ADVERTISEMENT

ಸೇವಾಲಾಲ್‌ ಮಹಾನ್ ಪುರುಷ; ಸಂಸದ ಜಾಧವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 6:27 IST
Last Updated 16 ಫೆಬ್ರುವರಿ 2023, 6:27 IST
ಕಲಬುರಗಿಯ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಬುಧವಾರ ನಡೆದ ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಉಮೇಶ ಜಾಧವ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಮುಖರು ಪಾಲ್ಗೊಂಡಿದ್ದರು
ಕಲಬುರಗಿಯ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಬುಧವಾರ ನಡೆದ ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಉಮೇಶ ಜಾಧವ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಮುಖರು ಪಾಲ್ಗೊಂಡಿದ್ದರು   

ಕಲಬುರಗಿ: ‘ಬಂಜಾರ ಸಮುದಾಯದ ಸಂತ ಸೇವಾಲಾಲ್‌ ಮಹಾರಾಜರು ಮಹಾನ್ ಶಕ್ತಿ ಪುರುಷರು’ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.

ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗ
ಮಂದಿರಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ಕಾಲದಲ್ಲಿ ಅಲೆಮಾರಿಗಳು ಆಗಿದ್ದ ಬಂಜಾರ ಸಮುದಾಯವನ್ನು ಒಗೂಡಿಸುವ ಕೆಲಸವನ್ನು ಸೇವಾಲಾಲ್ ಮಹಾರಾಜರು ಮಾಡಿದ್ದರು. ಅವರ ಶ್ರಮದಿಂದಾಗಿ ಇಂದು ನಾವೆಲ್ಲರೂ ಒಗ್ಗೂಡಿ ತಾಂಡಾಗಳಲ್ಲಿ ನೆಲೆಸಿದ್ದೇವೆ’ ಎಂದರು.

ADVERTISEMENT

‘ದಾಖಲಾತಿ ಇಲ್ಲದ ಸ್ಥಳದಲ್ಲಿ ಬದುಕು ನಡೆಸುತ್ತಿದ್ದೇವು. ಅಂತಹ ಸ್ಥಳಗಳನ್ನು ಗುರುತಿಸಿದ ರಾಜ್ಯ ಸರ್ಕಾರ, ಹಕ್ಕುಪತ್ರಗಳನ್ನು ನೀಡುವ ಮೂಲಕ ನಮ್ಮ ಏಳಿಗೆಗೆ ಸಹಕರಿಸಿದೆ. ಆದರೆ, ಕೆಲವರು ಹಕ್ಕುಪತ್ರ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರ ಬಗ್ಗೆ ಟೀಕಿಸುತ್ತಿದ್ದಾರೆ’ ಎಂದರು.

‘ಸೇವಾಲಾಲ್‌ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಂಜಾರ ಸಮಾಜದ ಏಳಿಗೆಗಾಗಿ ನಾಲ್ಕು–ಐದು ಅಂಶಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಪ್ರಸ್ತಾಪಿಸಿ, ಜಾರಿಗೆ ತರುವಂತೆ ಕೋರಿದ್ದೇವೆ’ ಎಂದು ಹೇಳಿದರು.

ಗೊಬ್ಬುರವಾಡಿಯ ಪೌರಾದೇವಿ ಶಕ್ತಿಪೀಠದ ಬಳೀರಾಮ ಮಹಾರಾಜ ಮಾತನಾಡಿ, ‘ಸಮುದಾಯ ಎಲ್ಲರೂ ಶಿಕ್ಷಣಕ್ಕೆ ಮಹತ್ವ ಕೊಡಬೇಕು. ಸರ್ಕಾರ ಎಷ್ಟೇ ಅಭಿವೃದ್ಧಿ ಮಾಡಿದರೂ ಶಿಕ್ಷಣದಿಂದ ಮತ್ತಷ್ಟು ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ಸಮುದಾಯದಲ್ಲಿ ಬಹುತೇಕ ಕುಟುಂಬಗಳು ಬಡತನದಲ್ಲಿವೆ. ಸಮುದಾಯದ ಪ್ರತಿಯೊಬ್ಬರು ಬಡತನ ಹೋಗಲಾಡಿಸುವಲ್ಲಿ ಶ್ರಮಿಸಬೇಕಿದೆ. ಯುವಕರು ದುಶ್ಚಟಗಳಿಂದ ದೂರ ಇರಬೇಕು’ ಎಂದರು.

ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿ, ‘ಸೇವಾಲಾಲ್ ಮಹಾರಾಜರು ದೇವರ ಸ್ವರೂಪ. ಅವರು ಆಡಿದ ಪ್ರತಿ ನುಡಿಯು ಸತ್ಯವಾದದ್ದು’ ಎಂದು ಹೇಳಿದರು.

ಕಲಬುರಗಿ ರಂಗಾಯಣ ಉಪನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಬಂಜಾರ ಸಮುದಾಯದ ಮುಖಂಡರಾದ ವಿಠಲ ಜಾಧವ, ಗಣಪತಿ ರಾಠೋಡ, ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ.ಜಾಧವ, ರಾಮಚಂದ್ರ ಜಾಧವ, ಪಿ.ವಿ.ನಾಯಕ್, ರಾಮಚಂದ್ರ ಜಾಧವ, ಸುನೀಲ್ ಚವ್ಹಾಣ್, ಪೇಮಕುಮಾರ ರಾಠೋಡ, ಶಿಷ್ಠಾಚಾರ ತಹಸೀಲ್ದಾರ್ ನಿಸಾರ್ ಅಹ್ಮದ್, ರಾಜಕುಮಾರ ರಾಠೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.