ADVERTISEMENT

ಶಿವರಾತ್ರಿ ರಂಗೋತ್ಸವಕ್ಕೆ ಚಾಲನೆ

ಗುಲಬರ್ಗಾ ವಿ.ವಿ.ಯಲ್ಲಿ ರಂಗಶಿಕ್ಷಣ ಕೋರ್ಸ್‌ ಆರಂಭ: ಪ್ರೊ. ದಯಾನಂದ ಅಗಸರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 2:14 IST
Last Updated 12 ಮಾರ್ಚ್ 2021, 2:14 IST
ಶಿವರಾತ್ರಿ ರಂಗೋತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಸವದತ್ತಿ ಆರಾಧನಾ ತಂಡದ ಕಲಾವಿದರು ‘ಸುಳ್ಳು ಸಂಸಾರದ ಆಟ’ ನಾಟಕವನ್ನು ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಪ್ರದರ್ಶಿಸಿದರು
ಶಿವರಾತ್ರಿ ರಂಗೋತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಸವದತ್ತಿ ಆರಾಧನಾ ತಂಡದ ಕಲಾವಿದರು ‘ಸುಳ್ಳು ಸಂಸಾರದ ಆಟ’ ನಾಟಕವನ್ನು ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಪ್ರದರ್ಶಿಸಿದರು   

ಕಲಬುರ್ಗಿ: ರಂಗ ಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ರಂಗ ಶಿಕ್ಷಣ ಕೋರ್ಸ್‌ ಆರಂಭಿಸಲಾಗುವುದು ಎಂದು ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಪ್ರಕಟಿಸಿದರು.

ಕಲಬುರ್ಗಿ ರಂಗಾಯಣ ಹಾಗೂ ಸಮುದಾಯ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿರುವ ಶಿವರಾತ್ರಿ ರಂಗೋತ್ಸವಕ್ಕೆ ಗುರುವಾರ ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೇ ವಿ.ವಿ.ಯಲ್ಲಿ ಸಂಗೀತ ವಿಭಾಗ ಇದೆ. ರಂಗಶಿಕ್ಷಣವನ್ನು ಪರಿಚಯಿಸುವ ಮೂಲಕ ಈ ಭಾಗದ ಪ್ರತಿಭೆಗಳನ್ನು ಬೆಳಕಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ADVERTISEMENT

ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ, ‘ಕಲಬುರ್ಗಿಯಲ್ಲಿ ರಂಗಾಯಣ ಇದೆ ಎಂಬುದು ಗೊತ್ತಿತ್ತು. ಆದರೆ, ಇತ್ತೀಚೆಗೆ ತನ್ನ ನಿರಂತರ ಚಟುವಟಿಕೆಗಳಿಂದಾಗಿ ಗಮನ ಸೆಳೆಯುತ್ತಿದೆ’ ಎಂದು ಶ್ಲಾಘಿಸಿದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ‘ಶಿವರಾತ್ರಿಯ ಸಂದರ್ಭದಲ್ಲಿ ಜಿಲ್ಲೆಯ ರಂಗಾಸಕ್ತರಿಗಾಗಿ ಐದು ದಿನಗಳ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಮಾ 15ರವರೆಗೆ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ನಾಟಕಗಳ ಪ್ರದರ್ಶನ ಇರಲಿದೆ. ನಂತರದ ರಂಗ ಪ್ರಯೋಗಗಳು ರಂಗಾಯಣದ ಬಯಲು ರಂಗಮಂದಿರದಲ್ಲೇ ನಡೆಯಲಿವೆ. ರಂಗಾಸಕ್ತರು ಅಲ್ಲಿಗೆ ಬಂದು ನಾಟಕ ನೋಡಿ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

ಸಮುದಾಯ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಘೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಅಕ್ಷತಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ನಾಗೇಂದ್ರಪ್ಪ ಅವರಾದಿ ವಂದಿಸಿದರು.

ನಂತರ ಸವದತ್ತಿಯ ರಂಗ ಆರಾಧನ ತಂಡದ ಕಲಾವಿದರು ಝಾಕೀರ್ ನದಾಫ ನಿರ್ದೇಶಿಸಿದ ‘ಸುಳ್ಳು ಸಂಸಾರದ ಆಟ’ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.