ಕಲಬುರಗಿಯಲ್ಲಿ ಶನಿವಾರ ದಿ.ಎಸ್.ಎಸ್.ಪಾಟೀಲ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಶೇಖರ ಸೋಮಶೆಟ್ಟಿ, ಸ್ವಾಮಿರಾವ ಕುಲಕರ್ಣಿ, ರಾಘವೇಂದ್ರ ಮೈಲಾಪುರ, ಡಾ.ಪಿ.ಎಸ್.ಶಂಕರ, ಪ್ರೊ.ಮಲ್ಲಿಕಾ ಎಸ್.ಘಂಟಿ, ಅಪ್ಪಾರಾವ ಅಕ್ಕೋಣೆ ಅವರಿಗೆ ಕರ್ಮಯೋಗಿ ಪ್ರಶಸ್ತಿ ನೀಡಲಾಯಿತು.
ಪ್ರಜಾವಾಣಿ ಚಿತ್ರ
ಕಲಬುರಗಿ: ‘ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಅಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಉದ್ಯಮ ವಿಸ್ತರಿಸಿದ್ದ ಉದ್ಯಮಿ, ಕಡಗಂಚಿಯ ದಿವಂಗತ ಎಸ್.ಎಸ್. ಪಾಟೀಲ ಅವರು ಕೊಡುಗೈ ದಾನಿಯಾಗಿದ್ದರು. ಸಹಸ್ರಾರು ಜನರಿಗೆ ಉದ್ಯೋಗ ನೀಡಿದ್ದರು’ ಎಂದು ವಿವಿಧ ರಂಗಗಳ ಗಣ್ಯರು ಸ್ಮರಿಸಿದರು.
ನಗರದಲ್ಲಿ ಶನಿವಾರ ಎಸ್.ಎಸ್. ಪಾಟೀಲ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ‘ಎಸ್.ಆರ್. ಪಾಟೀಲ್ ಫೌಂಡೇಷನ್ ಹಾಗೂ ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್’ ಸಹಯೋಗದಲ್ಲಿ ಆಯೋಜಿಸಿದ್ದ ಕರ್ಮ ಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ, ಪ್ರಕಾಶಕ ಅಪ್ಪಾರಾವ ಅಕ್ಕೋಣಿ, ‘ಸದಾ ಹಸನ್ಮುಖರಾಗಿ ಇರುತ್ತಿದ್ದ ಎಸ್.ಎಸ್. ಪಾಟೀಲ ಅವರು ದಾನಕ್ಕೆ ಹೆಸರಾಗಿದ್ದರು. ಆದರೆ, ತಾವು ಮಾಡಿದ ದಾನ ಯಾರಿಗೂ ಗೊತ್ತಾಗಬಾರದು ಎಂದು ಷರತ್ತು ವಿಧಿಸುತ್ತಿದ್ದರು. ಬಸವೇಶ್ವರ ನಗರದಲ್ಲಿ ದೇವಸ್ಥಾನ ಕಟ್ಟುವ ಸಂದರ್ಭದಲ್ಲಿ ದೇಣಿಗೆ ಕೇಳಲು ಅವರ ಮನೆಗೆ ಹೋಗಿದ್ದೆವು. ತಾವು ದೇವಸ್ಥಾನಕ್ಕೇ ಬಂದು ದೇಣಿಗೆ ಕೊಡುವುದಾಗಿ ಹೇಳಿದ್ದರು. ಮಾತು ಕೊಟ್ಟಂತೆ ದೇಣಿಗೆಯ ಚೆಕ್ ನೀಡಿದರು. ತಮ್ಮ ಹೆಸರು ದಾನಿಗಳ ಪಟ್ಟಿಯಲ್ಲಿ ಹೇಳಬಾರದು ಎಂದೂ ತಿಳಿಸಿದ್ದರು. ಇಂತಹ ಎಷ್ಟೋ ದಾನದ ಕೆಲಸಗಳನ್ನು ಅವರು ಮಾಡಿದ್ದಾರೆ’ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿ, ‘1980ರ ದಶಕದಲ್ಲಿ ನಾನು ಉಪಜೀವನಕ್ಕಾಗಿ ವಿಶ್ವವಿದ್ಯಾಲಯಕ್ಕೆ ಬಂದಾಗ ಆಗಾಗ ನಡೆಯುವ ಕಾರ್ಯಕ್ರಮಗಳಿಗೆ ಊಟದ ವ್ಯವಸ್ಥೆ ಮಾಡುವಂತೆ ಕೇಳಲು ಎಸ್.ಎಸ್. ಪಾಟೀಲ ಅವರ ಬಳಿ ಹೋಗುತ್ತಿದ್ದರು. ಬಹಳ ಖುಷಿಯಿಂದ ಊಟದ ಖರ್ಚನ್ನು ನೋಡಿಕೊಳ್ಳುತ್ತಿದ್ದರು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದ ಬಹುದೊಡ್ಡ ಉದ್ಯಮಿಯಾಗಿ ಬೆಳೆದ ಎಸ್.ಎಸ್. ಪಾಟೀಲ ಅವರು 25 ವರ್ಷ ಕೆಕೆಸಿಸಿಐ ಅಧ್ಯಕ್ಷರಾಗಿ, ರಾಜ್ಯ ಮಟ್ಟದ ಕೈಗಾರಿಕಾ ಸಂಸ್ಥೆ ಎಫ್‌ಕೆಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಂಗಮ್ ಹೆಲ್ತ್ ಕೇರ್ ಸೇರಿದಂತೆ ವಿವಿಧ ಉದ್ಯಮಗಳನ್ನು ಹಲವು ರಾಜ್ಯಗಳಲ್ಲಿ ಸ್ಥಾಪಿಸಿದ್ದಾರೆ. ಆ ಕೈಗಾರಿಕಾ ಸಮೂಹವನ್ನು ಅವರ ಪುತ್ರರಾದ ಲಿಂಗರಾಜ್ ಪಾಟೀಲ, ಸಿದ್ದಲಿಂಗ ಪಾಟೀಲ ಅವರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ’ ಎಂದರು.
ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಸ್ವಾಮಿರಾವ ಕುಲಕರ್ಣಿ ಮಾತನಾಡಿ, ‘ಒಳ್ಳೆಯವರ ಪ್ರಚಾರ, ಒಳ್ಳೆಯವರ ಪರ ಮಾತನಾಡಿದರೆ ಕೆಟ್ಟದ್ದಕ್ಕೆ ತಡೆ ಹಾಕಬಹುದು. ಹಾಗಾಗಿ, ಒಳ್ಳೆಯರಾಗಿ ಗುರುತಿಸಿಕೊಂಡ ಎಸ್.ಎಸ್. ಪಾಟೀಲ ಅವರ ವ್ಯಕ್ತಿತ್ವದ ಬಗ್ಗೆ ಎಲ್ಲೆಡೆ ಚರ್ಚೆಗಳಾಗಬೇಕು’ ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಹಿರಿಯ ವೈದ್ಯ ಡಾ.ಪಿ.ಎಸ್.ಶಂಕರ್, ಚಿನ್ನಾಭರಣ ಉದ್ಯಮಿ ರಾಘವೇಂದ್ರ ಮೈಲಾಪುರ, ಬೀದರ್‌ನ ಚಂದ್ರಶೇಖರ ಸೋಮಶೆಟ್ಟಿ ಮಾತನಾಡಿದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್.ಆರ್.ಪಾಟೀಲ ಫೌಂಡೇಷನ್ ಗೌರವಾಧ್ಯಕ್ಷೆ ಸರೋಜಿನಿದೇವಿ, ಪಾಟೀಲ ಗ್ರೂಪ್ ಆಫ್ ಕಂಪನೀಸ್‌ನ ಚೇರ್‌ಮನ್ ಲಿಂಗರಾಜ ಪಾಟೀಲ, ನಿರ್ದೇಶಕ ಸಿದ್ದಲಿಂಗ ಪಾಟೀಲ ಸೇರಿದಂತೆ ವಿವಿಧ ಗಣ್ಯರು ವೇದಿಕೆಯಲ್ಲಿದ್ದರು.
ಕಾಯಕಯೋಗಿ ಪ್ರಶಸ್ತಿಯು ₹ 51 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.
ಪ್ರತಿ ವರ್ಷವೂ ಯಾರಿಂದಲೂ ಅರ್ಜಿ ಕರೆಯದೇ ಕಾಯಕಯೋಗಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುತ್ತಿದ್ದೇವೆ. ನಾವು ಪ್ರಶಸ್ತಿ ನೀಡಿದ ಬಳಿಕವೇ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ದೊರಕಿತು.– ಮನು ಬಳಿಗಾರ್, ಎಸ್.ಆರ್.ಪಾಟೀಲ ಫೌಂಡೇಷನ್ ಅಧ್ಯಕ್ಷ
ಹಳ್ಳಿಯಿಂದ ಬಂದು ದೊಡ್ಡ ಉದ್ಯಮ ಸ್ಥಾಪಿಸಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರುವುದು ಸಾಮಾನ್ಯ ಮಾತಲ್ಲ. ಅದನ್ನು ಎಸ್.ಎಸ್. ಪಾಟೀಲ ಅವರು ಸಾಧಿಸಿ ತೋರಿಸಿದ್ದಾರೆ.– ಶರಣಬಸಪ್ಪ ದರ್ಶನಾಪುರ, ಸಣ್ಣ ಕೈಗಾರಿಕೆ ಸಚಿವ
ಶಾಲಾ ಬ್ಯಾಗ್ ಸೀರೆ ವಿತರಣೆ
ದಿ.ಎಸ್.ಎಸ್.ಪಾಟೀಲ ಅವರ ಪುಣ್ಯಸ್ಮರಣೆ ನಿಮಿತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಎಸ್.ಆರ್.ಪಾಟೀಲ ಫೌಂಡೇಶನ್ ಹಾಗೂ ಗ್ರೂಪ್ ಆಫ್ ಇಂಡಸ್ಟ್ರೀಸ್ ವತಿಯಿಂದ ಬ್ಯಾಗ್‌ಗಳನ್ನು ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.