ADVERTISEMENT

ಜೇವರ್ಗಿ: ಆಸ್ಪತ್ರೆಯ ಒಪಿಡಿ ಪುಸ್ತಕದಲ್ಲಿ ಸಿನಿಮಾದ ಭಕ್ತಿಗೀತೆ ಬರೆದ ಸಿಬ್ಬಂದಿ!

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 9:44 IST
Last Updated 16 ಜುಲೈ 2025, 9:44 IST
   

ಜೇವರ್ಗಿ (ಕಲಬುರಗಿ): ಜೇವರ್ಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಿನಿಮಾದ ಭಕ್ತಿಗೀತೆ ಬರೆದಿರುವುದು ಬುಧವಾರ ಲೋಕಾಯುಕ್ತರ ಪರಿಶೀಲನೆ ವೇಳೆ ಗೊತ್ತಾಗಿದೆ.

ತಾಲ್ಲೂಕಿನ ಮಾರಡಗಿ ಎಸ್.ಎ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಲು ಲೋಕಾಯುಕ್ತ ಎಸ್ಪಿ ಸಿದ್ದರಾಜು, ಡಿವೈಎಸ್‌ಪಿ ಗೀತಾ ಬೇನಾಳ ಅವರು ಭೇಟಿ ನೀಡಿದರು. ಇದೇ ವೇಳೆ ಆಸ್ಪತ್ರೆಯ ವ್ಯವಸ್ಥೆಯ ಪರಿಶೀಲಿಸುವಾಗ ಭಕ್ತಿಗೀತೆ ಬರೆದಿರುವುದು ಕಂಡುಬಂದಿದೆ.

ಒಪಿಡಿ ಪುಸ್ತಕದಲ್ಲಿ 'ಎರಡು ಕನಸು' ಚಲನಚಿತ್ರದ, 'ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾ ನಿಂದೇ ತೆರೆಯೋ ಬಾಗಿಲನು ರಾಮ... ಮೋಡದಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು ಮಾಣಿಕ್ಯದಾರತಿ ಉಷೆತಂದಿಹಳು...ತಾಮಸವೇಕಿನ್ನು ಸ್ವಾಮಿ, ತೆರೆಯೋ ಬಾಗಿಲನು, ರಾಮ...' ಎಂದು ಇಡೀ ಹಾಡನ್ನು ಬರೆದಿದ್ದಾರೆ.

ADVERTISEMENT

ಆಸ್ಪತ್ರೆ ಸಿಬ್ಬಂದಿಯ ಈ ಬರಹಕ್ಕೆ ಲೋಕಾಯುಕ್ತ ಎಸ್ಪಿ ಆಕ್ರೋಶ ವ್ಯಕ್ತಪಡಿಸಿದರು. 'ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಕ್ಷೇತ್ರದ ಆಸ್ಪತ್ರೆನಾ ಇದು' ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.