ADVERTISEMENT

ಏಕ ಬಳಕೆಯ ಪ್ಲಾಸ್ಟಿಕ್‌ಗೆ ಕಡಿವಾಣ: ಸಚಿವ ಈಶ್ವರ ಖಂಡ್ರೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:03 IST
Last Updated 19 ಅಕ್ಟೋಬರ್ 2025, 6:03 IST
<div class="paragraphs"><p>ಕಲಬುರಗಿಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಸುವರ್ಣ ಮಹೋತ್ಸವದಲ್ಲಿ ಸಚಿವ ಈಶ್ವರ ಖಂಡ್ರೆ, ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರು ಪರಿಸರ ಸಂರಕ್ಷಕರಿಗೆ ಇಂದಿರಾ ಪ್ರಿಯದರ್ಶಿನಿ ಬಹುಮಾನ ವಿತರಿಸಿದರು.</p></div>

ಕಲಬುರಗಿಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಸುವರ್ಣ ಮಹೋತ್ಸವದಲ್ಲಿ ಸಚಿವ ಈಶ್ವರ ಖಂಡ್ರೆ, ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರು ಪರಿಸರ ಸಂರಕ್ಷಕರಿಗೆ ಇಂದಿರಾ ಪ್ರಿಯದರ್ಶಿನಿ ಬಹುಮಾನ ವಿತರಿಸಿದರು.

   

ಕಲಬುರಗಿ: ಪರಿಸರಕ್ಕೆ ಹಾನಿ ಮಾಡುವ, ಮಣ್ಣಿನಲ್ಲಿ ಕರಗದ ಏಕಬಳಕೆಯ ಪ್ಲಾಸ್ಟಿಕ್‌ಗೆ ಸಂಪೂರ್ಣ ಕಡಿವಾಣ ಹಾಕಲು ಸಂಕಲ್ಲ ಮಾಡಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಗಿ 50 ವರ್ಷಗಳು ತುಂಬಿದ ಪ್ರಯುಕ್ತ ಮಂಡಳಿಯು ನಗರದ ಕೆಸಿಟಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಎಲ್ಲೆಡೆಯೂ ಇಂದು ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ. ಇದು ಭೂಮಿಯಲ್ಲಿ ಕರಗುವುದಿಲ್ಲ. ಹಾಗೆಯೇ ಬಳಕೆಯಾದ ಎಣ್ಣೆಯೂ ಕರಗುವುದಿಲ್ಲ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.

‘ಕೆಲ ವರ್ಷಗಳ ಹಿಂದೆ ಹಿರಿಯರು ಸಂತೆಗೆ ಹೋಗುವಾಗ ಬಟ್ಟೆಯ ಚೀಲಗಳನ್ನು ಒಯ್ಯುತ್ತಿದ್ದರು. ಅಂಥ ಪ್ರಯತ್ನಗಳನ್ನು ಬೆಂಬಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಅಕ್ರಮವಾಗಿ ಅರಣ್ಯ ಒತ್ತುವರಿ ಮಾಡುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಈಗಾಗಲೇ ರಾಜ್ಯದಾದ್ಯಂತ ಹಲವು ಕಡೆ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಅಲ್ಲದೇ, ರಾಜ್ಯದಾದ್ಯಂತ ಅರಣ್ಯ ಪ್ರಮಾಣವನ್ನು ಹೆಚ್ಚಿಸಲು 11 ಕೋಟಿ ಸಸಿಗಳನ್ನು ನೆಡುವ ಅಭಿಯಾನವನ್ನು ಹಾಕಿಕೊಳ್ಳಲಾಗಿದ್ದು, ಕಲಬುರಗಿಯಲ್ಲಿ 15 ಲಕ್ಷ ಸಸಿಗಳನ್ನು ನೆಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ರಸ್ತೆ ಬದಿ 3.5 ಲಕ್ಷ ದೊಡ್ಡ ಗಾತ್ರದ ಸಸಿಗಳನ್ನು ನೆಡಲಾಗಿದೆ’ ಎಂದರು. 

‘ಇಂದು ಪರಿಸರ ಸಮತೋಲನ ಕಾಪಾಡುವುದೇ ದೊಡ್ಡ ಸವಾಲಾಗಿದೆ. ಕೋವಿಡ್ ಮಹಾಮಾರಿಯಲ್ಲಿ ಆಮ್ಲಜನಕ ಕೊರತೆಯಿಂದ ಲಕ್ಷಾಂತರ ಜನ ಸಾವನಪ್ಪಿದ್ದರು. ಅವರಿಗೆ ಆಗ ಬೇಕಿದ್ದುದು ಆಮ್ಲಜನಕ. ಈ ಬಗ್ಗೆ ಹಲವರು ಆಮ್ಲಜನಕ ಒದಗಿಸಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸುವಂತೆ ನನಗೆ ಕರೆ ಮಾಡಿದ್ದರು. ಹೀಗಾಗಿ, ಆಮ್ಲಜನಕವನ್ನು ಹೊರಸೂಸುವ ಮರಗಳನ್ನು ಹೆಚ್ಚು ಬೆಳೆಸಬೇಕಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ‘ಪರಿಸರವನ್ನು ಉಳಿಸಿಕೊಳ್ಳಬೇಕಾದುದು ಅಗತ್ಯದ ಕೆಲಸವಾಗಿದೆ. ಗುಣಮಟ್ಟದ ವಾಯು ಮತ್ತು ನೀರು ಇಲ್ಲದ ಭವಿಷ್ಯವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ನದಿ ನೀರಿನ ಮಾಲಿನ್ಯವನ್ನು ಮಾಪನ ಮಾಡುವುದಕ್ಕಾಗಿ ಪ್ರತಿ ತಿಂಗಳು ನದಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಲಾಗುತ್ತದೆ. ಜಿಲ್ಲೆಯ ಗಾಣಗಾಪುರದಲ್ಲಿ ಹರಿಯುವ ಭೀಮಾ ನದಿ ನೀರಿನ ಗುಣಮಟ್ಟವನ್ನು ತಪಾಸಿಸುವುದಕ್ಕಾಗಿ ತಕ್ಷಣದ ನೀರಿನ ಗುಣಮಟ್ಟದ ಮೇಲೆ ನಿಗಾ ವಹಿಸುವ ಉಪಕರಣ ಅಳವಡಿಸಲಾಗಿದೆ ಎಂದರು.

‘ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಮಾಡುವುದರಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದು ಎಂದು ಪರಿಗಣಿಸಿ ‘ಪರಿಸರದ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ’ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪರಿಸರ ಕಾಳಜಿ, ಸಂರಕ್ಷಣೆಯ ಸಂದೇಶ ಸಾರುವ ಉತ್ತಮ ರೀಲ್ಸ್‌ಗೆ ₹ 50 ಸಾವಿರ ಪ್ರಥಮ ಬಹುಮಾನ, ₹ 25 ಸಾವಿರ ದ್ವಿತೀಯ ಬಹುಮಾನ ಹಾಗೂ ₹ 10 ಸಾವಿರ ತೃತೀಯ ಬಹುಮಾನ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನೀಡಲಾಗುವುದು’ ಎಂ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷೆ, ಶಾಸಕಿ ಕನೀಜ್ ಫಾತಿಮಾ ಮಾತನಾಡಿ, ‘ಸರ್ಕಾರವೇ ಪರಿಸರ ಸಂರಕ್ಷಣೆ ಮಾಡಬೇಕೆಂದರೆ ಅದು ಆಗದು. ಇಲ್ಲಿ ಸಂಘ–ಸಂಸ್ಥೆಗಳು ಮತ್ತು ಸಾರ್ವಜನಿಕರ ಭಾಗೀದಾರಿ ತುಂಬಾ ಅತ್ಯಗತ್ಯವಾಗಿದೆ. ನವೀನ ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಿಕೊಂಡು ಮಂಡಳಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಇನ್ನು ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು’ ಎಂದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ, ಪರಿಷತ್ ಮಾಜಿ ಸದಸ್ಯ ಅರವಿಂದ ಅರಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯಕ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜ ಎಸ್.ಎಸ್., ಡಿಸಿಎಫ್ ಸುಮಿತ್ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ಸಣ್ಣ ವೆಂಕಟೇಶ, ಅದಮ್ ಪಟೇಲ್ ಭಾಗವಹಿಸಿದ್ದರು. ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳಿಧರ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ, ಯಾದಗಿರಿ ಜಿಲ್ಲೆಯ ಪರಿಸರ ಪ್ರೇಮಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

ಕಲಬುರಗಿ ಜಿಲ್ಲೆಯಲ್ಲಿ ಸಿಮೆಂಟ್ ಯಾದಗಿರಿಯಲ್ಲಿ ಫಾರ್ಮಾ ಫ್ಯಾಕ್ಟರಿಗಳಿದ್ದು ಇವು ಬಿಡುತ್ತಿರುವ ನೀರಿನಿಂದ ಆಗುತ್ತಿರುವ ಜಲ ವಾಯು ಮಾಲಿನ್ಯದ ಬಗ್ಗೆ ಮಂಡಳಿ ನಿಗಾ ಇಟ್ಟಿವೆ. ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಕಲಬುರಗಿಗೆ ಬಂದು ಪರಿಶೀಲಿಸುವೆ.
– ಪಿ.ಎಂ.ನರೇಂದ್ರಸ್ವಾಮಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಬೆಳೆಸಲು ಇಲಾಖೆ ಹಾಗೂ ಕೆಕೆಆರ್‌ಡಿಬಿ ₹ 100 ಕೋಟಿಯ ಯೋಜನೆ ರೂಪಿಸಿವೆ. ಕಲಬುರಗಿ ಜಿಲ್ಲೆಯಲ್ಲಿ ₹ 25 ಕೋಟಿ ಖರ್ಚು ಮಾಡಲಾಗುತ್ತಿದೆ. ಚಿಂಚೋಳಿಯಲ್ಲಿ ಮತ್ತೊಂದು ವನ್ಯಜೀವಿ ಧಾಮ ಆರಂಭಿಸಲಾಗುವುದು.
– ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ
ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ
ಪರಿಸರ ಉಳಿವಿಗಾಗಿ ಹಾಗೂ ಮಾಲಿನ್ಯ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ನಾಗನಾಥ ಬಿ. ಮನೋಹರ ಎಸ್. ಡಾ.ಶ್ರೀನಿವಾಸ ಕುಷ್ಠಗಿ ಹಾಗೂ ಮಲ್ಲಿಕಾರ್ಜುನ ನಿಂಗಪ್ಪ ಅವರನ್ನು ಸಚಿವರು ಮತ್ತು ಗಣ್ಯರು ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಿ ಗೌರವಿಸಿದರು. ಇದಲ್ಲದೆ ವಿವಿಧ ಸ್ಪರ್ಧೇಯಲ್ಲಿ ವಿಜೇತ ಮಕ್ಕಳನ್ನು ಸಹ ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.