ಪ್ರಾತಿನಿಧಿಕ ಚಿತ್ರ
ಕಲಬುರಗಿ: ‘ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ...’
–ಹೀಗೆಂದು ಮಹಾನ್ ಕವಿ ಮಹಲಿಂಗರಂಗ ಅವರು ಕನ್ನಡ ನುಡಿಯ ಹಿರಿಮೆಯನ್ನು 17ನೇ ಶತಮಾನದಲ್ಲೇ ಸಾರಿದ್ದಾರೆ. ಆದರೆ, ಕಲ್ಯಾಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ‘ಕನ್ನಡ ಸುಲಿದ ಬಾಳೆಹಣ್ಣಲ್ಲ, ಅದು ಕಬ್ಬಿಣದ ಕಡಲೆ’ಯಾಗುತ್ತಿದೆ. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇದಕ್ಕೆ ನಿದರ್ಶನ.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರಲ್ಲಿ 1,67,728 ಮಕ್ಕಳು ಕನ್ನಡ ಭಾಷಾ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಬರೋಬ್ಬರಿ 46,824 ಮಂದಿ ಅನುತ್ತೀರ್ಣರಾಗಿದ್ದಾರೆ. ಬೀದರ್ ಜಿಲ್ಲೆಯ 14,248, ಕೊಪ್ಪಳ ಜಿಲ್ಲೆಯ 8,657, ರಾಯಚೂರು ಜಿಲ್ಲೆಯ 5,734, ಕಲಬುರಗಿ ಜಿಲ್ಲೆಯ 5,319, ಯಾದಗಿರಿ ಜಿಲ್ಲೆಯ 4,689, ವಿಜಯನಗರ ಜಿಲ್ಲೆಯ 4,348, ಬಳ್ಳಾರಿ ಜಿಲ್ಲೆಯ 3,829 ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲೇ ‘ಡುಮ್ಕಿ’ ಹೊಡೆದಿದ್ದಾರೆ.
ಇಂಗ್ಲಿಷ್, ಹಿಂದಿಯೂ ಕಷ್ಟ:
ಕಲ್ಯಾಣ ಭಾಗದ 1,67,482 ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆ ಬರೆದಿದ್ದರು. ಅದರಲ್ಲಿ 54,736 ಮಕ್ಕಳು ನಪಾಸಾಗಿದ್ದಾರೆ. ಬೀದರ್ ಜಿಲ್ಲೆಯೊಂದರಲ್ಲಿಯೇ ಬರೋಬ್ಬರಿ 17,736 ಮಕ್ಕಳು ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 8,205, ಕೊಪ್ಪಳ ಜಿಲ್ಲೆಯಲ್ಲಿ 7,756, ಕಲಬುರಗಿ ಜಿಲ್ಲೆಯಲ್ಲಿ 6,176, ಬಳ್ಳಾರಿ ಜಿಲ್ಲೆಯಲ್ಲಿ 5,534, ಯಾದಗಿರಿ ಜಿಲ್ಲೆಯಲ್ಲಿ 5,146, ವಿಜಯನಗರ ಜಿಲ್ಲೆಯಲ್ಲಿ 4,183 ವಿದ್ಯಾರ್ಥಿಗಳು ನಪಾಸಾಗಿದ್ದಾರೆ.
ಈ ಭಾಗದ ಏಳು ಜಿಲ್ಲೆಗಳಲ್ಲಿ 1,67,468 ಮಕ್ಕಳು ಹಿಂದಿ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 45,984 ಮಕ್ಕಳು ಉತ್ತೀರ್ಣರಾಗಿಲ್ಲ.
ಗಣಿತಕ್ಕಿಂತ ವಿಜ್ಞಾನ ಟಫ್?:
ಕಲ್ಯಾಣ ಭಾಗದ ವಿದ್ಯಾರ್ಥಿಗಳಿಗೆ ಗಣಿತಕ್ಕಿಂತಲೂ ವಿಜ್ಞಾನ ವಿಷಯ ಹೆಚ್ಚು ಕಠಿಣವಾಗಿ ಮಾರ್ಪಟ್ಟಿದೆ. ಈ ಭಾಗದ ಏಳು ಜಿಲ್ಲೆಗಳಲ್ಲಿ 1,67,699 ಮಕ್ಕಳು ಗಣಿತ ಪರೀಕ್ಷೆ ಬರೆದಿದ್ದರು. ಅದರಲ್ಲಿ 59,350 ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಈ ಭಾಗದ 1,67,699 ಮಕ್ಕಳು ವಿಜ್ಞಾನ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 60,853 ವಿದ್ಯಾರ್ಥಿಗಳು ನಪಾಸಾಗಿದ್ದಾರೆ. ಇದು ಈ ಭಾಗದ ಮಕ್ಕಳಿಗೆ ಗಣಿತಕ್ಕಿಂತಲೂ ವಿಜ್ಞಾನ ಕಠಿಣ ಎಂದು ನಿರೂಪಿಸುತ್ತಿದೆ.
ಗಣಿತದಲ್ಲಿ ಬೀದರ್ ಜಿಲ್ಲೆಯಲ್ಲಿ 17,325, ಕೊಪ್ಪಳ ಜಿಲ್ಲೆಯಲ್ಲಿ 10,487, ರಾಯಚೂರು ಜಿಲ್ಲೆಯಲ್ಲಿ 8,195, ಕಲಬುರಗಿ ಜಿಲ್ಲೆಯಲ್ಲಿ 7,250, ಯಾದಗಿರಿ ಜಿಲ್ಲೆಯಲ್ಲಿ 6,184, ಬಳ್ಳಾರಿ ಜಿಲ್ಲೆಯಲ್ಲಿ 5,668, ವಿಜಯನಗರ ಜಿಲ್ಲೆಯಲ್ಲಿ 4,241 ವಿದ್ಯಾರ್ಥಿಗಳು ‘ಡುಮ್ಕಿ’ ಹೊಡೆದಿದ್ದಾರೆ.
ವಿಜ್ಞಾನ ವಿಷಯದಲ್ಲಿ ಬೀದರ್ ಜಿಲ್ಲೆಯಲ್ಲಿ 17,856, ಕೊಪ್ಪಳ ಜಿಲ್ಲೆಯಲ್ಲಿ 11,414, ಕಲಬುರಗಿ ಜಿಲ್ಲೆಯಲ್ಲಿ 7,547, ರಾಯಚೂರು ಜಿಲ್ಲೆಯಲ್ಲಿ 7,543, ಯಾದಗಿರಿ ಜಿಲ್ಲೆಯಲ್ಲಿ 6,680, ಬಳ್ಳಾರಿ ಜಿಲ್ಲೆಯಲ್ಲಿ 5,704, ವಿಜಯನಗರ ಜಿಲ್ಲೆಯಲ್ಲಿ 4,109 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಕಲ್ಯಾಣದ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಕಷ್ಟ, ಗಣಿತ ಟಫ್, ವಿಜ್ಞಾನ ಬಹಳ ಕಷ್ಟ, ಕನ್ನಡವಂತೂ ‘ಕಬ್ಬಿಣದ ಕಡಲೆ’! ಎಂಬಂತಾಗಿದೆ. ಇದು ಶಿಕ್ಷಣದ ಗುಣಮಟ್ಟದ ಬಗೆಗೆ ಗಂಭೀರ ಪ್ರಶ್ನೆಗಳನ್ನು ಏಳುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.