ADVERTISEMENT

ಹಿರಿಯ ನಾಗರಿಕರಿಗೆ ಸುರಕ್ಷತೆಗೆ ಪೊಲೀಸ್ ಬದ್ಧ: ಸಂಗೀತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:25 IST
Last Updated 23 ಫೆಬ್ರುವರಿ 2026, 7:25 IST
ಅಫಜಲಪುರ ತಾಲ್ಲೂಕಿನ ದೇವಲ ಗಾನಗಾಪುರ ಠಾಣಾ ವ್ಯಾಪ್ತಿಯಲ್ಲಿ ‘ಆಸರೆ’ ಯೋಜನೆ ಕುರಿತು ಪಿಎಸ್‌ಐ ಸಂಗೀತ ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಿದರು
ಅಫಜಲಪುರ ತಾಲ್ಲೂಕಿನ ದೇವಲ ಗಾನಗಾಪುರ ಠಾಣಾ ವ್ಯಾಪ್ತಿಯಲ್ಲಿ ‘ಆಸರೆ’ ಯೋಜನೆ ಕುರಿತು ಪಿಎಸ್‌ಐ ಸಂಗೀತ ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಿದರು   

ಅಫಜಲಪುರ: ‘ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಮತ್ತು ವಯೋವೃದ್ಧ ಹಿರಿಯ ನಾಗರಿಕರಿಗೆ ಅವರ ಜೀವನದಲ್ಲಿ ಒಂಟಿತನದ ಅಸುರಕ್ಷತೆ, ಅಭದ್ರತೆ ಹಾಗೂ ಕಾಳಜಿ ವಹಿಸುವ ವಿಶ್ವಾಸದ ಕೊರತೆಯನ್ನು ನೀಗಿಸಿ, ಸಮುದಾಯ ಪೊಲೀಸ್ ಪರಿಕಲ್ಪನೆಯಡಿಯಲ್ಲಿ ಅವರೊಂದಿಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರವಿದೆ ಎಂಬ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ‘ಆಸರೆ’ ಯೋಜನೆಯನ್ನು ಜಾರಿಗೆ ತರಲಾಗಿದೆ’ ಎಂದು ಪಿಎಸ್ಐ ಸಂಗೀತ ತಿಳಿಸಿದರು.

‘ಆಸರೆ’ ಯೋಜನೆ ಅಡಿಯಲ್ಲಿ ಒದಗಿಸುವ ಅಗತ್ಯ ನೆರವು ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ದೇವಲ ಗಾಣಗಾಪುರದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸಿಸುತ್ತಿರುವವರನ್ನು ಸಂಪರ್ಕಿಸಿ ಅವರ ಕುಂದು ಕೊರತೆಯನ್ನು ಆಲಿಸಿ, ಆಸರೆ ಯೋಜನೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂಟಿಯಾಗಿ ವಾಸ ಮಾಡುವ ಮಹಿಳೆ ಮನೆಗೆ ಭೇಟಿ ನೀಡಿ, ಮಾಹಿತಿ ಪಡೆದರು. ಗಂಡನ ನಿಧನದ ಬಳಿಕ ಏಕಾಂಗಿಯಾಗಿ ವಾಸ ಮಾಡುತ್ತಿರುವುದಾಗಿ ತಿಳಿಸಿದ ಮಹಿಳೆಗೆ ಪಿಎಸ್ಐ ಅವರು ಸಹಾಯ ಬೇಕಾದಲ್ಲಿ ಕರೆ ಮಾಡಬಹುದು ಎಂದು ದೂರವಾಣಿ ಸಂಖ್ಯೆ ನೀಡಿ ಧೈರ್ಯ ಹೇಳಿದರು.

ADVERTISEMENT

‘ಸಮಾಜದಲ್ಲಿ ಅನೇಕ ಕಾರಣಗಳಿಂದಾಗಿ ಒಂಟಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರು ಅದರಲ್ಲೂ ಒಂಟಿ ಮಹಿಳೆಯರ ಸ್ವತ್ತು ಹಾಗೂ ಜೀವಗಳಿಗೆ ಅನೇಕ ಸಂದರ್ಭಗಳಲ್ಲಿ ತೊಂದರೆಗೀಡಾದ ಪ್ರಕರಣಗಳನ್ನು ನೋಡುತ್ತೇವೆ. ಇವರುಗಳನ್ನು ಹಾಗೂ ಅವರ ಪ್ರಾಣ, ಸ್ವತ್ತುಗಳ ಸುರಕ್ಷತೆ ಕುರಿತಂತೆ ನಮ್ಮ ದೇವಲ ಗಾಣಗಾಪುರ ಪೊಲೀಸ್‌ ಠಾಣೆ ಕಟಿಬದ್ಧವಾಗಿದೆ’ ಎಂದು ತಿಳಿಸಿದರು.

ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಶಿವಾನಂದ ಮಲ್ಲಾಬಾದ, ಗುರುರಾಜ ಪಾಟೀಲ, ಬೀಟ್ ಸಿಬ್ಬಂದಿಗಳಾದ ಅಣ್ಣಪ್ಪ ರಾಠೋಡ, ಕಾಶಿಲಿಂಗ, ಸಂತೋಷ, ಗಿರಿಮಲ್ಲ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.