ಕಲಬುರಗಿಯ ಸರ್ಕಾರಿ ತಾರಫೈಲ್ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ವಿದ್ಯಾರ್ಥಿನಿಯರು ಮೊಬೈಲ್ ಫೋನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನೋಡಿ ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕಳೆದ ಬಾರಿಗಿಂತಲೂ ಒಂದು ಸ್ಥಾನ ಕುಸಿದು ರಾಜ್ಯಕ್ಕೇ ಕೊನೆಯ (35ನೇ) ಸ್ಥಾನ ಪಡೆದಿದೆ.
ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿ ಜಿಲ್ಲೆಯಲ್ಲಿ 19,177 ಬಾಲಕರು, 20,086 ಬಾಲಕಿಯರು ಸೇರಿದಂತೆ ಒಟ್ಟು 39,263 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 6,508 ಬಾಲಕರು, 10,152 (ಶೇ50.54) ಬಾಲಕಿಯರು ಸೇರಿದಂತೆ ಒಟ್ಟು 16,660 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ42.43ರಷ್ಟು ಫಲಿತಾಂಶ ಪಡೆದಿದೆ.
2024ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯು ಶೇ53.04ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 34ನೇ ಸ್ಥಾನ ಗಳಿಸಿತ್ತು. 2023ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯು 29ನೇ ಸ್ಥಾನದಲ್ಲಿತ್ತು.
ಬಾಲಕಿಯರ ಮೇಲುಗೈ: ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಅಗ್ರ ಹತ್ತು ಸ್ಥಾನ ಪಡೆದವರಲ್ಲಿ 9 ಮಂದಿ ವಿದ್ಯಾರ್ಥಿನಿಯರು ಎಂಬುದು ವಿಶೇಷ. ಈ ಪೈಕಿ ಐವರು ಬಾಲಕಿಯರು 621 ಅಂಕ ಸಾಧನೆ ಮಾಡಿದ್ದಾರೆ. ಒಟ್ಟಾರೆ ಪರೀಕ್ಷೆಗೆ ಹಾಜರಾದವರಲ್ಲಿ ಶೇ 50.54ರಷ್ಟು ಬಾಲಕಿಯರು, ಶೇ33.94 ಬಾಲಕರು ಪಾಸ್ ಆಗಿದ್ದಾರೆ.
ಗ್ರಾಮೀಣದಲ್ಲಿ ಕುಸಿತ: ನಗರದಲ್ಲಿ ಪ್ರದೇಶದ ಪರೀಕ್ಷೆ ಬರೆದ 17,324 ವಿದ್ಯಾರ್ಥಿಗಳ ಪೈಕಿ 8,042 ಮಕ್ಕಳು ಪಾಸಾಗಿದ್ದು, ಶೇ46.42ರಷ್ಟು ಫಲಿತಾಂಶ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದ ಪರೀಕ್ಷೆ ಬರೆದ 11,113 ಮಕ್ಕಳ ಪೈಕಿ 8,618 ಮಂದಿ ಉತ್ತೀರ್ಣರಾಗಿದ್ದು, ಶೇ39.28ರಷ್ಟು ಫಲಿತಾಂಶ ಗಳಿಸಿದ್ದಾರೆ.
ಸರ್ಕಾರಿ ಶಾಲೆ ಉತ್ತಮ: ಪ್ರಸಕ್ತ ವರ್ಷ ಜಿಲ್ಲೆಯ ಖಾಸಗಿ ಶಾಲೆಗಳೇ ಮೇಲುಗೈ ಸಾಧಿಸಿದ್ದು, ಶೇ72.52ರಷ್ಟು ಫಲಿತಾಂಶ ಪಡೆದಿವೆ. ಅನುದಾನಿತ ಶಾಲೆಯ ಫಲಿತಾಂಶಕ್ಕೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಫಲಿತಾಂಶ ತುಸು ಉತ್ತಮವಾಗಿದೆ. ಸರ್ಕಾರಿ ಶಾಲೆಗಳು ಶೇ53.43ರಷ್ಟು ಫಲಿತಾಂಶ ಪಡೆದರೆ, ಅನುದಾನಿತ ಶಾಲೆಗಳು ಶೇ43.95ರಷ್ಟು ಫಲಿತಾಂಶ ಗಳಿಸಿವೆ.
ಪ್ರಸಕ್ತ ವರ್ಷ ಇಂಗ್ಲಿಷ್ ಮಾಧ್ಯಮದ ಶೇ59.48ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಕನ್ನಡ ಮಾಧ್ಯಮ ಶೇ34.74ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.
ಭಾಷಾ ವಿಷಯವೇ ಕಬ್ಬಿಣದ ಕಡಲೆ!: ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ ಜಿಲ್ಲೆಯ 135 ವಿದ್ಯಾರ್ಥಿಗಳು ಪ್ರಥಮ ಭಾಷೆಯಲ್ಲಿ ಶೇ100ರಷ್ಟು, 244 ಮಂದಿ ದ್ವಿತೀಯ ಭಾಷೆಯಲ್ಲಿ ಶೇ100ರಷ್ಟು, 566 ಮಂದಿ ತೃತೀಯ ಭಾಷೆಯಲ್ಲಿ ಶೇ100ರಷ್ಟು, 96 ವಿದ್ಯಾರ್ಥಿಗಳು ಗಣಿತದಲ್ಲಿ ಶೇ100ರಷ್ಟು, 99 ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಶೇ100ರಷ್ಟು, 135 ಮಕ್ಕಳು ಸಮಾಜ ವಿಜ್ಞಾನದಲ್ಲಿ ಶೇ100ರಷ್ಟು ಅಂಕ ಸಾಧನೆ ಮಾಡಿದ್ದಾರೆ.
ಆದರೆ, ದ್ವಿತೀಯ ಭಾಷೆ ಹಾಗೂ ತೃತೀಯ ಭಾಷೆಯಲ್ಲಿ ತಲಾ 79 ವಿದ್ಯಾರ್ಥಿಗಳು ಒಂದೇ ಒಂದು ಅಂಕ ಗಳಿಸುವಲ್ಲಿ ವಿಫಲರಾಗಿ ‘ಸೊನ್ನೆ’ ಸುತ್ತಿದ್ದಾರೆ.
‘ಸಕಲ ಯತ್ನಗಳ ಹೊರತಾಗಿಯೂ ಜಿಲ್ಲೆಯ ಫಲಿತಾಂಶ ಕುಸಿದಿದೆ. ಈ ಕುಸಿತಕ್ಕೆ ಶಿಕ್ಷಕರ ಕೊರತೆ ಸೇರಿದಂತೆ ಹಲವು ಕಾರಣಗಳು ತಕ್ಷಣಕ್ಕೆ ಗೋಚರಿಸುತ್ತಿವೆ. ಈ ಕುರಿತು ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಾಗುವುದು. ಶಿಕ್ಷಕರು ಸೌಲಭ್ಯಗಳಿದ್ದರೂ ಕಳಪೆ ಫಲಿತಾಂಶ ದಾಖಲಿಸಿದವರಿಗೆ ನೋಟಿಸ್ ನೀಡಲು ಕ್ರಮವಹಿಸಲಾಗುವುದು’ ಎಂದು ಡಿಡಿಪಿಐ ಸೂರ್ಯಕಾಂತ ಮದಾನೆ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳಿಗೆ ಒಟ್ಟು ಶಿಕ್ಷಕರ 2507 ಮಂಜೂರಾತಿ ಹುದ್ದೆಗಳಿದ್ದು 552 ಹುದ್ದೆಗಳು ಖಾಲಿಯಿವೆ. ಅನುದಾನಿತ ಪ್ರೌಢಶಾಲೆಗಳಲ್ಲಿ ಬಹಳಷ್ಟು ಶಿಕ್ಷಕರ ಹುದ್ದೆಗಳು ಭರ್ತಿಗೆ ಕಾಯುತ್ತಿವೆ. 2016 ಜನವರಿಯಿಂದ ಈತನಕ ನಿವೃತ್ತರಾದ ಹುದ್ದೆಗಳಲ್ಲಿ ಒಂದೂ ಸ್ಥಾನ ತುಂಬಿಲ್ಲ. ಇವೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರಿದಂತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.