ಸೇಡಂ: ಪಟ್ಟಣದ ಸೇರಿದಂತೆ ತಾಲ್ಲೂಕಿನಾದ್ಯಂತ ಶ್ರಾವಣ ಸಂಭ್ರಮದ ಭಕ್ತಿಯ ಸಡಗರ ಮನೆ ಮಾಡಿದೆ. ಮಠ-ಮಂದಿರಗಳಲ್ಲಿ ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿವೆ.
ಜು.26 ರಿಂದ ಶ್ರಾವಣ ಮಾಸ ಆರಂಭಗೊಂಡಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮನೆ-ಮಠಗಳನ್ನು ಸ್ವಚ್ಛಗೊಳಿಸಿದ ಭಕ್ತರು, ಭಕ್ತಿಯಿಂದ ಶ್ರಾವಣ ಪಾಲಿಸುತ್ತಾ ಆರಾಧಿಸುತ್ತಿದ್ದಾರೆ.
ಸೇಡಂ ಪಟ್ಟಣದ ಆರಾಧ್ಯ ದೈವ ಶಿವಶಂಕರೇಶ್ವರ ಮಠದಲ್ಲಿ ಶ್ರಾವಣ ಮಾಸವು ಗುರು ಶಿಷ್ಯರ ಪಾದ ಪೂಜೆ ಬಾಂಧವ್ಯಕ್ಕೆ ಸಾಕ್ಷಿಯಾಗುತ್ತಿದೆ. ಶ್ರೀಮಠದಲ್ಲಿ ಶಿವಶಂಕರೇಶ್ವರ ಮಠದ ಪೀಠಾಧಿಪತಿ ಶಿವಶಂಕರ ಶಿವಾಚಾರ್ಯರು, ಇನ್ನೊಂದು ಮಠದ ಪೀಠಾಧಿಪತಿಗಳ ಪಾದಪೂಜೆಯನ್ನು ಒಂದು ತಿಂಗಳವರೆಗೆ ನಿತ್ಯ ಸಂಜೆ ನೆರವೇರಿಸುತ್ತಿದ್ದಾರೆ. ನಿತ್ಯ ಭಕ್ತಿಯ ಭಜನೆ, ಮಂಗಳಾರತಿ, ಪ್ರಸಾದ ನಡೆಯುತ್ತಿದೆ.
ಪಟ್ಟಣದ ಹಾಲಪ್ಪಯ್ಯ ವಿರಕ್ತಮಠದಲ್ಲಿ ಭಜನೆ ನಡೆಯುತ್ತಿದ್ದು, ಯುವ ಪ್ರತಿಭೆಗಳು ಡೊಳ್ಳು, ತಬಲಾ ಹಾಗೂ ಭಜನೆ ಗೀತೆಗಳನ್ನು ಹಾಡುತ್ತಾ, ಶ್ರಾವಣ ಸಡಗರದಲ್ಲಿ ತೊಡಗಿದ್ದಾರೆ. ಪಂಚಲಿಂಗೇಶ್ವರ ದೇವಾಲಯಲ್ಲಿ ಪ್ರತಿ ಸೋಮವಾರ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮತ್ತು ಬಿಲ್ವಾರ್ಚನೆ ನಡೆಯುತ್ತಿದೆ. ದಂಪತಿಗಳು ಹಾಜರಾಗಿ ಪಂಚಲಿಂಗಗಳಿಗೆ ಅಭಿಷೇಕ ಮಾಡಿಸುತ್ತಿದ್ದಾರೆ.
ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ಬಲಭೀಮ ಸೇನ ದೇವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ವಿಶೇಷ ಪೂಜಾ ಕಾರ್ಯ, ಕೊತ್ತಲ ಬಸವೇಶ್ವರ ದೇವಾಲಯ ವಿಶೇಷ ಪೂಜೆ, ಮಳಖೇಡ ಮೂಲಾಧಾರ ಬೃಹನ್ಮಠದಲ್ಲಿ ಷಟಸ್ಥಲ ಸಿದ್ಧಾಂತ ಪ್ರವಚನ, ತೊಟ್ನಳ್ಳಿ ಮಹಾಂತೇಶ್ವರ ಮಠದಲ್ಲಿ ಶ್ಲೋಕ-ವಚನ, ಕೋಡ್ಲಾ ಉರಿಲಿಂಗ ಪೆದ್ದೀಶ್ವರ ಮಠ, ಹಂದರಕಿ, ನೀಲಹಳ್ಳಿ, ಮದನಾ, ಮುಧೋಳ, ಯಾನಾಗುಂದಿ, ಮಳಖೇಡ, ತೊಟ್ನಳ್ಳಿ, ಊಡಗಿ, ಕುರಕುಂಟಾ, ಕೋಲ್ಕುಂದಾ, ಮೋತಕಪಲ್ಲಿ, ಗುಂಡೆಪಲ್ಲಿ, ಇಟಕಾಲ್ ಸೇರಿದಂತೆ ವಿವಿಧ ಮಠ-ಮಂದಿರಗಳಲ್ಲಿ ಭಜನೆ ನಡೆಯುತ್ತಿದೆ.
‘ಶ್ರಾವಣ ಮಾಸದ ಹಿನ್ನೆಲೆ ಮಠದಲ್ಲಿ ಗುರುವಿನಿಂದ ಗುರುವಿನ ಪಾದಪೂಜೆ ನಡೆಯುತ್ತಿದ್ದು, ನೂರಾರು ಭಕ್ತರು ನಿತ್ಯ ಪಾಲ್ಗೊಳ್ಳುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳೊಂದಿಗೆ ಮಠಕ್ಕೆ ಬರುವುದು ಸಾಮಾನ್ಯವಾಗಿದೆ’ ಎನ್ನುತ್ತಾರೆ ಶಿವಶಂಕರೇಶ್ವರ ಮಠದ ಟ್ರಸ್ಟಿ ನಾಗಯ್ಯಸ್ವಾಮಿ ಬೊಮ್ನಳ್ಳಿ.
ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ಪಂಚಲಿಂಗಗಳ ವಿಶೇಷ ಅಭಿಷೇಕ ಮತ್ತು ಬಿಲ್ವಾರ್ಚನೆ ಪೂಜೆಗೆ ಭಕ್ತರು ಸಾಕ್ಷಿಯಾಗುತ್ತಿದ್ದಾರೆರಾಜಶೇಖರ ನೀಲಂಗಿ ಅಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸೇಡಂ
ಶ್ರಾವಣಮಾಸ ಶ್ರೀಮಠಕ್ಕೆ ಅತ್ಯಂತ ಪವಿತ್ರ ಮಾಸವಿದ್ದು ಪರಂಪರೆಯಂತೆ ಗುರುವಿನ ಪಾದಪೂಜೆ ಮಾಡುತ್ತಾ ಗುರುಭಕ್ತಿ ಸೇವಾ ಕಾರ್ಯ ನಡೆಯುತ್ತಿದ್ದು ನೂರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.ಶಿವಶಂಕರೇಶ್ವರ ಶಿವಾಚಾರ್ಯ ಶಿವಶಂಕರೇಶ್ವರ ಮಠ ಸೇಡಂ
ಗ್ರಾಮಸ್ಥರ ಸಹಕಾರದಿಂದ ಶ್ರಾವಣ ಮಾಸದ ನಿಮಿತ್ತ ಮಠದಲ್ಲಿ ಮಕ್ಕಳಿಗೆ ಶ್ಲೋಕ ವಚನಗಳನ್ನು ಹೇಳಲಾಗುತ್ತಿದೆ. ಅಕ್ಕನ ಬಳಗದವರು ಭಜನೆ ಮಾಡುತ್ತಿದ್ದಾರೆ.ತ್ರಿಮೂರ್ತಿ ಶಿವಾಚಾರ್ಯ ಮಹಾಂತೇಶ್ವರ ಮಠ ತೊಟ್ನಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.