ADVERTISEMENT

ಹಾಲ್ ಟಿಕೆಟ್ ಸಿಗದೆ ಪರೀಕ್ಷೆ ಬರೆಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ

ಪರೀಕ್ಷಾ ಮಂಡಳಿಗೆ ಶುಲ್ಕ ಪಾವತಿಸದ ಮುಖ್ಯ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 2:22 IST
Last Updated 24 ಸೆಪ್ಟೆಂಬರ್ 2020, 2:22 IST
ಚಲುವ ಸಿದ್ರಾಮ
ಚಲುವ ಸಿದ್ರಾಮ   

ಚಿತ್ತಾಪುರ: ಎಸ್ಸೆಎಸ್ಸೆಲ್ಸಿ ಪೂರಕ ಪರೀಕ್ಷೆಗೆ ಶುಲ್ಕ ಪಾವತಿ ಮಾಡಿದರೂ ಹಾಲ್ ಟಿಕೆಟ್ ಬಾರದೆ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯಲಾಗದೆ ಒಂದು ವರ್ಷದ ಶೈಕ್ಷಣಿಕ ಅವಧಿ ಹಾಳಾದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಪಟ್ಟಣದ ಆದರ್ಶ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪಟ್ಟಣದ ಚಲುವ ಸಿದ್ರಾಮ ಎಂಬ ವಿದ್ಯಾರ್ಥಿ ಪೂರಕ ಪರೀಕ್ಷೆ ಬರೆಯಲು ನಿಗದಿತ ಅವಧಿಯಲ್ಲಿ ಶುಲ್ಕಪಾವತಿ ಮಾಡಿದ್ದಾನೆ. ಆದರೆ, ಪರೀಕ್ಷಾ ಮಂಡಳಿಗೆ ಶುಲ್ಕ ಪಾವತಿ ಮಾಡದೆ ಶಾಲೆಯ ಮುಖ್ಯ ಶಿಕ್ಷಕ ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ.

ಹಾಲ್ ಟಿಕೆಟ್ ಬಂದಿಲ್ಲ ಎಂದು ನನ್ನ ಅಣ್ಣನ ಮಗನಿಗೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಮುಖ್ಯ ಶಿಕ್ಷಕನ ಕರ್ತವ್ಯ ಲೋಪದಿಂದ ಪರೀಕ್ಷೆ ಬರೆಯಲು ವಂಚಿತ ನಾಗಿರುತ್ತಾನೆ. ಕರ್ತವ್ಯಲೋಪ ಎಸಗಿರುವ ಮುಖ್ಯ ಶಿಕ್ಷಕ ವಿರುದ್ಧ ಕ್ರಮ ಜರುಗಿಸಿ ಸೇವೆಯಿಂದ ಅಮಾನತು ಮಾಡಬೇಕು ಎಂದು ಪುರಸಭೆ
ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಬೊಮ್ಮನಳ್ಳಿಕರ್ ಅವರು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿ ಆಗ್ರಹಿಸಿದ್ದಾರೆ.

ADVERTISEMENT

ಕರ್ತವ್ಯಲೋಪ ಎಸಗಿರುವ ಶಾಲೆಯ ಮುಖ್ಯ ಶಿಕ್ಷಕ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಅವರ ಪ್ರತಿಕ್ರಿಯೆ ಬಂದ ನಂತರ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.