ADVERTISEMENT

ಅಫಜಲಪುರ: ಅದ್ದೂರಿ ಸಂಗಮೇಶ್ವರ ಪಲ್ಲಕ್ಕಿ, ರಥೋತ್ಸವ

ಶಿರವಾಳ ಗ್ರಾಮದಲ್ಲಿ ಭಕ್ತ ಸಾಗರ: ಮನೆ ಮಾಡಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 7:18 IST
Last Updated 12 ಡಿಸೆಂಬರ್ 2025, 7:18 IST
ಅಫಜಲಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಗುರುವಾರ ವೀರಸಂಗಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಭವ್ಯ ರಥೋತ್ಸವ ಜರುಗಿತು
ಅಫಜಲಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಗುರುವಾರ ವೀರಸಂಗಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಭವ್ಯ ರಥೋತ್ಸವ ಜರುಗಿತು   

ಅಫಜಲಪುರ: ತಾಲ್ಲೂಕಿನ ಶಿರವಾಳ ಗ್ರಾಮದ ವೀರಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳ್ಳಿ ಮೂರ್ತಿಗಳಿಗೆ ಬೆಳಗಿನ ಜಾವದಿಂದ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಿತು. ಇನ್ನೂ ಧ್ವಜಾರೋಹಣ, ಕಳಸಾರೋಹಣ, ಪುರಾಣ ಮಹಾಮಂಗಲದ ನಂತರ ಪಲ್ಲಕ್ಕಿಯು ಭೋರಿ ಹಳ್ಳಕ್ಕೆ ತೆರಳಿ ಗಂಗಸ್ನಾನ ನೆರವೇರಿತು. 

ರಾತ್ರಿ 10 ಗಂಟೆಗೆ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಅಗ್ನಿ ಪುಟುವು ನಡೆಯಿತು. ಗುರುವಾರ ಬೆಳಗಿನ ಜಾವ ವೀರಸಂಗಮೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪುರವಂತರೊಂದಿಗೆ ಎರಡು ಸುತ್ತು ಅಗ್ನಿ ಕುಂಡವನ್ನು ಹಾಯಲಾಯಿತು. ನಂತರ ಪಲ್ಲಕ್ಕಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 2ಕ್ಕೆ ಮಠಕ್ಕೆ ತಲುಪಿತು. ಸಂಜೆ 6 ಗಂಟೆಗೆ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಸ್ವಾಮೀಜಿ ಅವರು ಆಶಿರ್ವಚನ ನೀಡಿ, ‘ಸತ್ಯ, ಶುದ್ಧವಾದ ಸನ್ನಡತೆಯಿಂದ ಕಾಯಕ ಮಾಡಿದಾಗ ಫಲ‌ ಪ್ರಾಪ್ತಿಯಾಗಿ ಯಶಸ್ಸು ಸಾಧ್ಯವಾಗುತ್ತದೆ. ಜೀವನದಲ್ಲಿ ಗುರಿ ತಲುಪಲು ಅಚಲವಾದ ಶ್ರದ್ಧೆ ಮತ್ತು ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ’ ಎಂದರು. 

ADVERTISEMENT

‘ಜಾತ್ರೆ, ಹಬ್ಬ, ಉತ್ಸವಗಳು ಭಾರತೀಯತೆಯ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ. ಇದನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕೈಲಾಸಲಿಂಗ ಶಿವಾಚಾರ್ಯರು, ವೀರಮಹಾಂತ ಶಿವಾಚಾರ್ಯರು, ಪಾಂಡುರಂಗ ಮಹಾರಾಜರು, ಶರಣಯ್ಯ ಹಿರೇಮಠ, ಚನ್ನಯ್ಯ ಹಿರೇಮಠ, ಮಲ್ಕಣ್ಣ ಲಾಳಸಂಗಿ, ಚಂದ್ರಕಾಂತ ಇಬ್ರಾಹಿಂಪೂರ, ಮಂಜುನಾಥ ಅಂಜುಟಗಿ, ಬಸವರಾಜ ಲಾಳಸಂಗಿ ಸೇರಿದಂತೆ ಇತರರು ಇದ್ದರು. ಬಿ.ಡಿ.ಅಂಜುಟಗಿ ನಿರೂಪಿಸಿ ವಂದಿಸಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರ:

ಕಾರ್ಯಕ್ರಮದಲ್ಲಿ ಅಂಜುಟಗಿ ಆಸ್ಪತ್ರೆಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ 700 ಜನರಿಗೆ ಆರೋಗ್ಯ ತಪಾಸಣೆ ನಡೆಸಿ, ಔಷಧಿ ವಿತರಿಸಲಾಯಿತು. ಡಾ.ಶ್ರೀಶೈಲ ಅಂಜುಟಗಿ, ಡಾ.ಯಶ್ವಂತ ಅಂಜುಟಗಿ, ಡಾ.ಸುಮನ ಅಂಜುಟಗಿ, ಡಾ.ಸುಷ್ಮಾ ಅಂಜುಟಗಿ, ಸಂಚಾಲಕರಾದ ಸಂಗಮೇಶ ಅಂಜುಟಗಿ, ಮಹಾಂತೇಶ ಅಂಜುಟಗಿ ಇತರರಿದ್ದರು.

ವೀರಸಂಗಮೇಶ್ವರರು ಭಕ್ತರ ನಿಷ್ಕಲ್ಮಶ ಭಕ್ತಿಯನ್ನು ಸ್ವೀಕರಿಸಿ ಸಕಲವನ್ನು ಕರುಣಿಸುವ ಮಹಾನ ಚೇತನರಾಗಿದ್ದಾರೆ. ಗ್ರಾಮದ ಜನರೆಲ್ಲರೂ ಒಟ್ಟಾಗಿ ವಿಜೃಂಭಣೆಯಿಂದ ಜಾತ್ರೆ ಆಚರಿಸುವುದು ಮಾದರಿಯಾಗಿದೆ
ಅರುಣಕುಮಾರ್‌ ಪಾಟೀಲ ಅಧ್ಯಕ್ಷರು ಕ.ಕ.ರ.ಸಾ.ನಿಗಮ
ಮೆರಗು ನೀಡಿದ ಕಲಾ ತಂಡಗಳು
ಯಲ್ಲಾಲಿಂಗೇಶ್ವರ ಭಜನಾ ಸಂಘ ಅಂಬಿಗರ ಚೌಡಯ್ಯ ಭಜನಾ ಸಂಘ ಡೊಳ್ಳು ಕುಣಿತ ಗೊಂಬೆ ಕುಣಿತ ಬ್ಯಾಂಡ್ ಬ್ರಾಸ್ ತಮಟೆ ಚಿಟ್ಟ ಹಲಗಿ ನವಿಲು ಕುಣಿತ ಕುದುರೆ ಕುಣಿತ ಮಾರ್ಗದುದ್ದಕ್ಕೂ ರಥೋತ್ಸವದ ಮೆರಗು ಹೆಚ್ಚಿಸಿದವು.