ಶಹಾಬಾದ್: ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಹಾಬಾದ್ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಶನಿವಾರ ನಡೆಯಲಿರುವ ಸಮ್ಮೇಳನಕ್ಕೆ ಮೆರುಗು ಬರಲು ಮುಖ್ಯ ರಸ್ತೆಗಳಲ್ಲಿ ಕನ್ನಡದ ಧ್ವಜ, ಬಂಟಿಗ್ಸ್ ಕಟ್ಟಿ ನಗರವನ್ನು ಸುಂದರಗೊಳಿಸಲಾಗಿದೆ. ಸಮ್ಮೇಳನದ ಕುರಿತು ಎಲ್ಲೆಡೆ ಪ್ರಚಾರ ಮಾಡಲಾಗಿದೆ. ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಆವರಣದಲ್ಲಿ ಪರೋಪಕಾರಿ ದಿ. ಸಂತೋಷ ಇಂಗಿನಶೆಟ್ಟಿ ವೇದಿಕೆ ನಿರ್ಮಿಸಲಾಗಿದೆ. ಸಮ್ಮೇಳನದ ಮಹಾದ್ವಾರಕ್ಕೆ ಚನ್ನಣ್ಣ ವಾಲಿಕಾರ ಹೆಸರಿಡಲಾಗಿದೆ. ವಿವಿಧ ಗ್ರಾಮಗಳಿಂದ ಬರುವ ಪ್ರಮುಖ ರಸ್ತೆಗಳು ಸೇರುವ ಸ್ಥಳಗಳಲ್ಲಿ ಮಿತಾಕ್ಷರ ದ್ವಾರ, ಶರಣಬಸವೇಶ್ವರ ದ್ವಾರ, ಚಂದ್ರಲಾ ಪರಮೇಶ್ವರಿ ದ್ವಾರ ಸಿದ್ಧಪಡಿಸಲಾಗಿದೆ.
ಕಸಾಪ ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ ಹಾಗೂ ಸಮ್ಮೇಳನದ ಸಂಚಾಲಕ ಮರಿಯಪ್ಪ ಹಳ್ಳಿ ನೇತೃತ್ವದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಜ. 4ರ ಬೆಳಗ್ಗೆ 8.30ಕ್ಕೆ ನಗರಸಭೆ ಅಧ್ಯಕ್ಷೆ ಚಂಪಾಬಾಯಿ ಮೇಸ್ತ್ರಿ, ರಾಷ್ಟ್ರ ಹಾಗೂ ಶರಣಬಸಪ್ಪ ಕೋಬಾಳ ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ತಹಶೀಲ್ದಾರ್ ಜಗದೀಶ ಚೌರ ಮತ್ತು ಪೌರಾಯುಕ್ತ ಡಾ. ಕೆ. ಗುರುಲಿಂಗಪ್ಪ ಉಪಸ್ಥಿತರಿರುವರು.
ಬೆಳಿಗ್ಗೆ 9ಕ್ಕೆ ಬಸವೇಶ್ವರ ವೃತ್ತದಿಂದ ಸಮ್ಮೇಳನಾಧ್ಯಕ್ಷ ಎಚ್.ಬಿ.ತೀರ್ಥೆ ಅವರ ಮೆರವಣಿಗೆ ಜರುಗಲಿದ್ದು, ನಗರಸಭೆ ಉಪಾಧ್ಯಕ್ಷೆ ಫಾತೀಮಾ ಬೇಗಂ ಚಾಲನೆ ನೀಡುವರು. ಅಂದು ಬೆಳಗ್ಗೆ 11 ಗಂಟೆಗೆ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಪ್ರಥಮ ಗೋಷ್ಠಿಯಲ್ಲಿ ಶಹಾಬಾದ್ ತಾಲ್ಲೂಕಿನ ವೈಶಿಷ್ಟ್ಯ ಕುರಿತು ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಉಪನ್ಯಾಸ ನೀಡುವರು. ಮಲ್ಲಿನಾಥ ಪಾಟೀಲ ಸಮ್ಮೇಳನದ ಅಧ್ಯಕ್ಷರ ಬದುಕು ಬರಹ ಕುರಿತು ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 3 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ.ನೀಲಮ್ಮ ಕಳ್ಳಿ ಅಧ್ಯಕ್ಷತೆ ವಹಿಸುವರು.
ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮಲ್ಲಿನಾಥ ತಳವಾರ ಸಮಾರೋಪ ನುಡಿಗಳನ್ನಾಡಲಿದ್ದಾರೆ. ವಿವಿಧ ಕ್ಷೇತ್ರದ 25 ಜನ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.