ADVERTISEMENT

ಕೆಸರು ಗದ್ದೆಯಂತಾದ ಶಿವಪುರ-ಹಂಗರಗಾ(ಕೆ) ರಸ್ತೆ

ವಾಹನ ಸವಾರರನ್ನು ಬೆಚ್ಚಿ ಬೀಳಿಸುವ ಮಾರುದ್ದದ ಗುಂಡಿಗಳು

ಮಂಜುನಾಥ ದೊಡಮನಿ
Published 24 ಆಗಸ್ಟ್ 2020, 12:55 IST
Last Updated 24 ಆಗಸ್ಟ್ 2020, 12:55 IST
ಯಡ್ರಾಮಿ ತಾಲ್ಲೂಕಿನ ಹಂಗರಗಾ(ಕೆ)ಯಿಂದ ಶಿವಪುರಕ್ಕೆ ಹೋಗುವ ಡಾಂಬರ್‌ ರಸ್ತೆ ದುಸ್ಥಿತಿ (ಎಡಚಿತ್ರ) ಶಿವಪುರದ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು
ಯಡ್ರಾಮಿ ತಾಲ್ಲೂಕಿನ ಹಂಗರಗಾ(ಕೆ)ಯಿಂದ ಶಿವಪುರಕ್ಕೆ ಹೋಗುವ ಡಾಂಬರ್‌ ರಸ್ತೆ ದುಸ್ಥಿತಿ (ಎಡಚಿತ್ರ) ಶಿವಪುರದ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು   

ಯಡ್ರಾಮಿ: ತಾಲ್ಲೂಕಿನ ಶಿವಪುರ-ಹಂಗರಗಾ(ಕೆ) ರಸ್ತೆ ಅಕ್ಷರಶಃ ಕೆಸರುಗದ್ದೆಯಂತಾಗಿದೆ. ಜನರು, ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಂಗರಗಾ(ಕೆ) ಮಾರ್ಗವಾಗಿ ಶಿವಪುರ ಸಂಪರ್ಕಿಸುವ ಹಾಗೂ ಶಿವಪುರದಿಂದ ಜೇವರ್ಗಿ, ಚಾಮನಾಳ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ ನೋಡಿದರೆ ಅಚ್ಚರಿ ಮೂಡತ್ತದೆ.

ಬೇಸಿಗೆ ಸಂದರ್ಭದಲ್ಲೇ ಈ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲ ಎನ್ನುವಂತಾಗಿತ್ತು. ಈಗ ಮಳೆಗಾಲದಲ್ಲಿ ಈ ರಸ್ತೆಯ ಅವಸ್ಥೆ ತೀರಾ ಹದಗೆಟ್ಟಿದೆ. ಮಾರುದ್ದದ ತಗ್ಗು ಗುಂಡಿಗಳು ವಾಹನ ಸವಾರರನ್ನು ಬೆಚ್ಚಿ ಬೀಳಿಸುತ್ತವೆ. ಇನ್ನು ಒಂದೆಡೆ ಕಾಂಕ್ರೀಟ್ ರಸ್ತೆಯು ತಗ್ಗು ದಿಣ್ಣೆಯಿಂದ ಕೂಡಿರುವ ಕೆಸರುಮಯ ರಸ್ತೆಯಾಗಿ ಮಾರ್ಪಟ್ಟಿದೆ.

ADVERTISEMENT

‘ಹಂಗರಗಾ(ಕೆ)ದಿಂದ ಶಿವಪುರದ ವರೆಗೆ ಡಾಂಬರ್‌ ರಸ್ತೆ ಒಂದಿಷ್ಟೂ ಉಳಿಯದೆ ಎಲ್ಲವೂ ಕಿತ್ತು ಹೋಗಿದೆ. ಓಡಾಡಲು ಯೋಗ್ಯವಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರು ವುದರಿಂದ ಇಡೀ ರಸ್ತೆ ಕೆಂಪು ಕೆಸರು ಗದ್ದೆಯಾಗಿದೆ. ಆಯ ತಪ್ಪಿ ಬಿದ್ದರೆ ಇಡೀ ಮೈಗೆ ಕೆಸರು ಮೆತ್ತಿಕೊಳ್ಳುವುದಷ್ಟೇ ಅಲ್ಲ, ಮೈಯೊಳಗಿನ ಎಲುಬು ಕೀಲುಗಳು ಮುರಿಯಬಹುದು’ ಎಂದು ವಾಹನ ಸವಾರರು ದೂರುತ್ತಾರೆ.

‘ಇದೇ ಕಾರಣದಿಂದಾಗಿ ಯಡ್ರಾಮಿಯಿಂದ ಹಂಗರಗಾ(ಕೆ) ಮಾರ್ಗವಾಗಿ ಶಿವಪುರಕ್ಕೆ ಬಸ್ ಸಂಚಾರವೂ ಇಲ್ಲ. ಯಡ್ರಾಮಿಗೆ ಸಂಪರ್ಕ ಬೆಳೆಸಲು ರಸ್ತೆ ಸಮಸ್ಯೆ ಕಾರಣ ಶಿವಪುರ ಜನರು ಆಸ್ಪತ್ರೆ, ವ್ಯಾಪಾರಕ್ಕೆ ಶಾಹಾಪುರವನ್ನು ಅವಲಂಬಿಸಿದ್ದಾರೆ. ಕೃಷಿ ಚಟುವಟಿಕೆಗಾಗಿ ಅನಿವಾರ್ಯವಾಗಿ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಜನರು ಅಧಿಕಾರಿಗಳಿಗೆ ಶಾಪ ಹಾಕುತ್ತಿ ದ್ದಾರೆ. ಮಳೆಗಾಲಕ್ಕೆ ಮುನ್ನವೇ ಪೂರ್ವ ತಯಾರಿ ಮಾಡಿ ಕೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿರುವ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಈ ಹಿಂದೆ ಇದ್ದ ಡಾಂಬರ್‌ ರಸ್ತೆ ಕಿತ್ತು ಹೋಗಿ ಕಿರಿದಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಕಂಟಿಗಳು ಬೆಳೆದು ಪಾದಚಾರಿಗಳು ಕೂಡ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲದಂತೆ ಆಗಿದೆ’ ಎಂದು ಶಿವಪುರದ ಶಿವನಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಈ ಗ್ರಾಮಗಳಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿದು ನಿಲ್ಲುತ್ತಿದೆ. ಮಳೆ ನೀರಿನೊಂದಿಗೆ ಕೊಳಚೆ ನೀರು ಸೇರಿ ಇಡೀ ರಸ್ತೆ ಗಬ್ಬೆದ್ದು ಹೋಗಿದೆ. ರಸ್ತೆ ಸಮಸ್ಯೆಯಿಂದ ವಾಹನಗಳನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾದ ಸನ್ನಿವೇಶವಿದೆ. ವಾಹನ ಸವಾರರಷ್ಟೇ ಅಲ್ಲದೆ ಪಾದಚಾರಿಗಳು ಕೂಡ ಈ ರಸ್ತೆಯಲ್ಲಿ ಓಡಾಡಲು ಭಯ ಪಡು ವಂತಾಗಿದ್ದು ಸ್ಥಳೀಯರು ಅಧಿಕಾರಿ ಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.