ADVERTISEMENT

ಅರ್ಹರಿಗೆ ಎಸ್‌ಟಿ ಮೀಸಲಾತಿ ಪ್ರಮಾಣ ಪತ್ರ ನೀಡಿ: ಚಂದ್ರಕಾಂತ ತಳವಾರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 6:55 IST
Last Updated 4 ನವೆಂಬರ್ 2025, 6:55 IST
ಚಂದ್ರಕಾಂತ ತಳವಾರ
ಚಂದ್ರಕಾಂತ ತಳವಾರ   

ಕಲಬುರಗಿ: ‘ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿರುವ ತಳವಾರ ಹಾಗೂ ಪರಿವಾರ ಸಮಾಜದ ಜನರಿಗೆ ಕಳೆದ ಏಳು ತಿಂಗಳಿಂದ ಎಸ್‌ಟಿ ಪ್ರಮಾಣ ಪತ್ರ ನೀಡುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಕಾಂತ ತಳವಾರ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ತಳವಾರ, ಪರಿವಾರ ಹಾಗೂ ಸಿದ್ಧಿ ಸಮುದಾಯಗಳಿಗೆ ಮೀಸಲಾತಿ ನೀಡಲು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಅದರಂತೆ ಅರ್ಹತೆ ಪಡೆದ ಎಲ್ಲರಿಗೂ ಮೀಸಲಾತಿ ನೀಡಿಲು ಅವಕಾಶ ಒದಗಿಸಿದೆ. ಆ ಮೂಲಕ 2020ರಿಂದ ತಳವಾರ ಎಸ್‌ಟಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಕಳೆದ 7 ತಿಂಗಳಿಂದ ಜಿಲ್ಲೆಯಲ್ಲಿ ಪ್ರಮಾಣ ಪತ್ರ ನೀಡದೇ ಇರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಲು ತೊಂದರೆಯಾಗುತ್ತಿದೆ. ನೌಕರರಿಗಾಗಿ ಪ್ರಮಾಣ ಪತ್ರ ಸಲ್ಲಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ರಾಜವಾಳ ಮಾತನಾಡಿ, ‘ಅಧಿಕಾರಿಗಳು ಪ್ರಮಾಣ ಪತ್ರ ನೀಡದಿರುವ ಬಗ್ಗೆ ಹಲವು ಬಾರಿ ಸಚಿವರಿಗೆ ಭೇಟಿ ಮಾಡಲು ಸಮಯ ಕೇಳಲಾಗಿದೆ. ಈವರೆಗೆ ಸಮಯ ನೀಡಿಲ್ಲ. ತಳವಾರರಿಗೆ ನೀಡುವ ಪ್ರಮಾಣ ಪತ್ರ ಹಾಗೂ ಕೋಲಿ ಕಬ್ಬಲಿಗ ಜಾತಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಗೊಂದಲ ಸೃಷ್ಟಿ ಮಾಡಬಾರದು’ ಎಂದರು.

ADVERTISEMENT

‘ಮೀಸಲಾತಿ ಪ್ರಮಾಣ ಪತ್ರ ನೀಡಲು ಸಂವಿಧಾನಬದ್ಧವಾದ ಆದೇಶವಾದರೂ ಸಚಿವರ ಗೊಂದಲದ ಹೇಳಿಕೆಯಿಂದ ಅಧಿಕಾರಿಗಳು ಮೀಸಲಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಸಂವಿಧಾನದ ಬಗ್ಗೆ ಮಾತನಾಡುವ ಸಚಿವರು ತಳವಾರ ಸಮಾಜಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗಿರೀಶ ತುಂಬಗಿ, ಗುರುನಾಥ ಹಾವನೂರು, ಚಂದ್ರಕಾಂತ ನಡಗಟ್ಟಿ, ಬೆಳ್ಳೆಪ್ಪ ಇಂಗನಕಲ್ಲ, ರಾಜು ತಳವಾರ, ಶರಣು ಹಾಗೂ ಇತರರು ಹಾಜರಿದ್ದರು.

ರಾಮಲಿಂಗ ನಾಟೀಕಾರ

‘ಸಮಾಜ ಸಂಘಟನೆ ಬಿಟ್ಟು ರಾಜಕೀಯ ಸರಿಯಲ್ಲ’

ಕಲಬುರಗಿ: ‘ಕೋಲಿ ಕಬ್ಬಲಿಗ ಬೆಸ್ತ ಸೇರಿ ಹಲವು ಉಪಪಂಗಡಗಳಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಹೋರಾಟ ಮಾಡುವ ಬದಲು ಬಿಜೆಪಿ ಮುಖಂಡ ಅವಣ್ಣ ಮ್ಯಾಕೇರಿ ಅವರು ರಾಜಕೀಯ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್‌.ಟಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಾಮಲಿಂಗ ನಾಟೀಕಾರ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನವೆಂಬರ್‌ 2ರಂದು ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‌ಟಿಗೆ ಸೇರ್ಪಡೆ ವಿಚಾರವಾಗಿ ಹೋರಾಟಕ್ಕೆ ಮುಂದಾಗಿದ್ದೇವು. ಆರ್‌ಎಸ್‌ಎಸ್‌ ಪಥಸಂಚಲನ ವಿರುದ್ಧವಾಗಿ ಅಲ್ಲ ಎಂಬುದು ಬಿಜೆಪಿ ಮುಖಂಡರು ತಿಳಿದುಕೊಳ್ಳಬೇಕು’ ಎಂದರು.

‘ಮೀಸಲಾತಿ ಪ್ರಮಾಣ ಪತ್ರ ನೀಡುವಲ್ಲಿ ಆಗುತ್ತಿರುವ ಗೊಂದಲದ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೆ ತರಲಾಗಿದ್ದು ಸಮಸ್ಯೆ ಇತ್ಯರ್ಥಕ್ಕೆ ನವೆಂಬರ್‌ 5 ಗಡುವು ನೀಡಲಾಗಿದೆ. ಅಲ್ಲಿಯವರೆಗೆ ಸರ್ಕಾರ ಸ್ಪಂದನೆ ಮಾಡದಿದ್ದರೆ ನವೆಂಬರ್ 17ರಂದು ಪ್ರತಿಭಟನೆ ಮಾಡಲಾಗುವುದು’ ಎಂದು ಹೇಳಿದರು.

‘ಸಮಾಜ ಸಂಘಟಿಸುವ ಹಾಗೂ ಒಗ್ಗಟ್ಟು ಪ್ರದರ್ಶಿಸುವ ಹಾಗೂ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿರುವ ನೀವು ಪಕ್ಷದ ಓಲೈಕೆಗಾಗಿ ಸಮಾಜದ ಜನರನ್ನು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಮಲ್ಲಿಕಾರ್ಜುನ ಗುಡಬಾ ಸಿದ್ದಪ್ಪ ಸೀನೂರು ಶರಣು ಡೋಣಗಾಂವ ನಾಗೇಂದ್ರಪ್ಪ ಲಿಂಗಪಲ್ಲಿ ಉಮೇಶ ಕುರಿಕೋಟಿ ದೇವೀಂದ್ರ ಜಮಾದಾರ ಸಂತೋಷ ಕಡಬೂರ ವೈಜನಾಥ ಜಮಾದಾರ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.