ADVERTISEMENT

ಕಲಬುರಗಿ | ಸಹಕಾರಿ ಬ್ಯಾಂಕಿಂಗ್‌ಗೆ ಯುವಕರು ಬರಲಿ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 15:48 IST
Last Updated 24 ಡಿಸೆಂಬರ್ 2023, 15:48 IST
ಕಲಬುರಗಿಯಲ್ಲಿ ಭಾನುವಾರ ನಡೆದ ಶ್ರೀ ಛತ್ರಪತಿ ಶಿವಾಜಿ ಮಾಹಾರಾಜ ಸಹಕಾರಿ ಬ್ಯಾಂಕ್‌ನ 25ನೇ ವಾರ್ಷಿಕೋತ್ಸವದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಸಚಿವ ಶರಣಬಸಪ್ಪ ದರ್ಶನಾಪುರ, ಡಾ.ದಿನಕರ್‌ ಮೋರೆ, ಮಂಜುನಾಥ ಭಾರತಿ ಸ್ವಾಮೀಜಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಭಾನುವಾರ ನಡೆದ ಶ್ರೀ ಛತ್ರಪತಿ ಶಿವಾಜಿ ಮಾಹಾರಾಜ ಸಹಕಾರಿ ಬ್ಯಾಂಕ್‌ನ 25ನೇ ವಾರ್ಷಿಕೋತ್ಸವದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಸಚಿವ ಶರಣಬಸಪ್ಪ ದರ್ಶನಾಪುರ, ಡಾ.ದಿನಕರ್‌ ಮೋರೆ, ಮಂಜುನಾಥ ಭಾರತಿ ಸ್ವಾಮೀಜಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆ ತರಲು ಬಯಸುವವರು ಯುವ ಪೀಳಿಗೆಗೆ ಅವಕಾಶ ಕೊಡಬೇಕು. ಯುವಕರಲ್ಲಿ ಹೊಸ ಚಿಂತನೆಗಳಿದ್ದು, ಚಟುವಟಿಕೆಯಿಂದ ಓಡಾಡಿ ಕೆಲಸ ಮಾಡುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಸಹಕಾರಿ ಬ್ಯಾಂಕ್‌ನ 25 ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರಿಯರು ಶೇ 50ರಷ್ಟು ಯುವ ಪೀಳಿಗೆಗೆ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶ ಕೊಟ್ಟು ನೋಡಬೇಕು. ಅವರು ಹೇಗೆಲ್ಲ ಕಾರ್ಯನಿರ್ವಹಿಸುತ್ತಾರೆ ಎಂಬುದು ಗೊತ್ತಾಗುತ್ತದೆ. ಹೊಸ ಚಿಂತನೆಗಳು ಹರಿದು ಬರುತ್ತವೆ’ ಎಂದರು.

ADVERTISEMENT

‘ಸಹಕಾರಿ ಸಂಸ್ಥೆಯ ಸಿಬ್ಬಂದಿ, ಆಡಳಿತ ಮಂಡಳಿ, ಷೇರುದಾರರು ಪ್ರಾಮಾಣಿಕ ಹಾಗೂ ಧೈರ್ಯದಿಂದ ಕೆಲಸ ಮಾಡಿದರೆ ಮಾತ್ರ ಸಂಸ್ಥೆಯು ಪ್ರಗತಿ ಸಾಧಿಸುತ್ತದೆ. ಸಂಸ್ಥೆಯ ಬಗ್ಗೆ ಸಮಾಜದಲ್ಲಿ ವಿಶ್ವಾಸ ಇರಬೇಕು. ಅದರಂತೆ ಸಂಸ್ಥೆಯೂ ನಡೆದುಕೊಳ್ಳಬೇಕಾಗುತ್ತದೆ’ ಎಂದು ಸಲಹೆ ನೀಡಿದರು.

‘ಅನ್ನ ಕೊಡುವ ಸಂಸ್ಥೆಗೆ ಯಾವತ್ತೂ ಅನ್ಯಾಯ ಮಾಡಬಾರದು. ರಾಜಕಾರಣಿ ಮತ್ತು ವಕೀಲರಿಗೆ ಯಾರೂ ಸಾಲ ಕೊಡುವುದಿಲ್ಲ. ನಾನು ವಿಶ್ವಾಸ ಮೂಡಿಸಿದ್ದರಿಂದ ಸಿದ್ಧಶ್ರೀ ಸೌಹಾರ್ದ ಸಹಕಾರಿ ಬ್ಯಾಂಕ್‌ ಸಾಮರ್ಥ್ಯ ₹ 3000 ಕೋಟಿವರೆಗೂ ಬೆಳೆದು ನಿಂತಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಹೊಸತನಕ್ಕೆ ಅವಕಾಶ ಕೊಟ್ಟು ಜನರಲ್ಲಿ ಭರವಸೆ ಮೂಡಿಸಬೇಕು’ ಎಂದರು.

‘ರಾಜಕಾರಣಿಗಳು ದುಬೈ, ಮಸ್ಕತ್‌, ಅಮೆರಿಕದಲ್ಲಿ ಆಸ್ತಿ ಮಾಡುವುದಕ್ಕಿಂತ ನಮ್ಮ ಭಾಗದಲ್ಲೇ ಆಸ್ತಿ ಮಾಡಬೇಕು. ಸ್ಥಳೀಯವಾಗಿ ಉದ್ಯಮಗಳನ್ನು ಆರಂಭಿಸಿದರೆ, ನಮ್ಮ ಜನರಿಗೆ ಕೆಲಸ ಸಿಗುತ್ತದೆ’ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ಮಾತನಾಡಿ, ‘ನಮ್ಮ ತಂದೆ ಉದ್ಘಾಟಿಸಿದ್ದ ಸಂಸ್ಥೆಯ ವೇದಿಕೆಯಲ್ಲಿ ಮಾತನಾಡುತ್ತಿರುವುದು ನಂಬಿಕೆ, ಪ್ರೀತಿ ವಿಶ್ವಾಸಕ್ಕೆ ನಿದರ್ಶನವಾಗಿದೆ. ಆಸ್ತಿ, ಅಂತಸ್ತು, ಗಾಡಿ ಯಾವುದೂ ಶಾಶ್ವತವಲ್ಲ. ನಮಗೆ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಬೇಕು’ ಎಂದರು.

‘ದೊಡ್ಡ ಬ್ಯಾಂಕ್ ಮಾಡಲು ಎಲ್ಲರ ಸಹಕಾರ ದೊರೆಯುತ್ತಿದೆ. ನಮ್ಮ ಸರ್ಕಾರದಿಂದ ಮರಾಠರಿಗೆ ಮಂತ್ರಿ ಸ್ಥಾನ ದೊರಕಿದೆ. ಮರಾಠ ಸಮಾಜದ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗವಿಪುರಂ ಭವಾನಿ ದತ್ತ ಪೀಠದ ಮಂಜುನಾಥ ಭಾರತಿ ಸ್ವಾಮೀಜಿ, ಸಚಿವ ಶರಣಬಸಪ್ಪ ದರ್ಶನಾಪುರ, ಬ್ಯಾಂಕ್ ಅಧ್ಯಕ್ಷ ಡಾ. ದಿನಕರ ಮೋರೆ, ಉಪಾಧ್ಯಕ್ಷ ಸೂರ್ಯಕಾಂತ ಕದಮ, ಪ್ರಮುಖರಾದ ಅನಿಲ್ ಮೋರೆ, ಶ್ರೀರಾಮ ಪವಾರ, ರವಿರಾಜ ಮೋರೆ, ಆರ್.ಬಿ.ಜಗದಾಳೆ, ಬ್ರಹ್ಮಾನಂದ ಪಡವಾಳಕರ್, ಮಾಣಿಕ್ ಶಿಂಧೆ, ಜ್ಯೋತಿ ಭೀಸೆ ಪಾಲ್ಗೊಂಡಿದ್ದರು.

ಕಲಬುರಗಿಯಲ್ಲಿ ಭಾನುವಾರ ನಡೆದ ಶ್ರೀ ಛತ್ರಪತಿ ಶಿವಾಜಿ ಮಾಹಾರಾಜ ಸಹಕಾರಿ ಬ್ಯಾಂಕ್‌ನ 25ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಜನರು –ಪ್ರಜಾವಾಣಿ ಚಿತ್ರ
ರಾಜ್ಯದಲ್ಲಿ ಪ್ರಸ್ತುತ ದಿನಗಳಲ್ಲಿ ಹೈಕಮಾಂಡ್‌ಗಳು ಬಂದು ನಮ್ಮದು ಏನು ನಡಿಯುತ್ತಿಲ್ಲ. ಸದ್ಯಕ್ಕೆ ಯಾವುದೇ ಬದಲಾವಣೆ ಸಾಧ್ಯವಿಲ್ಲ
ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.