ADVERTISEMENT

5 ದಿನಗಳ ಅಂತರದಲ್ಲಿ ಅಕ್ಕ–ತಮ್ಮ ರಕ್ತ ವಾಂತಿಯಿಂದ ಸಾವು: ಗ್ರಾಮದಲ್ಲಿ ಆತಂಕ

ಜಗನ್ನಾಥ ಡಿ.ಶೇರಿಕಾರ
Published 6 ಮಾರ್ಚ್ 2020, 10:51 IST
Last Updated 6 ಮಾರ್ಚ್ 2020, 10:51 IST
   

ಚಿಂಚೋಳಿ (ಕಲಬುರ್ಗಿ): ತಾಲ್ಲೂಕಿನ ಗಣಾಪುರ ಗ್ರಾಮದಲ್ಲಿ ರಕ್ತ ವಾಂತಿ ಮಾಡಿಕೊಂಡುಒಂದೇ ಕುಟುಂಬದ ಇಬ್ಬರು ಮಕ್ಕಳು ನಾಲ್ಕು ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ಇದು ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

ಗ್ರಾಮದ ಜಗಪ್ಪ ನಾವದಗಿ ಅವರ ಪುತ್ರ ಗುಣಸಾಗರ (8) ಶನಿವಾರ ಮೃತಪಟ್ಟರೆ, ಮೃತನ ಅಕ್ಕ ನವಿನಾ ಜಗಪ್ಪ ನಾವದಗಿ (10) ಬುಧವಾರ ತಡರಾತ್ರಿ ಸಾವನ್ನಪ್ಪಿದ್ದಾಳೆ.

ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಗ್ರಾಮದಲ್ಲಿಯೇ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕ ನಿತ್ರಾಣ ಸ್ಥಿತಿಗೆ ತಲುಪಿದಾಗ ಚಿಂಚೋಳಿ ತಾಲ್ಲೂಕು ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಕಲಬುರ್ಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಬಾಲಕನನ್ನು ಶನಿವಾರ ನಸುಕಿನಲ್ಲಿ 4 ಗಂಟೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ವೈದ್ಯರು ರಕ್ತ ಮಾದರಿ ಪಡೆದುಕೊಂಡು ಚಿಕಿತ್ಸೆ ಮುಂದುವರಿಸಿದ್ದರು. ಆದರೆ ವೈದ್ಯರ ಉಪಚಾರ ಮನೆಯವರಿಗೆ ತೃಪ್ತಿ ನೀಡಿಲ್ಲ.

ಅದೇ ವೇಳೆಗೆ ಮಗುವಿಗೆ ದೆವ್ವ ಹಿಡಿದಿದೆ, ಹುಮ್ನಾಬಾದ್ ಬಳಿಯ ಹಳ್ಳಿಗೆ ಕರೆದೊಯ್ಯುವಂತೆ ವ್ಯಕ್ತಿಯೊಬ್ಬ ಸಲಹೆ ನೀಡಿದ್ದಾನೆ. ಇದನ್ನೇ ನಂಬಿದ ಬಾಲಕನ ಕುಟುಂಬದವರು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಬಾಲಕನನ್ನು ಕರೆದುಕೊಂಡು ಮಂತ್ರವಾದಿ ಬಳಿಗೆ ತೆರಳಿದ್ದಾರೆ. ಮಂತ್ರವಾದಿಯನ್ನು ಕಂಡು ವಾಪಸ್ಸಾಗುವಾಗ ಬಾಲಕ ದಾರಿ ಮಧ್ಯೆ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಈ ದುಃಖದಲ್ಲಿರುವಾಗಲೇ ಮೃತನ ಅಕ್ಕ ನವಿನಾಳಲ್ಲೂ ಜ್ವರದ ಲಕ್ಷಣ ಗೋಚರಿಸಿವೆ. ತಕ್ಷಣ ಬಾಲಕಿಗೆ ತೆಲಂಗಾಣದ ತಾಂಡೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಗೆ ಮಾ.2,3 ಮತ್ತು 4 ರಂದು ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಅದರಂತೆ ಬಾಲಕಿಯನ್ನು ಅಂಬುಲೆನ್ಸ್‌ನಲ್ಲಿ ಹೈದರಾಬಾದ್‌ಗೆ ಕರೆದೊಯ್ಯುವಾಗ ಚವೆಳ್ಳಾ ಬಳಿ ವಾಂತಿಭೇದಿ ಮಾಡಿಕೊಂಡು ಕೊನೆಯುಸಿರೆಳೆದಿದ್ದಾಳೆ.

ಬಾಲಕನ ಚಿಕಿತ್ಸೆ ಸ್ವಲ್ಪ ವಿಳಂಬವಾಗಿರಬಹುದು ಆದರೆ ಬಾಲಕಿಗೆ ತಕ್ಷಣ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಕೂಡ ಬಾಲಕಿಯೂ ಸಾವನ್ನಪ್ಪಿರುವುದು ನಮ್ಮಲ್ಲಿ ಆತಂಕ ಉಂಟುಮಾಡಿದೆ ಎಂದು ಗ್ರಾಮದ ದೌಲಪ್ಪ ನಾವದಗಿ ಹಾಗೂ ರಾಜು ಪೂಜಾರಿ ಕಳವಳ ವ್ಯಕ್ತಪಡಿಸಿದರು.

ಇದರ ಬೆನ್ನಲ್ಲೇ ಜಗಪ್ಪ ನಾವದಗಿ ಅವರ ಅಣ್ಣನ ಮಗನಲ್ಲಿಯೂ ಜ್ವರದ ಲಕ್ಷಣಗಳು ಕಂಡುಬಂದಿವೆ. ಇದರಿಂದ ಬಾಲಕ ನಾಗರಾಜ ರವಿಕುಮಾರ ನಾವದಗಿಯನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿದೆ. ಸದ್ಯಯ ಬಾಲಕ ಆರೋಗ್ಯವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.