ADVERTISEMENT

ಕಪ್ಪು ಬಾವುಟ ಪ್ರದರ್ಶನ ಭೀತಿ; ವ್ಯಾಪಕ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:34 IST
Last Updated 15 ನವೆಂಬರ್ 2022, 5:34 IST
ಕಲಬುರಗಿ ವಿಮಾನ ನಿಲ್ದಾಣದ ಬಳಿ ಡಿಸಿಪಿ ದೀಪನ್ ಎಂ.ಎನ್. ನೇತೃತ್ವದಲ್ಲಿ ಬಂದೋಬಸ್ತ್ ಮಾಡಿದ್ದ ಪೊಲೀಸರು
ಕಲಬುರಗಿ ವಿಮಾನ ನಿಲ್ದಾಣದ ಬಳಿ ಡಿಸಿಪಿ ದೀಪನ್ ಎಂ.ಎನ್. ನೇತೃತ್ವದಲ್ಲಿ ಬಂದೋಬಸ್ತ್ ಮಾಡಿದ್ದ ಪೊಲೀಸರು   

ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದ ಪ್ರಯುಕ್ತ ಸೋಮವಾರ ಮುಖ್ಯಮಂತ್ರಿ ಭೇಟಿ ಸಂದರ್ಭದಲ್ಲಿ ಹಲವು ಕಡೆ ಭಾರಿ ಭದ್ರತೆ ಏರ್ಪಡಿಸಲಾಗಿತ್ತು.

ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಅವರು ಅಲ್ಲಿಂದ ನೇರವಾಗಿ ನಿಲ್ದಾಣದ ಬಳಿ ಇರುವ ಮಡಿಯಾಳ ತಾಂಡಾಕ್ಕೆ ತೆರಳಿದರು. ನಗರದಿಂದ ಅಲ್ಲಿಗೆ ಕಾಂಗ್ರೆಸ್ ಕಾರ್ಯಕರ್ತರು ಬರಬಹುದು ಎಂಬ ಕಾರಣದಿಂದಾಗಿ ಪೊಲೀಸರು ಬುದ್ಧವಿಹಾರದ ಮುಖ್ಯ ದ್ವಾರದ ಮುಂಭಾಗ, ತಾಂಡಾ ಕ್ರಾಸ್ ಹಾಗೂ ವಿಮಾನ ನಿಲ್ದಾಣದವರೆಗೆ ಹೀಗೆ ಮೂರು ಕಡೆ ಬಂದೋಬಸ್ತ್ ಮಾಡಿದ್ದರು. ಅಲ್ಲದೇ, ವಿಮಾನ ನಿಲ್ದಾಣದ ಒಳಕ್ಕೆ ತೆರಳುವವರನ್ನು ಪರಿಶೀಲಿಸಿ ಒಳಕ್ಕೆ ಬಿಡಲಾಗುತ್ತಿತ್ತು.

ಎಸಿಪಿಗಳಾದ ದೀಪನ್ ಎಂ.ಎನ್, ಗಿರೀಶ್ ಎಸ್.ಬಿ, ಗಂಗಾಧರ ಮಠಪತಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಅರುಣ ಮುರಗುಂಡಿ, ರಾಜಶೇಖರ ಹಳಗೋದಿ, ಚಂದ್ರಶೇಖರ ತಿಗಡಿ, ಶಕೀಲ್ ಅಂಗಡಿ ಹಾಗೂ ಪಿಎಸ್‌ಐಗಳು, ಎಎಸ್‌ಐಗಳು, ಕಾನ್‌ಸ್ಟೆಬಲ್‌ಗಳು ಹಾಗೂ ನಗರ ಸಶಸ್ತ್ರ ಮೀಸಲು ಪಡೆ, ಸಿಸಿಬಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ADVERTISEMENT

ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆದ ಮಡಿಯಾಳ ತಾಂಡಾ ಬಳಿ ಸ್ವತಃ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್, ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು ಭದ್ರತೆಯ ನೇತೃತ್ವ ವಹಿಸಿದ್ದರು.

ಮುಖ್ಯಮಂತ್ರಿ ಅವರನ್ನು ಮಾತನಾಡಿಸಲು ವೇದಿಕೆಯ ಪಕ್ಕದಲ್ಲಿ ಕಾಯುತ್ತಾ ನಿಂತಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಪಕ್ಕಕ್ಕೆ ಸರಿಸಿ ನಿಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.