಿದೆ. ಈಗಲಾದರೂ ಶಾಲೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಗ್ರಾಮಸ್ಥರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.