
ಕಲಬುರಗಿ: ಚಿತ್ತಾಪುರದ ಕೊತಲಾಪುರ ಯಲ್ಲಮ್ಮ ದೇವಿ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಮುರಿದು ಕದ್ದೊಯ್ದಿದ್ದ ಪ್ರಕರಣ ಸೇರಿದಂತೆ ದೇವಸ್ಥಾನಗಳ ಹುಂಡಿ ಕಳವಿಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಗಳಲ್ಲಿ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದು, ಒಂದು ಪಲ್ಸರ್ ಬೈಕ್ ಸಹಿತ ₹14 ಸಾವಿರ ಜಪ್ತಿ ಮಾಡಿಕೊಂಡಿದ್ದಾರೆ.
‘ಚಿತ್ತಾಪುರದ ಕೊತಲಾಪುರ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿಯ ಬೆಳ್ಳಿ ಸಾಮಗ್ರಿಗಳ ಕಳವಿಗೆ ಸಂಬಂಧಿಸಿದಂತೆ ಚಿತ್ತಾಪುರ ಠಾಣೆಯಲ್ಲಿ 2025ರ ಸೆಪ್ಟೆಂಬರ್ 17ರಂದು ಪ್ರಕರಣ ದಾಖಲಾಗಿತ್ತು. ಶರಣಬಸವೇಶ್ವರ ದೇವಸ್ಥಾನದ ಹುಂಡಿ ಕಳವಿನ ಕುರಿತು 2026ರ ಜನವರಿ 20ರಂದು ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಾಳಗಿ ತಾಲ್ಲೂಕಿನ ಇಂಗನಕಲ್ ಗ್ರಾಮದ ರಾಜು ತಳವಾರ (20) ಹಾಗೂ ಸಾಬಣ್ಣ ಕದ್ದರಗಿ (26) ಬಂಧಿತರು. ಬಂಧಿತರಿಂದ ₹8,700 ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿ ರಾಜು ಮೇಲೆ ಚಿತ್ತಾಪುರ ಹಾಗೂ ಮಾಡಬೂಳ ಠಾಣೆಯಲ್ಲಿ ತಲಾವೊಂದು ಪ್ರಕರಣಗಳು ಇವೆ. ಸಾಬಣ್ಣ ವಿರುದ್ಧ ಮಾಡಬೂಳ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಆರೋಪಿ ರಾಜು ಹಳೆಯ ಪ್ರಕರಣಗಳಲ್ಲಿ ಆಗಾಗ ಕೋರ್ಟ್ ವಿಚಾರಣೆಗಳಿಗೆ ಹಾಜರಾಗುತ್ತಿದ್ದ. ಆಗೆಲ್ಲ ವಕೀಲರ ಶುಲ್ಕ ಭರಿಸಲು ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ. ಕಳವಿನಲ್ಲಿ ರಾಜುಗೆ ಸಾಬಣ್ಣ ಸಹಕಾರ ನೀಡುತ್ತಿದ್ದ. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಶ್ರೀನಿವಾಸುಲು ವಿವರಿಸಿದರು.
‘ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಪಿ.ಎಸ್.ವನಂಜಕರ ಹಾಗೂ ಸಿಬ್ಬಂದಿಯ ತಂಡ ರಚಿಸಲಾಗಿತ್ತು. ಆ ತಂಡವು ಉತ್ತಮವಾಗಿ ಕೆಲಸ ಮಾಡಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂವರ ಬಂಧನ
ಕಮಲಾಪುರ ತಾಲ್ಲೂಕಿನ ಕಲ್ಮೂಡ ಗ್ರಾಮದ ದತ್ತ ಮಂದಿರದ ಹುಂಡಿ ಒಡೆದು ಹಣ ಕಳವು ಮಾಡಿದ್ದ ಕುರಿತು ಕಮಲಾಪುರ ಠಾಣೆಯಲ್ಲಿ 2025ರ ಅ.23ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ಕಲಬುರಗಿ ಗ್ರಾಮೀಣ ಡಿವೈಎಸ್ಪಿ ಲೋಕೇಶ್ವರಪ್ಪ ಎನ್. ಮಾರ್ಗದರ್ಶನದಲ್ಲಿ ಕಮಲಾಪುರ ಸಿಪಿಐ ಶಿವಶಂಕರ ಸಾಹು ನೇತೃತ್ವದಲ್ಲಿ ಸಿಬ್ಬಂದಿಯ ತಂಡ ರಚಿಸಲಾಗಿತ್ತು. ಆ ತಂಡವು ಪ್ರಕರಣ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಅಡ್ಡೂರು ಶ್ರೀನಿವಾಸುಲು ಮಾಹಿತಿ ನೀಡಿದರು.
‘ಚಿಂಚೋಳಿ ತಾಲ್ಲೂಕಿನ ಕನಕಾಪುರದ ಮಾಣಿಕ ತಳವಾರ ಹಾಗೂ ಗುರುರಾಜ ಕೊಡಂಬಲ, ಕೊಳ್ಳುರ ಗ್ರಾಮದ ಶ್ರೀಕಾಂತ ತಳವಾರ ಬಂಧಿತರು. ಆರೋಪಿಗಳಿಂದ ಪಲ್ಸರ್ ಬೈಕ್ ಸೇರಿದಂತೆ ₹5,350 ಜಪ್ತಿ ಮಾಡಲಾಗಿದೆ. ಮೂವರು ಆರೋಪಿಗಳು ಒಂದೇ ಬೈಕ್‌ನಲ್ಲಿ ಬಂದು ಕಳವು ಮಾಡಿ ಪರಾರಿಯಾಗಿದ್ದರು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಗ್ರಾಮೀಣ ಡಿವೈಎಸ್ಪಿ ಲೋಕೇಶ್ವರಪ್ಪ ಎನ್., ಚಿತ್ತಾಪುರ ಸಿಪಿಐ ಪಿ.ಎಸ್.ವನಂಜಕರ, ಕಮಲಾಪುರ ಸಿಪಿಐ ಶಿವಶಂಕರ ಸಾಹು ಇದ್ದರು.
‘ಹಣ ಕದ್ದು ಲೂಟಿ ಕತೆ ಕಟ್ಟಿದ್ದ...’
ವಾಡಿ ಸಮೀಪದ ಲಾಡ್ಲಾಪುರ ಬಳಿ ಬೈಕ್ ಮೇಲೆ ತೆರಳುವಾಗ ಮುಸುಕುಧಾರಿಗಳಿಬ್ಬರು ಕಾರದ ಪುಡಿ ಎರಚಿ ₹5.54 ಲಕ್ಷ ಲೂಟಿ ಮಾಡಿದ್ದರೆನ್ನಲಾದ ಪ್ರಕರಣ ಹೊಸ ತಿರುವು ಪಡೆದಿದೆ. ಹಣ ಸಾಗಿಸುತ್ತಿದ್ದ ವ್ಯಕ್ತಿಯೇ ಹಣ ಬಚ್ಚಿಟ್ಟು ಲೂಟಿ ಕತೆ ಕಟ್ಟಿದ ಕುತೂಹಲಕರ ಸಂಗತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಅಳ್ಳೊಳ್ಳಿ ಗ್ರಾಮದ ಬಾಪುಗೌಡ ನಾಗರೆಡ್ಡಿ ನಾಚವಾರ (29) ಅಳ್ಳೊಳ್ಳಿಯ ಮದ್ಯದಂಗಡಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.
ಅಂಗಡಿಯ ಆದಾಯವನ್ನು ಪ್ರತಿ ಎರಡ್ಮೂರು ದಿನಕ್ಕೊಮ್ಮೆ ನಾಲವಾರದಲ್ಲಿರುವ ಮದ್ಯದಂಗಡಿ ಮಾಲೀಕ ಶರಣಗೌಡ ಮಾಲಿಪಾಟೀಲ ಅವರಿಗೆ ತಲುಪಿಸುತ್ತ ಬಂದಿದ್ದ. ಜ.23ರಂದು ಕೂಡ ₹5.54 ಲಕ್ಷ ಹಣ ತೆಗೆದುಕೊಂಡು ಸ್ನೇಹಿತನ ಜೊತೆಗೂಡಿ ಕೊಡಲು ಬೈಕ್‌ನಲ್ಲಿ ಹೊರಟಿದ್ದ. ಈ ವೇಳೆ ಮುಸುಕುಧಾರಿಗಳಿಬ್ಬರು ಕಾರದ ಪುಡಿ ಎರಚಿ ಲೂಟಿ ಮಾಡಿರುವುದಾಗಿ ಬಾಪುಗೌಡ ಮಾಲೀಕರಿಗೆ ಹೇಳಿದ್ದ. ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜನರನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ‘ಬಾಪುಗೌಡ ಅವರ ಜೀನ್ಸ್ ಪ್ಯಾಂಟ್ ಜೇಬಿನಲ್ಲೆ ಕಾರದ ಪುಡಿಯ ಕುರುಹು ಸಿಕ್ಕಿತು. ಮುಸುಕುಧಾರಿಗಳು ಎರಚಿದ ಕಾರದ ಪುಡಿ ಪ್ಯಾಂಟ್ ಜೇಬಿಗೆ ಹೇಗೆ ಹೋಯಿತು ಎಂದು ವಿಸ್ತೃತವಾಗಿ ವಿಚಾರಿಸಿದಾಗ ಸತ್ಯ ಹೊರಬಂದಿದೆ. ತನಗಾದ ಸಾಲ ತೀರಿಸಲು ಹೀಗೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ. ಆರೋಪಿ ಬಾಪುಗೌಡನನ್ನು ಬಂಧಿಸಲಾಗಿದ್ದು ಆತ ಮನೆಯಲ್ಲಿ ಬಚ್ಚಿಟ್ಟಿದ್ದ ₹5.54 ಲಕ್ಷ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಕೆಯಾಗಿದ್ದ ಬೈಕ್ ಕೂಡ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಐದು ಬೈಕ್‌ಗಳ ಜಪ್ತಿ
ಕಮಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಬೈಕ್ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಆರೋಪಿ ಬೀದರ್ ಜಿಲ್ಲೆಯ ಹುಮನಾಬಾದ್‌ನ ಕನಕಟ್ಟಾ ಗ್ರಾಮದ ಆನಂದ ಭಜಂತ್ರಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಐದು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಡ್ಡೂರು ಶ್ರೀನಿವಾಸುಲು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.