
ಕಲಬುರಗಿ: ರಕ್ಷಿತಾ ಇಂಟಿಗ್ರೇಟೆಡ್ ರೂರಲ್ ಆ್ಯಂಡ್ ಅರ್ಬನ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ನಗರದ ಶ್ರೀಯಾನ್ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಸತಿನಿಲಯದ ಮಕ್ಕಳಿಗೆ ದಿನನಿತ್ಯ ಬಳಕೆ ವಸ್ತುಗಳ ಕಿಟ್ ವಿತರಣೆ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸಂಸ್ಥೆ ಅಧ್ಯಕ್ಷ ರೇವಣಸಿದ್ದಪ್ಪ ಕಟ್ಟಿಮನಿ, ‘ಹೋದ ತಿಂಗಳು ಜಿಲ್ಲೆಯ ಅಫಜಲಪುರ, ಜೇವರ್ಗಿ ತಾಲ್ಲೂಕಿನ ಪ್ರವಾಹ ಪೀಡಿತ ನೆರೆ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಈಗ ಅಂಗವಿಕಲ ಶಾಲಾ ಮಕ್ಕಳಿಗೆ ಮತ್ತು ನಿರ್ಗತಿಕರಿಗೆ ಪೌಷ್ಟಿಕ ಕಿಟ್ ಮತ್ತು ದಿನಬಳಕೆ ವಸ್ತುಗಳ ಕಿಟ್ ವಿತರಣೆ ಮಾಡುವ ಅಭಿಯಾನ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯೋತ್ಸವ ದಿನ ಈ ಅಭಿಯಾನಕ್ಕೆ ಚಾಲನೆ ನೀಡುತ್ತಿರುವುದು ಸಂತೋಷ ತಂದಿದೆ’ ಎಂದರು.
‘ಈ ಅಭಿಯಾನಕ್ಕೆ ದೇಶದ ಪ್ರತಿಷ್ಠಿತ ಆಹಾರ ಉತ್ಪನ್ನ ಮತ್ತು ದಿನ ಬಳಕೆ ವಸ್ತುಗಳನ್ನು ತಯಾರಿಸುವ ಡಾಬರ್ ಕಂಪನಿಯೂ ಕೈಜೋಡಿಸಿದೆ’ ಎಂದು ಸಂಸ್ಥೆಯ ಸಂಯೋಜಕ ಬಾಲಾಜಿ ಎಂ.ಕಾಂಬಳೆ ತಿಳಿಸಿದರು.
ಸಮಾಜ ಸೇವಕಿ ಜಯಶ್ರೀ ವಾದಿರಾಜ, ಕಾಂಗ್ರೆಸ್ ಮುಖಂಡರಾದ ಅಂಜನಾ ರಾಥೋಡ್, ವಸತಿ ಶಾಲೆಯ ಅಧ್ಯಕ್ಷ ರಾಜಕುಮಾರ ಉಪಸ್ಥಿತರಿದ್ದರು.