
ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಕೆರೆಯಲ್ಲಿ ಆಕ್ರಮಣಕಾರಿಯಾಗಿ ಬೆಳೆಯುತ್ತಿರುವ ‘ಜಲ ಕಳೆ’ (ಅಂತರಗಂಗೆ) ಇಡೀ ಕೆರೆಯ ಸೌಂದರ್ಯವನ್ನು ಆಪೋಶನ ತೆಗೆದುಕೊಳ್ಳುತ್ತಿದೆ.
ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯ ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರವು ಈ ಕೆರೆಯನ್ನು ನಿರ್ವಹಿಸುತ್ತಿದೆ. ಸದ್ಯ ವ್ಯಾಪಕ ಮಳೆಯಿಂದ ಕೆರೆಯಲ್ಲಿ ಅಪಾರ ಜಲರಾಶಿ ತುಂಬಿದೆ. ಕೆರೆ ಸುತ್ತಲೂ ಸಾಲು–ಸಾಲು ಮರಗಳು ಕೆರೆಯ ಅಂದವನ್ನು ಹೆಚ್ಚಿಸಿವೆ. ಇಂಥ ಸುಂದರ ಪರಿಸರವುಳ್ಳ ಕೆರೆಯ ಅಂಗಳದಲ್ಲಿ ದೋಣಿ ವಿಹಾರವೂ ಸಾಗಿದೆ.
ಆದರೆ, ಜಲಕಳೆ ಸಸ್ಯ ಹಾಗೂ ಜನರು ತ್ಯಾಜ್ಯ ತಂದು ಕೆರೆಗೆ ಸುರಿಯುತ್ತಿರುವುದು ಕೆರೆ ಅಂದಕ್ಕೆ ಕಂಟಕವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಈ ಅಂತರಗಂಗೆ ಕಸವು ಒಂದೆಡೆ ಕೆರೆಯ ಅಂದ ಹಾಳುಗೆಡಹುತ್ತಿದೆ. ಮತ್ತೊಂದೆಡೆ ಪ್ರವಾಸಿಗರ ದೋಣಿ ವಿಹಾರಕ್ಕೂ ತೊಡಕುಂಟು ಮಾಡುತ್ತಿದೆ.
ಕೆರೆಯ ಉದ್ಯಾನದ ಕಡೆಯಿಂದ ಎರಡೂ ಪಾರ್ಶ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಜಲಕಳೆ ಸಸ್ಯ ಆವರಿಸಿದ್ದು, ಕೊಳಚೆ ನೀರಿನಲ್ಲಿ ಬೆಳೆದ ಕಸದಂತೆ ಭಾಸವಾಗುತ್ತಿದೆ. ಪೆಡಲ್ ದೋಣಿ ವಿಹಾರದ ಪ್ರದೇಶವನ್ನು ಕೆಲವೇ ಮೀಟರ್‌ಗೆ ಕುಗ್ಗಿಸಿದೆ. ಜೊತೆಗೆ ಪೆಡಲ್ ಬೋಟ್‌ನಲ್ಲಿ ಕುಳಿತು ಕೆರೆಯಲ್ಲಿ ವಿಹರಿಸುತ್ತ ಕೆರೆ ಅಂದ ಆಸ್ವಾದಿಸುವ ಪ್ರವಾಸಿಗರ ಕನಸಿಗೆ ಭಂಗ ತರುತ್ತಿದೆ. ಜೋರಾಗಿ ಬೀಸುವ ಗಾಳಿಯೊಟ್ಟಿಗೆ ಈ ಕಸವು ನೀರಿನ ಮೇಲೆ ತೇಲುತ್ತ ಬಂದು ಪೆಡಲ್ ದೋಣಿ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ.
‘₹50 ಪಾವತಿಸಿ ದೋಣಿ ವಿಹಾರ ನಡೆಸುತ್ತ ಖುಷಿ ಪಡೋಣ ಎಂದು ಪೆಡಲ್ ಬೋಟ್ ಹತ್ತಿದೆ. ಅದನ್ನು ನಡೆಸಲು ಸರಿಯಾಗಿ 10 ಮೀಟರ್ ಕೂಡ ಜಾಗವಿಲ್ಲ. ಕೆರೆ ಅಂಗಳದಲ್ಲಿ ಬೆಳೆದ ಜಲಕಳೆ ಸಸ್ಯವನ್ನು ತೆರೆವುಗೊಳಿಸಿದರೆ, ದೋಣಿ ವಿಹಾರಕ್ಕೆ ಸಾಕಷ್ಟು ಜಾಗ ಸಿಗುತ್ತದೆ. ಇಲ್ಲದಿದ್ದರೆ ಕಾಟಾಚಾರಕ್ಕೆ ದೋಣಿ ವಿಹಾರ ನಡೆಸಿದಂತಾಗುತ್ತದೆ’ ಎಂದು ಪ್ರವಾಸಿಗರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ವಿಶಾಲ ಕೆರೆ, ಸಮೃದ್ಧ ಜಲರಾಶಿ ನೋಡಿ ಸಾಕಷ್ಟು ಪ್ರವಾಸಿಗರು ಅಪ್ಪ ಕೆರೆಯತ್ತ ಆಕರ್ಷಿತರಾಗುತ್ತಾರೆ. ಆದರೆ, ಕೆರೆ ಅಂಗಳದಲ್ಲಿ ಬೆಳೆದ ಜಲಕಳೆ ಸಸ್ಯ ನೋಡಿ, ಶುಚಿತ್ವವೇ ಇಲ್ಲವೆಂದು ಭಾವಿಸುತ್ತಾರೆ. ನೀರಿನ ಗುಣಮಟ್ಟದ ಬಗೆಗೂ ಆತಂಕದಿಂದಲೇ ವಿಚಾರಿಸುತ್ತಾರೆ. ಕೆಲವರು ಧೈರ್ಯ ತೋರಿದರೂ, ಹಲವರು ದೋಣಿ ವಿಹಾರದಿಂದ ದೂರ ಉಳಿಯುತ್ತಾರೆ’ ಎಂದು ಅಪ್ಪ ಕೆರೆ ಉದ್ಯಾನದ ಸಿಬ್ಬಂದಿಯೊಬ್ಬರು ಅಳಲು ತೊಡಿಕೊಂಡರು.
ಅಪ್ಪ ಕೆರೆಯಲ್ಲಿನ ‘ಜಲಕಳೆ’ ಸಸ್ಯದ ಸಮಸ್ಯೆ ಗಮನಕ್ಕಿದೆ. ಈ ಕುರಿತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕಲಬುರಗಿ ಪ್ರಾದೇಶಿಕ ಆಯುಕ್ತರ ಗಮನ ಸೆಳೆಯಲಾಗಿದೆಅವಿನಾಶ ಶಿಂದೆ ಪಾಲಿಕೆ ಆಯುಕ್ತ
ದೋಣಿ ವಿಹಾರ ನಡೆಸಲು ಕೆರೆಗೆ ಬಂದಿದ್ದೆ. ಇಲ್ಲಿನ ಕಸ ನೋಡಿ ಬೇಸರವಾಯಿತು. ನೀರೂ ವಾಸನೆ ಹೊಡೆಯುತ್ತಿದೆ. ಸಂಬಂಧಿಸಿದವರು ಶುಚಿತ್ವಕ್ಕೆ ಆದ್ಯತೆ ನೀಡಬೇಕುಬಸವರಾಜ ಕಲಬುರಗಿ ನಿವಾಸಿ