ಪ್ರಜಾವಾಣಿ ವಾರ್ತೆ
ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಬುಧವಾರ ಸಂಜೆಯಿಂದ ಗುರುವಾರ ಬೆಳಿಗ್ಗೆವರೆಗೆ ಮಂಗವೊಂದು ಮನುಷ್ಯರ ಮೇಲೆ ಏಕಾಏಕಿ ದಾಳಿ, ಮೂವರನ್ನು ಗಂಭೀರವಾಗಿ ಗಾಯಗೊಳಿಸಿದೆ.
ಗ್ರಾಮದ ನೀಲಮ್ಮ ದತ್ತು ಹೂಗಾರ, ಅಪ್ಪು ಪ್ರಕಾಶ ಕೋಡ್ಲಿ, ಮಹ್ಮದ್ ಫಾರೂಕ್ ಗೌಸ್ ಪಟೇಲ್ ಅವರ ಮೇಲೆ ಮಂಗ ದಾಳಿ ಮಾಡಿದೆ. ಮೂವರಿಗೆ ಕಾಲು, ಕೈಗಳಿಗೆ ಬಲವಾಗಿ ಕಚ್ಚಿದೆ. ಗಾಯಗೊಂಡವರನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಚಿತ್ತಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಮಂಗಕ್ಕೆ ಹುಚ್ಚು ಹಿಡಿದಿದ್ದು, ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ. ಗ್ರಾಮಸ್ಥರು ಬಡಿಗೆ ಹಿಡಿದು ಮಂಗವನ್ನು ಬೆನ್ನಟ್ಟಿ ಅಡವಿಯತ್ತ ಓಡಿಸಿದ್ದರು. ಆದರೇ ಪುನಃ ಗ್ರಾಮದಲ್ಲಿರುವ ಮಂಗಗಳ ಗುಂಪಿಗೆ ಬಂದು ಸೇರಿಕೊಂಡಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
‘ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯು, ಮಂಗವನ್ನು ಸೆರೆ ಹಿಡಿಯಬೇಕು. ಗಾಯಗೊಂಡವರಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಗ್ರಾಮದ ಈರಣ್ಣ ಕೋಳಕೂರ, ಜಗನ್ನಾಥ, ಮೈನೋದ್ದಿನ್ ತೊನಸನಳ್ಳಿ ಮನವಿ ಮಾಡಿದ್ದಾರೆ.
ಕಾರ್ಯಾಚರಣೆ: ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯು ದಂಡೋತಿ ಗ್ರಾಮಕ್ಕೆ ಭೇಟಿ ನೀಡಿ, ದಾಳಿ ಮಾಡುತ್ತಿರುವ ಮಂಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಂಡಿದ್ದಾರೆ.
‘ದಾಳಿ ಮಾಡುತ್ತಿರುವ ಮಂಗವನ್ನು ಸೆರೆ ಹಿಡಿಯಲಾಗುವುದು. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಲಾಗಿದೆ. ಅವರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ಪ್ರಾದೇಶಿಕ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.