
ಅಫಜಲಪುರ: ಗ್ರಾಮಸ್ಥರ ನಿರಂತರ ಹೋರಾಟದ ಫಲವಾಗಿ 12 ವರ್ಷಗಳ ನಂತರ ಸಿದ್ದನೂರು ಗ್ರಾಮದ ಕಾಲುವೆಗೆ ನೀರು ಹರಿದಿದ್ದು, ರೈತರಲ್ಲಿ ಸಂತಸ ಉಂಟು ಮಾಡಿದೆ.
ಗ್ರಾಮದ ರೈತ ಮುಖಂಡ ಮೈಬೂಬ್ ಸಾಬ್ ನದಾಫ್ ಅವರು ವಾರದಲ್ಲಿ ಸಿದ್ದನೂರು ಕಾಲುವೆಗೆ ನೀರು ಹರಿಸದಿದ್ದರೆ ಭೀಮಾ ಏತ ನೀರಾವರಿ ಉಪ ವಿಭಾಗದ ಕಚೇರಿಯ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಸಿದ್ದ ಸುದ್ದಿ ಈಚೆಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು. ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಲುವೆಗೆ ನೀರು ಬಿಟ್ಟಿದ್ದಾರೆ.
ಈ ಕುರಿತು ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಹಾಗೂ ಪ್ರಧಾನ ಕಾರ್ಯದರ್ಶಿ ಗುರು ಚಾಂದ್ಕೋಟೆ ಮಾಹಿತಿ ನೀಡಿ, ‘ಭೀಮಾ ಏತ ನೀರಾವರಿ ಆರಂಭವಾಗಿ 20 ವರ್ಷವಾದರೂ ಬಳುಂಡಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ 32 ಗ್ರಾಮಗಳು ಮತ್ತು ಅಳ್ಳಗಿ(ಬಿ) ಏತ ನೀರಾವರಿ ಕಾಲುವೆ ವ್ಯಾಪ್ತಿಯ 11 ಗ್ರಾಮಗಳ ಕಾಲುವೆಗಳಿಗೆ ಇಲ್ಲಿವರೆಗೂ ನೀರು ಹರಿದಿಲ್ಲ’ ಎಂದು ಹೇಳಿದ್ದಾರೆ.
ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ್ ಸಜ್ಜನ್ ಮಾಹಿತಿ ನೀಡಿ, ‘ಈಗಾಗಲೇ ಸಿದ್ದನೂರು ಗ್ರಾಮದ ಕಾಲುವೆಗೆ ನೀರು ಹರಿಸಲಾಗಿದೆ. ಮುಂದಿನ ಗ್ರಾಮಗಳಿಗೂ ಹಂತ ಹಂತವಾಗಿ ನೀರು ಹರಿಸಲಾಗುವುದು. ಕಾಲುವೆಗಳಲ್ಲಿನ ಹೂಳು ಸ್ವಚ್ಛಗೊಳಿಸಿ ನೀರು ಬಿಡುತ್ತೇವೆ’ ಎನ್ನುತ್ತಾರೆ.
‘ಶಾಸಕ ಎಂ.ವೈ.ಪಾಟೀಲ ಅವರು ಒಂದು ವಾರದಲ್ಲಿ ಭೀಮಾ ಏತ ನೀರಾವರಿ ಉಪ ವಿಭಾಗದ ಎಂಜಿನಿಯರ್ ಮತ್ತು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಒಳಗೊಂಡು ಸಭೆ ಕರೆದು ಬೇಸಿಗೆ ಅವಧಿಯಲ್ಲಿ ಕಾಲುವೆ ವ್ಯಾಪ್ತಿಯ 43 ಗ್ರಾಮಗಳಿಗೂ ನೀರು ಹರಿದು ಹೋಗುವ ವ್ಯವಸ್ಥೆಯನ್ನು ಮಾಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.
ಸೊನ್ನ ಭೀಮಾನದಿ ಏತ ನೀರಾವರಿ ಯೋಜನೆಯಿಂದ ಬಳುಂಡಗಿ ಏತ ನೀರಾವರಿ ಕಾಲುವೆಯಿಂದ 32 ಹಾಗೂ ಅಳ್ಳಗಿ (ಬಿ) ಏತ ನೀರಾವರಿ 11 ಗ್ರಾಮಗಳ ಜಮೀನುಗಳಿಗೆ ಕಾಲುವೆಗಳ ಮುಖಾಂತರ ಬೇಸಿಗೆ ಅವಧಿಯಲ್ಲಿ ನೀರು ಹರಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕುರಮೇಶ್ ಆರ್.ಶೆಟ್ಟಿ ,ಸಂಚಾಲಕ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ
ಭೀಮಾ ಕಾಲುವೆಗೆ 2026 ಏಪ್ರಿಲ್‌ವರೆಗೆ ನೀರು ಹರಿಸಬೇಕು. ಒಂದು ವಾರದಲ್ಲಿ ಹೂಳು ತುಂಬಿದ ಕಾಲುವೆಯನ್ನು ಸ್ವಚ್ಛಗೊಳಿಸಬೇಕು.ಶ್ರೀಮಂತ ಬಿರಾದಾರ , ಅಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ
ನಮ್ಮ ಗ್ರಾಮದ ಕಾಲುವೆಗೆ ಅಧಿಕಾರಿಗಳು ನೀರು ಹರಿಸಿದ್ದರಿಂದ ರೈತರಿಗೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮತ್ತು ಜಾನುವಾರಗಳಿಗೂ ಅನುಕೂಲವಾಗಿದೆ.ಮೈಬೂಬ್ ಸಾಬ್ ನದಾಫ್ ಸಿದ್ದನೂರು, ಗ್ರಾಮದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.