ADVERTISEMENT

ಕಲಬುರ್ಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ ಆರಂಭ

ಧೈರ್ಯದಿಂದ ಪರೀಕ್ಷೆ ಎದುರಿಸಲು ಬಂದ ವಿದ್ಯಾರ್ಥಿ ಸೈನ್ಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 4:55 IST
Last Updated 28 ಮಾರ್ಚ್ 2022, 4:55 IST
   

ಕಲಬುರ್ಗಿ:ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಜಿಲ್ಲೆಯಲ್ಲಿ ಸುಸೂತ್ರವಾಗಿ ಆರಂಭವಾದವು.

ಸೋಮವಾರ ಬೆಳಿಗ್ಗೆ 9.30ರ ವೇಳೆಗೆ ಹಲವು ಮಕ್ಕಳು ಪರೀಕ್ಷಾ ಕೇಂದ್ರಗಳತ್ತ ಧಾವಿಸಿದರು. ಪಾಲಕರು, ಪೋಷಕರು ಕೂಡ ಮಕ್ಕಳನ್ನು ಪರೀಕ್ಷಾ ಕೇಂದ್ರಗಳವರೆಗೆ ಕರೆತಂದರು. ಮತ್ತೆ ಕೆಲವರು ಆಟೊ, ಬೈಕ್, ಸರ್ಕಾರಿ ಬಸ್ಸುಗಳಲ್ಲಿಯೂ ಪ್ರಯಾಣ ಮಾಡಿ ತಮ್ಮ ತಮ್ಮ ಪರೀಕ್ಷಾ ಕೊಠಡಿ ಸೇರಿಕೊಂಡರು.

ಸಾಲಾಗಿ ಬಂದ ಮಕ್ಕಳಿಗೆ ಸ್ಯಾನಿಟೈಸರ್, ಮಾಸ್ಕ್ ನೀಡಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಯಿತು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕಡೆಗಳಲ್ಲಿ ಚೆಕ್ ಮಾಡಿ, ಕೆಲವರ ಮೊಬೈಲ್, ವಾಚುಗಳನ್ನುಇರಿಸಿಕೊಳ್ಳಲಾಯಿತು.

ADVERTISEMENT

ಜಿಲ್ಲೆಯಲ್ಲಿ ಈ ಬಾರಿ 46,670 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ಇವರಲ್ಲಿ 24,721 ಬಾಲಕರು, 21,929 ಬಾಲಕಿಯರು ಇದ್ದಾರೆ ಎಂದು ಡಿಡಿಪಿಐ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 173 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅದರಲ್ಲಿ ಸೂಕ್ಷ್ಮ ಕೇಂದ್ರಗಳು 19, ಅತೀ ಸೂಕ್ಷ್ಮ ಕೇಂದ್ರ 1 ಎಂದು ಪರಿಗಣಿಸಲಾಗಿದೆ.

ಪರೀಕ್ಷೆಗಳನ್ನು ಸುಸೂತ್ರವಾಗಿ ನಿರ್ವಹಿಸಲು 3,053 ಸಿಬ್ಬಂದಿ ನಿಯೋಜಿಸಲಾಗಿದೆ. ಅವರಲ್ಲಿ2,337 ಮಂದಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಇದ್ದಾರೆ.

ಪ್ರತಿ ಪರೀಕ್ಷಾ ಕೇಂದ್ರಕ್ಕೂ ಒಬ್ಬ ಮುಖ್ಯ ಅಧೀಕ್ಷಕ ಸೇರಿ 173 ಅಧಿಕಾರಿಗಳನ್ನು, ಕೇಂದ್ರಕ್ಕೆ ತಲಾ ಇಬ್ಬರಂತೆ 346 ಅನ್ಯ ಇಲಾಖೆ ಜಾಗೃತ ದಳದ ಅಧಿಕಾರಿಗಳು, 24 ಉಪ ಮುಖ್ಯ ಅಧೀಕ್ಷಕರು ಹಾಗೂ ಕೇಂದ್ರಕ್ಕೆ ತಲಾ ಒಬ್ಬ ಸ್ಥಾನಿಕ ಜಾಗೃತ ದಳದ ಅಧಿಕಾರಿ ಸೇರಿ 173 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಿಷೇಧಾಜ್ಞೆ, ವೈದ್ಯಕೀಯ ಸೌಕರ್ಯ:ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ವಲಯವೆಂದು ಘೋಷಿಸಲಾಗಿದೆ. ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿ ಮಾಡಲಾಗಿದೆ.

ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಪ್ರತಿ ಪರೀಕ್ಷಾ ಕೇಂದ್ರದ ಬಳಿ ಅರೆ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ.

ಕೊರೊನಾ ವೈರಾಣು ಆತಂಕ ಉಂಟಾಗದಂತೆ, ಭಾನುವಾರವೇ ಎಲ್ಲ ಡೆಸ್ಕ್‌ ಹಾಗೂ ತರಗತಿಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.