ಕಲಬುರಗಿ: ಕಳೆದ ಎರಡು ತಿಂಗಳ ಅವಧಿಯಲ್ಲಿನ ಟ್ರ್ಯಾಕ್ಟರ್ ಮತ್ತು ಬೈಕ್‌ಗಳ ಕಳ್ಳತನ ಸಂಬಂಧ ದಾಖಲಾದ ಕೆಲವು ಪ್ರಕರಣಗಳಲ್ಲಿ ನಿಂಬರ್ಗಾ ಠಾಣೆಯ ಪೊಲೀಸರು ಶನಿವಾರ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ₹ 14 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಭೂಸನೂರಿನ ಪೃಥ್ವಿರಾಜ್ ಕೃಷ್ಣಪ್ಪ (27), ಮಹಿಬೂಬ್ ನಬಿಸಾಬ್ (20), ರಾಹುಲ್ ಅಶೋಕ (22), ಮಹಮ್ಮದ್ ರಫಿ (25), ಕರೀಮ್ ಇಬ್ರಾಹಿಂಸಾಬ್ (19) ಹಾಗೂ ಅಮಿನ್ ನನ್ನುಸಾಬ್ (20) ಬಂಧಿತರು. ಆರೋಪಿಗಳು ಒಂದೇ ಗ್ರಾಮದವರಾಗಿದ್ದಾರೆ.
ಭೂಸನೂರು ವ್ಯಾಪ್ತಿಯಲ್ಲಿ ಕಳುವಾದ ₹ 30 ಸಾವಿರ ಮೌಲ್ಯದ ಒಂದು ಬೈಕ್, ವಾರಸುದಾರರಿಲ್ಲದ ₹ 3.80 ಲಕ್ಷ ಮೌಲ್ಯದ 9 ಬೈಕ್‌ಗಳು, ₹ 4.25 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಎಂಜಿನ್, ₹ 4.65 ಲಕ್ಷ ಮೌಲ್ಯದ ಟ್ರಾಲಿ ಸಹಿತ ಟ್ರ್ಯಾಕ್ಟರ್, ₹ 1 ಲಕ್ಷ ಮೌಲ್ಯದ 2 ಟ್ರಾಲಿಗಳು ಸೇರಿ ಒಟ್ಟು ₹ 14 ಲಕ್ಷ ಮೌಲ್ಯದ ಸ್ವತ್ತುಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿಂದ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಆಳಂದ ಸಿಪಿಐ ಪ್ರಕಾಶ ಆರ್. ಯಾತನೂರ ನೇತೃತ್ವದಲ್ಲಿ ನಿಂಬರ್ಗಾ ಠಾಣೆಯ ಪಿಎಸ್‌ಐಗಳಾದ ಬಸವರಾಜ ಸಣಮನಿ (ತನಿಖೆ), ಸಂಜೀವರಡ್ಡಿ, ಸಿಡಿಆರ್ ಶಾಖೆಯ ಬಲರಾಮ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖಾ ತಂಡದ ಕಾರ್ಯಕ್ಕೆ ಎಸ್.ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‌ಪಿ ಎನ್.ಶ್ರೀನಿಧಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲ್ಲು ಎತ್ತಿಹಾಕಿ ಕೊಲೆ: ಚಿಂಚೋಳಿ ತಾಲ್ಲೂಕಿನ ನೀಮಾಹೊಸಳ್ಳಿ ಗ್ರಾಮದ ಜಮೀನಿನಲ್ಲಿ ಅಪರಿಚಿತರು ಕಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದಾರೆ.
ಕುಸರಂಪಳ್ಳಿ ಗ್ರಾಮದ ನಿವಾಸಿ ಮಹೇಶ ಹಣಮಂತ (30) ಕೊಲೆಯಾದವರು. ಅಪರಿಚಿತರ ವಿರುದ್ಧ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 10ರ ಸಂಜೆ ಹೊಲಕ್ಕೆ ಹೋಗಿ ಮೇವು ತರುವುದಾಗಿ ತೆರಳಿದ್ದರು. ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಫೋನ್ ಮಾಡಿದರೂ ಸ್ವಿಚ್ ಆಫ್ ಆಗಿತ್ತು. ಮರುದಿನವೂ ಹುಡುಕಾಡಿದರು ಸಿಗಲಿಲ್ಲ. ಶುಕ್ರವಾರ ಬೆಳಿಗ್ಗೆ ನೀಮಾಹೊಸಳ್ಳಿಯ ಹೊಲದಲ್ಲಿ ಶವವಾಗಿ ಪತ್ತೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯೆಗೆ ₹ 23.94 ಲಕ್ಷ ವಂಚನೆ: ಷೇರು ಪೇಟೆಯಲ್ಲಿ ಷೇರು ಖರಿಸಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ವಂಚಕರು, ನಗರದ ವೈದ್ಯೆಯೊಬ್ಬರಿಂದ ₹ 23.94 ಲಕ್ಷ ಪಡೆದು ವಂಚಿಸಿದ ಆರೋಪದಲ್ಲಿ ‘ಸೆನ್’ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಗತ್ ವೃತ್ತ ಸಮೀಪದ ನಿವಾಸಿ ಡಾ.ಸ್ವಾತಿ ಮಲ್ಲಿನಾಥ ಹಣ ಕಳೆದುಕೊಂಡ ಸಂತ್ರಸ್ತೆ. ರವಿ ಪಟೇಲ್ ಮತ್ತು ಅನಿಲ್ ದೇಶಮುಖ ಎಂಬುವವರ ವಿರುದ್ಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಿ ಅವರಿಗೆ ಪೋನ್ ಕರೆ ಮಾಡಿದ ಆರೋಪಿಗಳು, ಮುಂಬೈನ ಮಾಸ್ಟರ್ ಕ್ಯಾಪಿಟಲ್ ಲಿಮಿಟೆಡ್ ಕಂಪನಿಯ ಷೇರು ಖರೀದಿಸಿ ಲಾಭ ಮಾಡಿಕೊಡುವುದಾಗಿ ಹೇಳಿ ಸ್ವಾತಿ ಅವರನ್ನು ನಂಬಿಸಿದ್ದರು. ಅವರ ಮಾತು ನಂಬಿ, ವಿವಿಧ ಬ್ಯಾಂಕ್‌ಗಳಿಂದ ಆರ್‌ಟಿಜಿಎಸ್, ಐಎಂಪಿಎಸ್ ಮೂಲಕ ಹಂತ ಹಂತವಾಗಿ ₹ 23.94 ಲಕ್ಷ ಜಮೆ ಮಾಡಿದ್ದಾರೆ. ಲಾಭಾಂಶ, ಪಡೆದ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.