ಚಿತ್ತಾಪುರ: ‘ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ, ದಿನಾಲೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳಿಂದ ಸೃಜನಾತ್ಮಕತೆ ಜತೆಗೆ ಬದುಕು ರೂಪಿಸಿಕೊಳ್ಳಲು ಬೇಕಾದ ಎಲ್ಲ ಮಾಹಿತಿ ದೊರೆಯುತ್ತದೆ’ ಎಂದು ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಶಿವಶರಣಪ್ಪ ಬಿರಾದಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪತ್ರಿಕೆಗಳಿಂದ ಸಮಾಜದ ನಿತ್ಯ ಆಗುಹೋಗುಗಳ ಜತೆಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಸಾಂಸ್ಕೃತಿ ಪರಪಂರೆ, ಕಲೆ, ಸಾಹಿತ್ಯ, ಇತಿಹಾಸ ಸೇರಿದಂತೆ ದೇಶ–ವಿದೇಶಗಳ ವಿಷಯ ತಿಳಿದುಕೊಳ್ಳಬಹುದು ಎಂದು ಹೇಳಿದರು.
‘ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಮಾಹಿತಿ, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪ್ರಶ್ನೋತ್ತರಗಳನ್ನು ನೀಡುತ್ತಿವೆ. ಪ್ರಚಲಿತ ವಿದ್ಯಮಾನಗಳ ಕೈಗನ್ನಡಿಯಾಗಿವೆ. ಒಂದು ಪತ್ರಿಕೆ ಪ್ರಕಟವಾಗಲು ಅನೇಕರ ಶ್ರಮವಿರುತ್ತದೆ. ವಿಷಯ ಸಂಗ್ರಹಿಸಿ, ಖಚಿತಪಡಿಸಿಕೊಂಡು ಓದುಗರಿಗೆ ನೀಡುವ ಕೆಲಸ ಸರಳವಲ್ಲ’ ಎಂದು ಹೇಳಿದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಕಾಶಿರಾಯ ಕಲಾಲ, ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ಧರಾಜ ಮಲಕಂಡಿ ಅವರು ಮಾತನಾಡಿದರು.
ನಾಗಯ್ಯಸ್ವಾಮಿ ಅಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಡಿ. ಮಶಾಕ, ಜಗದೇವ ದಿಗ್ಗಾಂವಕರ, ಕಾಶಿನಾಥ ಗುತ್ತೇದಾರ, ವಿಕ್ರಂ ತೇಜಸ್, ಸಾಯಬಣ್ಣ ಗುಡುಬಾ, ಸಂತೋಷಕುಮಾರ ಕಟ್ಟಿಮನಿ, ಪೃಥ್ವಿ ಸಾಗರ, ಅಣ್ಣಾರಾಯ ಮಾಡಬೂಳಕರ, ಅನಂತನಾಗ ದೇಶಪಾಂಡೆ, ಜಗದೇವ ಕುಂಬಾರ ಹಾಜರಿದ್ದರು.
ಪದವಿ ಪೂರ್ವ ಮತ್ತು ಪದವಿ ಕಾಲೇಜಿನ 33 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಡಿವಾಳಪ್ಪ ಹೇರೂರ ನಿರೂಪಿಸಿದರು. ದಯಾನಂದ ಖಜೂರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.