ಕಲಬುರಗಿ: ಅಜಯ್ ಹಿಲೋರಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಈಶಾನ್ಯ ವಲಯದ ಡಿಐಜಿಪಿ ಸ್ಥಾನಕ್ಕೆ 2009ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶಾಂತನು ಸಿನ್ಹಾ ಅವರನ್ನು ವರ್ಗಾವಣೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
ಜುಲೈ 14ರಂದು ಹೊರಡಿಸಿದ್ದ ಆದೇಶದಲ್ಲಿ ಐಪಿಎಸ್ ಅಧಿಕಾರಿ ಡಾ.ಚಂದ್ರಗುಪ್ತ ಅವರನ್ನು ಈ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಗುರುವಾರ ವರ್ಗಾವಣೆ ಪಟ್ಟಿಯನ್ನು ಮಾರ್ಪಾಡು ಮಾಡಲಾಗಿದ್ದು, ಚಂದ್ರಗುಪ್ತ ಅವರು ಗುಪ್ತಚರ ವಿಭಾಗದ ಐಜಿಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶಾಂತನು ಸಿನ್ಹಾ ಅವರು ಸಿಐಡಿ ಡಿಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಬೀದರ್‌ನ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದರು.
ವಿಜಯಕ್ರಾಂತಿಗೆ ಕೈತಪ್ಪಿದ ಯಾದಗಿರಿ
ಕಲಬುರಗಿ: ಜೇವರ್ಗಿ ಮೂಲದ ಪೊಲೀಸ್ ಅಧಿಕಾರಿ ವಿಜಯಕ್ರಾಂತಿ ಅವರಿಗೆ ಯಾದಗಿರಿ ಡಿವೈಎಸ್ಪಿ ಹುದ್ದೆಯ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ಅವರನ್ನು ಮಂಗಳೂರು ದಕ್ಷಿಣ ಉಪವಿಭಾಗಕ್ಕೆ ವರ್ಗಾಯಿಸಿ ಗುರುವಾರ ಆದೇಶ ಹೊರಡಿಸಿದೆ.
ವಿಜಯಕ್ರಾಂತಿ ಅವರನ್ನು ಯಾದಗಿರಿ ಉಪವಿಭಾಗಕ್ಕೆ ವರ್ಗಾಯಿಸಿ ಪೊಲೀಸ್ ಮಹಾನಿರ್ದೇಶಕರು ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದ್ದರೂ ಆಡಳಿತ ಪಕ್ಷದ ಶಾಸಕರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಡ್ಡಿಪಡಿಸಿದ್ದರು ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು. ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅವಕಾಶ ನೀಡದಿದ್ದರೆ ಧರಣಿ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.