ಕಲಬುರಗಿ: ‘ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದರೆ ಸೋಲುವ ಭಯದಿಂದ ಕಾಂಗ್ರೆಸ್ ನಾಯಕರು ಒಂದು ದೇಶ ಒಂದು ಚುನಾವಣೆಗೆ ವಿರೋಧ ಮಾಡುತ್ತಿದ್ದಾರೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ದೂರಿದರು.
ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಕಲಬುರಗಿ ನಾಗರಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಒಂದು ದೇಶ ಒಂದು ಚುನಾವಣೆ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಾದ್ಯಂತ ಒಂದೇ ಬಾರಿಗೆ ಚುನಾವಣೆ ನಡೆಸಬೇಕು ಎಂಬುದು ಬಹುಜನರ ಅಪೇಕ್ಷೆಯಾಗಿದೆ. ಪ್ಯಾನ್ ಇಂಡಿಯಾ ಪಕ್ಷದ ಸ್ಥಾನದಿಂದ ಹೊರ ಹೋಗುವ ಭೀತಿಯಿಂದ ಕಾಂಗ್ರೆಸ್ಸಿಗರು ಏಕಕಾಲಕ್ಕೆ ಚುನಾವಣೆ ನಡೆಸದಂತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಂತರ ಅವಧಿಯಲ್ಲಿ ರಾಜ್ಯ ಸರ್ಕಾರ ಉರುಳಿಬಿದ್ದರೆ ಹೇಗೆ ಎಂದು ಕುಂಟು ನೆಪ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.
‘ನಾನು ಸಂಸದೀಯ ವ್ಯವಹಾರಗಳ ಸಚಿವನಾಗಿದ್ದಾಗ 67 ರಾಜಕೀಯ ಪಕ್ಷಗಳ ಅಧ್ಯಕ್ಷರ ಸಭೆ ಕರೆಯಲಾಗಿತ್ತು. ಅದರಲ್ಲಿ 47 ಪಕ್ಷಗಳು ಒಳ್ಳೆಯ ಚಿಂತನೆ ಎಂದು ಬೆಂಬಲಿಸಿದ್ದವು. ಕಾಂಗ್ರೆಸ್ ಸೇರಿ ಕೆಲವರು ವಿರೋಧಿಸಿದ್ದರು. ಒಂದು ದೇಶ ಒಂದು ಚುನಾವಣೆ ನಡೆದರೆ ಮುಂದೊಂದು ದಿನ ಒಂದು ದೇಶ ಒಬ್ಬ ನಾಯಕ ಮಾಡುತ್ತಾರೆ ಎಂಬ ಭಯವೂ ಕಾಡುತ್ತಿದೆ’ ಎಂದರು.
‘2029ರ ಬಳಿಕ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಕ್ರಿಯೆ ಮಾಡುತ್ತೇವೆ. ಅಲ್ಲಿಯವರೆಗೆ ನಿಮ್ಮಲ್ಲೂ (ಕಾಂಗ್ರೆಸ್) ಹೊಸ ನಾಯಕರನ್ನು ಬೆಳೆಸಿ. ಇಲ್ಲದಿದ್ದರೆ ನಾವೇ ನಾಯಕರನ್ನು ನಿಮ್ಮ ಪಕ್ಷಕ್ಕೆ ಕಳುಹಿಸಬೇಕಾಗುತ್ತದೆ. ದೇಶದಲ್ಲಿ ಚಂದ್ರಯಾನ ಯಶಸ್ವಿಯಾದರೂ ನಿಮ್ಮ ನಾಯಕನನ್ನು (ರಾಹುಲ್ ಗಾಂಧಿ) ಲಾಂಚ್ ಮಾಡುವಲ್ಲಿ ಇನ್ನೂ ಯಶಸ್ಸು ಸಿಕ್ಕಿಲ್ಲ’ ಎಂದು ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಒಂದು ದೇಶ ಒಂದು ಚುನಾವಣೆ ರಾಜಕೀಯ ಪ್ರೇರಿತವಲ್ಲ. ದೇಶದ ಅಭಿವೃದ್ಧಿಯ ದೃಷ್ಟಿಯನ್ನು ಇರಿಸಿಕೊಂಡು ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ ನಿರಂತರವಾಗಿ ಚುನಾವಣೆಗಳು ನಡೆದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಆಡಳಿತಾತ್ಮಕವಾಗಿ ಅಭಿವೃದ್ಧಿಗಳು ಕೆಲಸಗಳ ಆಗುವುದಿಲ್ಲ. ಇದು ದೇಶ ಹಾಗೂ ರಾಜ್ಯಗಳ ಪ್ರಗತಿಗೆ ಮಾರಕ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ, ಎಚ್‌ಕೆಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಶೀಲ್ ಜಿ.ನಮೋಶಿ ಮಾತನಾಡಿ, ‘ಐದು ವರ್ಷಗಳಿಗೆ ಒಮ್ಮೆ ಚುನಾವಣೆ ನಡೆದರು ಯುವಕರು ಆಸಕ್ತಿಯಿಂದ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾರೆ, ಮತದಾನದ ಪ್ರಮಾಣವೂ ಹೆಚ್ಚಾಗುತ್ತದೆ. ಚುನಾವಣೆ ಕರ್ತವ್ಯಕ್ಕೆ ಪದೇ ಪದೇ ಭದ್ರತಾ ಪಡೆಗಳ ಸೈನಿಕರು, ಅಧಿಕಾರಿಗಳು, ಶಿಕ್ಷಕರನ್ನು ನಿಯೋಜನೆ ಮಾಡುವುದು ಸಹ ತಪ್ಪುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಮಾಜಿ ಸಂಸದ ಡಾ.ಉಮೇಶ ಜಾಧವ, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಆಹಾರ ಧಾನ್ಯ ಮತ್ತು ಬೀಜಗಳ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ ಲಂಗರ್, ಕಲಬುರಗಿ ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಸಾರ್, ಒಎನ್‌ಒಎ ಸಹ ಸಂಚಾಲಕಿ ಪ್ರತಿಮಾ ಸುಭಾಷ ಉಪಸ್ಥಿತರಿದ್ದರು.
ಬಿಜೆಪಿಯ ಶಾಸಕರು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.