ADVERTISEMENT

ಕಲಬುರಗಿ | ಆಹಾರ ಮಳಿಗೆ, ಒಳಾಂಗಣ ಕ್ರೀಡೆ ಸ್ಥಗಿತ

ಅಪ್ಪ ಕೆರೆ ಉದ್ಯಾನಕ್ಕೆ ಮತ್ತೆ ಸಂಕಷ್ಟ; ಉದ್ಯಾನಕ್ಕೆ ಬರುವವರ ಸಂಖ್ಯೆ ಕುಸಿತ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:13 IST
Last Updated 18 ಜುಲೈ 2025, 6:13 IST
ಕಲಬುರಗಿಯ ಶರಣಬಸವೇಶ್ವರ ಕೆರೆ ಉದ್ಯಾನದಲ್ಲಿರುವ ಆಹಾರ ಮಳಿಗೆಗಳು ಕೆಲ ತಿಂಗಳಿಂದ ಮುಚ್ಚಿದೆ    ಪ್ರಜಾವಾಣಿ ಚಿತ್ರ
ಕಲಬುರಗಿಯ ಶರಣಬಸವೇಶ್ವರ ಕೆರೆ ಉದ್ಯಾನದಲ್ಲಿರುವ ಆಹಾರ ಮಳಿಗೆಗಳು ಕೆಲ ತಿಂಗಳಿಂದ ಮುಚ್ಚಿದೆ    ಪ್ರಜಾವಾಣಿ ಚಿತ್ರ   

ಕಲಬುರಗಿ: ನಗರದ ಜನತೆಗೆ ಅದರಲ್ಲೂ ಮಕ್ಕಳು, ಹಿರಿಯರಿಗೆ ವಾಕಿಂಗ್, ಆಟೋಟಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ವರ್ಷದ ಜನವರಿಯಲ್ಲಿ ಆರಂಭಗೊಂಡಿರುವ ಶರಣಬಸವೇಶ್ವರ ಕೆರೆ ಉದ್ಯಾನದಲ್ಲಿ ಆಹಾರ ಮಳಿಗೆಗಳು ಹಾಗೂ ಒಳಾಂಗಣ ಕ್ರೀಡೆಗಳು ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. ಉದ್ಯಾನಕ್ಕೆ ಭೇಟಿ ನೀಡುವವರಿಗೆ ಇದು ನಿರಾಸೆ ಮೂಡಿಸಿದೆ.

ಫುಡ್‌ ಜೋನ್‌ನಲ್ಲಿ ಆಹಾರ ಮಳಿಗೆಗಳನ್ನು ಆರಂಭಿಸಲು ಹಾಗೂ ಮಕ್ಕಳ ಕಾರುಗಳಿರುವ ಕ್ರೀಡಾ ಸಂಕೀರ್ಣದ ನಿರ್ವಹಣೆಯನ್ನು ಸಂಸ್ಥೆಯೊಂದಕ್ಕೆ ಟೆಂಡರ್ ನೀಡಲಾಗಿತ್ತು. ಆದರೆ, ಸರಿಯಾಗಿ ನಿರ್ವಹಣೆ ಮಾಡಲು ಆಗದ್ದರಿಂದ ಟೆಂಡರ್ ರದ್ದುಪಡಿಸಲಾಗಿದೆ ಎಂದು ಉದ್ಯಾನದ ಉಸ್ತುವಾರಿ ನೋಡಿಕೊಳ್ಳುವ ಪ್ರಾದೇಶಿಕ ಆಯುಕ್ತರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರದ ಬಡಾವಣೆಗಳು, ಅಕ್ಕ ಪಕ್ಕದ ಗ್ರಾಮಗಳು, ಪಟ್ಟಣಗಳಿಂದ ಸಾರ್ವಜನಿಕರು ಉದ್ಯಾನದಲ್ಲಿ ವಿಹಾರಕ್ಕಾಗಿ ಬರುತ್ತಾರೆ. ಜೊತೆಗೆ ಕೆರೆಯಲ್ಲಿಯೂ ಬೋಟಿಂಗ್‌ಗೆ ಹೋಗುತ್ತಾರೆ. ಉದ್ಯಾನದಲ್ಲಿಯೇ ಊಟ, ಉಪಾಹಾರ, ತಂಪು ಪಾನೀಯ, ಕುಡಿಯುವ ನೀರಿನ ವ್ಯವಸ್ಥೆಯಾದರೆ ಇನ್ನಷ್ಟು ಹೊತ್ತು ಇರುತ್ತಾರೆ. ಆಹಾರ ಮಳಿಗೆಗಳು ಬಂದ್ ಆಗಿದ್ದರಿಂದ ಸಾರ್ವಜನಿಕರು ಹೊರಗಡೆಯ ಹೋಟೆಲ್‌ಗಳನ್ನು ಆಶ್ರಯಿಸಬೇಕಿದೆ.

ADVERTISEMENT

ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಅವರು ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿದ್ದ ಸಂದರ್ಭದಲ್ಲಿ ಆಸಕ್ತಿ ವಹಿಸಿ ಶರಣಬಸವೇಶ್ವರ ಕೆರೆ ಉದ್ಯಾನವನ್ನು ನಿರ್ಮಿಸಿದ್ದರು. ಕೆಲ ಕಾಲದ ಬಳಿಕ ನಿರ್ವಹಣೆ ಇಲ್ಲದೇ ಉದ್ಯಾನವನ್ನು ಮುಚ್ಚಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಪ್ರಾದೇಶಿಕ ಆಯುಕ್ತರಾಗಿದ್ದ ಕೃಷ್ಣ ಬಾಜಪೇಯಿ ಅವರ ಆಸಕ್ತಿಯ ಫಲವಾಗಿ ಉದ್ಯಾನಕ್ಕೆ ಹೊಸ ರೂಪ ನೀಡುವ ಕಾರ್ಯ ಆರಂಭವಾಗಿತ್ತು. ಕಾಮಗಾರಿ ಮುಕ್ತಾಯವಾದ ಬಳಿಕ 2024ರ ಜನವರಿಯಲ್ಲಿ ನವೀಕೃತ ಉದ್ಯಾನವನ್ನು ಲೋಕಾರ್ಪಣೆ ಮಾಡಲಾಗಿತ್ತು. ಅದಾದ ಕೆಲ ದಿನಗಳಲ್ಲಿ ಆಹಾರ ಮಳಿಗೆಗಳೂ ಆರಂಭವಾಗಿದ್ದವು. ಆದರೆ, ನಿರ್ವಹಣೆಯ ಲೋಪದಿಂದಾಗಿ ಆಹಾರ ಮಳಿಗೆಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು.

ಸದ್ಯಕ್ಕೆ ಉದ್ಯಾನದಲ್ಲಿ ವಾಕಿಂಗ್‌, ಜೋಕಾಲಿ ಆಡುವುದು, ಕುಳಿತುಕೊಳ್ಳಲು ಅವಶ್ಯವಿರುವಷ್ಟು ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ಬ್ಯಾಟರಿ ಚಾಲಿತ ಮಕ್ಕಳ ಕಾರು, ಕೃತಕ ಕೆರೆಯಲ್ಲಿ ಬೋಟಿಂಗ್‌ನಂತಹ ಕೆಲವೇ ಕೆಲವು ಸೌಲಭ್ಯಗಳನ್ನು ಮಾಡಲಾಗಿದೆ. ಆಹಾರ ಮಳಿಗೆಗಳ ಪಕ್ಕದ ಕ್ರೀಡಾ ಸಂಕೀರ್ಣವನ್ನೂ ಬಳಕೆಗೆ ಮುಕ್ತಗೊಳಿಸಿದರೆ ಇನ್ನಷ್ಟು ಮಕ್ಕಳನ್ನು ಉದ್ಯಾನದತ್ತ ಸೆಳೆಯಬಹುದು ಎನ್ನುತ್ತಾರೆ ಮಕ್ಕಳೊಂದಿಗೆ ಉದ್ಯಾನಕ್ಕೆ ಬಂದಿದ್ದ ನ್ಯೂ ರಾಘವೇಂದ್ರ ನಗರದ ನಿವಾಸಿಗಳಾದ ಗಾಯತ್ರಿ ಚಂದ್ರಶೇಖರ್ ಹಾಗೂ ಶ್ರೀವಿದ್ಯಾ.

ಮಕ್ಕಳ ಆಕರ್ಷಣೆ ಕೇಂದ್ರವಾಗಬೇಕಿದ್ದ ಶರಣಬಸವೇಶ್ವರ ಕೆರೆ ಉದ್ಯಾನದ ಆಟದ ಸಂಕೀರ್ಣ ಮುಚ್ಚಿರುವುದು          ಪ್ರಜಾವಾಣಿ ಚಿತ್ರ
ಉದ್ಯಾನದಲ್ಲಿ ಆಹಾರ ಮಳಿಗೆ ಇಲ್ಲದ್ದರಿಂದ ಜನರಿಗೆ ತೊಂದರೆಯಾಗುತ್ತಿದೆ. ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಗಮನ ಹರಿಸಬೇಕು
ಭರತ್ ಭೂಷಣ್ ವಾಸ್ತುಶಿಲ್ಪಿ

‘ಪ್ರಾದೇಶಿಕ ಆಯುಕ್ತರಿಂದ ಸಭೆ’ ಹೊಸದಾಗಿ ಪ್ರಾದೇಶಿಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಜಹೀರಾ ನಸೀಂ ಅವರು ಕೆರೆ ಉದ್ಯಾನ ಸಲಹಾ ಸಮಿತಿ ಸದಸ್ಯರಿಗೆ ಕರೆ ಮಾಡಿ ಉದ್ಯಾನ ನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಕೇಳಿದ್ದಾರೆ. ಶೀಘ್ರವೇ ಈ ಬಗ್ಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ಸದಸ್ಯರೊಬ್ಬರು ಮಾಹಿತಿ ನೀಡಿದರು. ‘ಕೆರೆಯ ಉದ್ಯಾನ ಪ್ರವೇಶಕ್ಕೆ ದೊಡ್ಡವರಿಗೆ ₹20 ಹಾಗೂ ಮಕ್ಕಳಿಗೆ ₹10 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು ಇಲ್ಲಿ ಆಹಾರ ಮಳಿಗೆ ಹಾಗೂ ಮಕ್ಕಳನ್ನು ಸೆಳೆಯುವ ಆಟೋಟಗಳು ಇಲ್ಲವೆಂದರೆ ಇಲ್ಲಿಗೆ ಬರುವ ಬದಲು ಉಚಿತ ಪ್ರವೇಶ ಇರುವ ಸಾರ್ವಜನಿಕ ಉದ್ಯಾನಕ್ಕೆ ಹೋಗುತ್ತಾರೆ. ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾದರೆ ಉದ್ಯಾನ ನಿರ್ವಹಣೆ ಮಾಡುವ ಸಿಬ್ಬಂದಿ ಭದ್ರತಾ ಸಿಬ್ಬಂದಿಗೂ ವೇತನ ಕೊಡಲು ಸಮಸ್ಯೆಯಾಗುತ್ತದೆ ಎಂಬ ಆತಂಕ ಕಾಡುತ್ತಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.