ಕಲಬುರಗಿ: ನಗರದ ಗಂಜ್‌ನಲ್ಲಿರುವ ಅಯ್ಯರವಾಡಿಯಲ್ಲಿ ಸ್ಥಾಪಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಭಾನುವಾರ ಉದ್ಘಾಟಿಸಲಾಯಿತು. ಅದ್ದೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ನೂರಾರು ಜನರು ಸಾಕ್ಷಿಯಾದರು.
ಈ ಸಡಗರಕ್ಕಾಗಿ ಇಡೀ ಅಯ್ಯರವಾಡಿ ಸಿಂಗಾರಗೊಂಡಿತ್ತು. ಬರೀ ಮರಾಠಾ ಸಮಾಜ ಮಾತ್ರವಲ್ಲದೇ ಓಣಿಯ ಜನರಲ್ಲಿ ಸಂಭ್ರಮ ಮನೆಮಾಡಿತ್ತು.
ಸೂರ್ಯಾಸ್ತದ ಹೊತ್ತಿಗೆ ಹುಮಾನಾಬಾದ್ ಬೇಸ್‌ನಿಂದ ಶಿವಾಜಿ ಮೂರ್ತಿ ಸ್ಥಾಪಿಸಿರುವ ಪ್ರದೇಶದ ತನಕ ಅದ್ದೂರಿ ಶೋಭಾಯಾತ್ರೆ ನಡೆಯಿತು. ಡ್ರಮ್ ಸದ್ದು, ಲೇಜಿಮ್ ನಾದ, ವಿದ್ಯುತ್ ದೀಪಗಳ ಚಿತ್ತಾರ ಸಂಭ್ರಮದ ಲಯವನ್ನು ಹೆಚ್ಚಿಸಿತ್ತು. ಮಹೇಶ ಸೂರ್ಯವಂಶಿ ಹಾಗೂ ಇತರರು ಶಿವಾಜಿ ವೇಷಧರಿಸಿ ಗಮನ ಶೋಭಾಯಾತ್ರೆ ಮೆರುಗು ಹೆಚ್ಚಿಸಿದರು. ಓಣಿಯ ಇಕ್ಕೆಲಗಳಲ್ಲಿ ನಿಂತವರು ಶೋಭಾಯಾತ್ರೆ ಮೇಲೆ ಪುಷ್ಟವೃಷ್ಟಿಗೈದು ಸಂಭ್ರಮವನ್ನು ದುಪ್ಪಟ್ಟುಗೊಳಿಸಿದರು.
ನಸುಗತ್ತಲು ಸರಿದು ಕತ್ತಲ ಗಾಢವಾಗುವ ಹೊತ್ತಿಗೆ ಪೀಠಾಸೀನ ಭಂಗಿಯಲ್ಲಿರುವ ಶಿವಾಜಿ ಮೂರ್ತಿ ಅನಾವರಣಗೊಳಿಸಲಾಯಿತು. ಪಂಢರಪುರದ ಸದ್ಗುರು ಜ್ಞಾನಿನಾಥ ಮಹಾರಾಜ ಔಶೇಕರ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ ಮೂರ್ತಿ ಉದ್ಘಾಟಿಸಿದರು.
ಆಗ ಕತ್ತಲು ಆವರಿಸಿದ್ದ ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ ಮೂಡಿತು. ‘ಜೈ ಶಿವಾಜಿ’, ‘ಜೈಭವಾನಿ’, ‘ಛತ್ರಪತಿ ಶಿವಾಜಿ ಮಾಹಾರಜ ಕೀ’, ‘ಸಂಭಾಜಿ ಮಹಾರಾಜ ಕೀ’ ಎಂದೆಲ್ಲ ಘೋಷಣೆಗಳು ಮೊಳಗಿದವು. ಸಮಾಜದ ಮುಖಂಡರು, ಆಹ್ವಾನಿತ ಗಣ್ಯರು ಹಾಗೂ ನೆರೆದಿದ್ದ ನೂರಾರು ಜನರು ಈ ಕ್ಷಣಕ್ಕೆ ಸಾಕ್ಷಿಯಾದರು.
ಪಂಢರಪುರದ ವಿಠಲ ರುಕ್ಮಿಣಿ ದೇವಸ್ಥಾನದ ಅಧ್ಯಕ್ಷ ಜ್ಞಾನಿನಾಥ ಮಹಾರಾಜ ಔಶೇಕರ ಮಾತನಾಡಿ, ‘ನಾವೆಲ್ಲ ಸಣ್ಣ ಸಮಸ್ಯೆಗೂ ಹೆದರಿ ಮನೆ ಸೇರುತ್ತೇವೆ. ಆದರೆ, ತಮ್ಮವರ ಸಮಸ್ಯೆಗೆ ಸ್ಪಂದಿಸಲು ಛತ್ರಪತಿ ಶಿವಾಜಿ ಜೀವದ ಹಂಗು ತೊರೆದು ಮುನ್ನುಗ್ಗುತ್ತಿದ್ದರು. ಅವರಲ್ಲಿ ಅಂತಹ ಸ್ಪಂದನಾಶೀಲ ಗುಣ ಬರಲು ಅವರಿಗೆ ಸಿಕ್ಕ ಸಂಸ್ಕಾರ ಕಾರಣ. ಅದನ್ನು ನೀಡಿದ್ದು ಅವರ ತಾಯಿ ಜೀಜಾಬಾಯಿ’ ಎಂದರು.
ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ ಮಾತನಾಡಿ, ‘ಎಲ್ಲೆಡೆ ಶಿವಾಜಿ ಮೂರ್ತಿ ಇರಬೇಕು. ಅದನ್ನು ನೋಡುವ ಯುವಕರಲ್ಲಿ ಶಿವಾಜಿ ಮಹಾರಾಜರಲ್ಲಿನ ಗುಡುಗು ಬರಬೇಕು’ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಭೀಮರಾಜ ವಾಘಮಾರೆ, ರವಿ ಸೂರ್ಯವಂಶಿ ಅವರಿಗೆ ಸತ್ಕರಿಸಲಾಯಿತು.
ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸುಧಾ ಹಾಲಕೈ, ಸಿದ್ದಾಜಿ ಪಾಟೀಲ, ಅವ್ವಣ್ಣ ಮ್ಯಾಕೇರಿ, ರಾಜೀವ ಕಾಕಡೆ, ರಾಮಚಂದ್ರ ಜಗದಾಳೆ, ನಾಗೇಶ್ವರಿ ಕದಂಬ, ಪ್ರತಾಪ ಕಾಕಡೆ, ಶಾಮಸುಂದರ ಜಗತಾಪ್, ಶಿವಾಜಿರಾವ ಚೌಹಾಣ, ಅಶೋಕ ಚೌಹಾಣ, ವಸಂತ ಚೌಹಾಣ ಸೇರಿದಂತೆ ಅಯ್ಯರವಾಡಿ ಮರಾಠಾ ಸಮಾಜದ ಪ್ರಮುಖರು ವೇದಿಕೆಯಲ್ಲಿದ್ದರು.
ಮುಸ್ಲಿಂ ಮಂಡಳಿ ಇದ್ದಂತೆ ಸನಾತನ ಮಂಡಳಿ ಸ್ಥಾಪನೆ ಆಗಬೇಕಿದೆ. ದೇವಸ್ಥಾನಗಳ ಆದಾಯವೆಲ್ಲ ಹಿಂದೂ ಧರ್ಮದ ಸಂರಕ್ಷಣೆ ಅಭಿವೃದ್ಧಿಗೇ ಬಳಕೆಯಾಗಬೇಕು. ಇದಕ್ಕಾಗಿ ರಾಜಕಾರಣಿಗಳು ಶ್ರಮಿಸಬೇಕು.–ದಿನಕರ್ ಮೋರೆ, ಅಧ್ಯಕ್ಷ ಛತ್ರಪತಿ ಶಿವಾಜಿ ಮಹಾರಾಜ ಸಹಕಾರ ಬ್ಯಾಂಕ್ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.