ADVERTISEMENT

ಹಾಲಿಗೆ ‘ಪ್ರೋತ್ಸಾಹ ಧನ’ ವಿಳಂಬ

ಫ್ರೂಟ್ಸ್‌ ಆ್ಯಪ್‌ನಲ್ಲಿ ಹಾಕಬೇಕಿದೆ ಹಾಲು ಉತ್ಪಾದಕರ ಪೂರ್ಣ ವಿವರ

ಸಂತೋಷ ಈ.ಚಿನಗುಡಿ
Published 22 ನವೆಂಬರ್ 2020, 19:30 IST
Last Updated 22 ನವೆಂಬರ್ 2020, 19:30 IST
ಆರ್.ಕೆ.ಪಾಟೀಲ
ಆರ್.ಕೆ.ಪಾಟೀಲ   

ಕಲಬುರ್ಗಿ: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಮೇಲೆ ರಾಜ್ಯ ಸರ್ಕಾರ ನೀಡುತ್ತಿದ್ದ ₹ 5 ಪ್ರೋತ್ಸಾಹ ಧನ ಕಳೆದ ಮೂರು ತಿಂಗಳಿನಿಂದ ನಿಂತುಹೋಗಿದೆ. ಕೃಷಿ ಇಲಾಖೆಯಲ್ಲಿನ ತಾಂತ್ರಿಕ ಅಡಚಣೆಗಳ ಕಾರಣ ಈ ಸಹಾಯಧನ ವಿಳಂಬವಾಗಿದ್ದು, ಗ್ರಾಮೀಣ ಕೃಷಿಕರು ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ವರ್ಷ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನದ ವಿವರಗಳನ್ನು ಡಿಬಿಟಿ ‘ಕ್ಷೀರಸಿರಿ’ ತಂತ್ರಾಂಶದಲ್ಲಿ ಅಳವಡಿಸಿ ನೇರವಾಗಿ ಖಜಾನೆ–2ರಿಂದ ಪಾವತಿಸುವ ಪದ್ಧತಿ ಅನುಸರಿಸುತ್ತಿತ್ತು. ಆದರೆ, ಈಗ ಎಲ್ಲ ಹಾಲು ಉತ್ಪಾದಕರ ವಿವರಗಳನ್ನು ‘ಫ್ರೂಟ್ಸ್‌’ (FRUITS- ಫಾರ್ಮರ್‌ ರಜಿಸ್ಟ್ರೇಷನ್‌ ಅಂಡ್‌ ಯುನಿಫೈಡ್‌ ಬೆನಿಫಿಸರಿ ಇನ್ಫಾರ್ಮೇಷನ್‌ ಸಿಸ್ಟಂ) ಆ್ಯಪ್‌ನಲ್ಲಿ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಹಾಗಾಗಿ, ಕಲಬುರ್ಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳ ಸುಮಾರು 13 ಸಾವಿರ ಹಾಲು ಉತ್ಪಾದಕರಿಗೆ ‘ಪ್ರೋತ್ಸಾಹ’ ಇಲ್ಲವಾಗಿದೆ.

ಏನಿದು ಫ್ರೂಟ್ಸ್‌?: ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆ ಯಶಸ್ವಿಗೊಳಿಸಲು ಕೃಷಿ ಇಲಾಖೆ ‘ಫ್ರೂಟ್ಸ್‌’ ಆ್ಯಪ್‌ ಅಭಿವೃದ್ಧಿ ಪಡಿಸಿ ನೀಡಲಾಗಿದೆ. ಈ ಆ್ಯಪ್‌ನಲ್ಲಿ ಆಯಾ ಜಿಲ್ಲೆಯ ಪ್ರತಿಯೊಬ್ಬ ರೈತರ ಹೆಸರು, ಜಮೀನು, ಪಹಣಿ, ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಸಂಖ್ಯೆಗಳ ಸಮೇತ ವಿವರ ಅ‍ಪ್‌ಲೋಡ್‌‌ ಮಾಡಲಾಗುತ್ತದೆ. ಕಿಸಾನ್‌ ಸಮ್ಮಾನ್‌ ನಿಧಿಯ ಮೂರು ಕಂತುಗಳನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲು ಇದು ಅನುಕೂಲವಾಗಿದೆ.

ADVERTISEMENT

‌ಈಗ ಇದೇ ಆ್ಯಪ್‌ ತಂತ್ರಾಂಶವನ್ನು ಪ್ರೋತ್ಸಾಹ ಧನ ಪಡೆಯಲು ಅರ್ಹರಾದ ಹಾಲು ಉತ್ಪಾದಕರಿಗೂ ಅಳವಡಿಸಲಾಗುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ 9 ಸಾವಿರ ರೈತರ ಹೆಸರನ್ನು ಇದರಲ್ಲಿ ಅಳವಡಿಸಲಾಗಿದೆ. ಆದರೆ, ಇನ್ನೂ 13 ಸಾವಿರ ರೈತರ ಹೆಸರು ಬಾಕಿ ಇವೆ. ಬಹಳಷ್ಟು ಹಾಲು ಉತ್ಪಾದಕರ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಆಗಿಲ್ಲ. ಮತ್ತೆ ಕೆಲವರ ಆಧಾರ್‌ ಕಾರ್ಡ್‌ ಹೆಸರು ಹಾಗೂ ಬ್ಯಾಂಕ್‌ ಖಾತೆಯಲ್ಲಿನ ಹೆಸರು ಸರಿಹೊಂದುತ್ತಿಲ್ಲ. ಇದನ್ನು ಮರು ತಿದ್ದುಪಡಿ ಮಾಡಿ ಅಳವಡಿಸಲು ಸಮಯ ಹಿಡಿದಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಹೆಚ್ಚುವರಿ ಪ್ರೋತ್ಸಾಹ ಧನ ವಿಳಂಬ: ರಾಜ್ಯದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹ 5 ಪ್ರೋತ್ಸಾಹ ಧನ ನೀಡುವುದು ಸರ್ಕಾರದ ಉದ್ದೇಶ. ಇದಲ್ಲದೇ, ಪರಿಶಿಷ್ಟ ಜಾತಿ– ಪಂಗಡ– ಗಿರಿಜನ ಉಪಯೋಜನೆ (ಎಸ್‌ಸಿಪಿ– ಟಿಎಸ್‌ಪಿ) ಅಡಿ ಹಿಂದುಳಿದ ವರ್ಗಗಳನ್ನು ಪ್ರೋತ್ಸಾಹಿಸಲು ₹ 1 ಹೆಚ್ಚುವರಿ ಕೊಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ 2019ರ ಸೆಪ್ಟೆಂಬರ್‌ 17ರಂದು ಘೋಷಿಸಿದ್ದರು.‌ ಆದರೆ, ಈ ಹೆಚ್ಚುವರಿ ಧನ ಕೂಡ ವಿಳಂಬವಾಗುತ್ತಿದೆ.

ಮಾತ್ರವಲ್ಲ; ಹೈನೋದ್ಯಮದಲ್ಲಿ ತೊಡಗಿದ ಪುರುಷ ಹಾಗೂ ಮಹಿಳೆಯರಿಗೆ ಒಂದೇ ರೀತಿಯ ಪ‍್ರೋತ್ಸಾಹ ಧನ ನಿಗದಿ ಮಾಡಲಾಗಿದೆ. ಇದು ಸರಿಯಲ್ಲ; ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಹಸು–ಎಮ್ಮೆಗಳನ್ನು ಪಾಲನೆ– ಪೋಷಣೆ ಮಾಡುತ್ತಾರೆ. ಹಾಗಾಗಿ, ಹೈನೋದ್ಯಮ ಮಾಡುವ ಮಹಿಳೆಯರಿಗೆ ಪ್ರೋತ್ಸಾಹ ಧನವನ್ನು ₹ 8ಕ್ಕೆ ಏರಿಸಬೇಕು ಎಂಬ ಬೇಡಿಕೆ ವರ್ಷಗಳಿಂದಲೂ ಹಾಗೆ ಬಿದ್ದಿದೆ.

ಕೆಎಂಎಫ್‌ಗೆ ಲಾಭ ತಂದ ಲಾಕ್‌ಡೌನ್‌!

ಕೊರೊನಾ ವೈರಾಣು ನಿಯಂತ್ರಣಕ್ಕಾಗಿ ಆರು ತಿಂಗಳ ಲಾಕ್‌ಡೌನ್‌ ಪರಿಣಾಮ ಎಲ್ಲ ಉದ್ಯಮಗಳೂ ನೆಲಕಚ್ಚಿದ್ದು, ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿ ನಷ್ಟ ಅನುಭವಿಸಿದ್ದಾರೆ. ಆದರೆ, ಕಲಬುರ್ಗಿ– ಬೀದರ್‌– ಯಾದಗಿರಿ ಹಾಲು ಉತ್ಪಾದಕರ ಸಹಕಾರ ಸಂಘ ಮಾತ್ರ ಇದಕ್ಕೆ ಹೊರತಾಗಿದೆ. ಲಾಕ್‌ಡೌನ್‌ ಪರಿಣಾಮ ಈ ಸಂಘಕ್ಕೆ ಪ್ರತಿ ದಿನವೂ ₹ 1 ಲಕ್ಷ ಲಾಭ ಆಗುತ್ತಿದೆ ಎನ್ನುವುದು ಸಂಘದ ಅಧ್ಯಕ್ಷ ಆರ್‌.ಕೆ. ಪಾಟೀಲ ಅವರ ಹೇಳಿಕೆ.

ಹೌದು. ಅಂತರರಾಜ್ಯ ಸಾರಿಗೆ ಬಂದ್‌ ಮಾಡಿದ್ದರಿಂದ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುತ್ತಿದ್ದ ಹಾಲು ನಿಂತುಹೋಯಿತು. ಇದರಿಂದ ಜಿಲ್ಲೆಯ ರೈತರ ಹಾಲು ಜಿಲ್ಲೆಯಲ್ಲೇ ಬಿಕರಿಯಾಗತೊಡಗಿತು.

ಉಪ ಉತ್ಪನ್ನಗಳಿಗೂ ಹೆಚ್ಚಿದ ಬೇಡಿಕೆ: ಕೆಎಂಎಫ್‌ನಿಂದ ತಯಾರಿಸಲಾಗುವ ಹಾಲಿನ ಉಪ ಉತ್ಪನ್ನಗಳಾದ ಪೇಡಾ, ಪನೀರ್‌, ಬಿಸ್ಕತ್ತುಗಳಿಗೂ ಈಗ ಬೇಡಿಕೆ ಹೆಚ್ಚಾಗಿದೆ. ‘ಸರ್ಕಾರಿ ಹಾಲಿನ ಉತ್ಪನ್ನ’ ಎಂಬ ಭರವಸೆಯಿಂದ ಜನರು ಹೆಚ್ಚಾಗಿ ಇವುಗಳನ್ನು ಖರೀದಿಸುತ್ತಿದ್ದಾರೆ. ಸಂಸ್ಥೆಗೆ ಲಾಭ ಬರಲು ಇದು ಕೂಡ ಕಾರಣ ಎನ್ನುತ್ತಾರೆ ಅವರು.

₹ 250ಕ್ಕೆ ₹ 50 ಸಾವಿರದ ವಿಮೆ

‘ಈ ಹಿಂದೆ ಹಸು ಅಥವಾ ಕರುಗಳಿಗೆ ವಿಮೆ ಮಾಡಿಸಲು ₹ 3 ಸಾವಿರ ಇತ್ತು. ಆರ್‌.ಕೆ. ಪಾಟೀಲ ಅವರು ಅಧ್ಯಕ್ಷರಾದ ಮೇಲೆ ವಿಮೆ ಕಂತನ್ನು ₹ 250ಕ್ಕೆ ಇಳಿಸಿದರು. ಅದಕ್ಕೆ ₹ 50 ಸಾವಿರ ಪರಿಹಾರ ಬರುತ್ತದೆ. ಇದರಿಂದ ನನ್ನ ಮೂರು ಹಸು ಹಾಗೂ ಆರು ಕರುಗಳಿಗೆ ವಿಮೆ ಮಾಡಿಸಿದ್ದೇನೆ’ ಎನ್ನುತ್ತಾರೆ ಜಿಡಗಾ ಗ್ರಾಮದ ರೈತ ಸಿದ್ಧರಾಮ.

‘ಹೋದ ತಿಂಗಳು ಲಂಪಿಸ್ಕಿನ್‌ ಕಾಯಿಲೆಯಿಂದ ಒಂದು ಹಸು ಮೃತಪಟ್ಟಿತು. ಅದಕ್ಕೆ ವಿಮೆ ಮಾಡಿಸಿದ್ದರಿಂದಲೇ ₹ 50 ಸಾವಿರ ಪರಿಹಾರ ಬಂದಿತು. ಇದರಿಂದ ಹೈನುಗಾರಿಕೆಯಲ್ಲಿ ಮುಂದುವರಿಯಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.‌

ಅತಿವೃಷ್ಟಿ, ಲಂಪಿಸ್ಕಿನ್‌ನಿಂದ ಕುಂಠಿತ

ಈ ಬಾರಿ ಅತಿವೃಷ್ಟಿ ಹಾಗೂ ಲಂಪಿಸ್ಕಿನ್‌ ಸಾಂಕ್ರಾಮಿಕ ರೋಗದ ಕಾರಣ ಜಿಲ್ಲೆಯಲ್ಲಿ 15 ಸಾವಿರ ಲೀಟರ್‌ ಹಾಲು ಉತ್ಪಾದನೆ ಕುಸಿದಿದೆ ಎನ್ನುತ್ತವೆ ಇಲಾಖೆಯ ಅಂಕಿ ಅಂಶಗಳು.

ಲಾಕ್‌ಡೌನ್‌ ಸಂದರ್ಭದಲ್ಲಿ ಕೂಡ ಮೂರೂ ಜಿಲ್ಲೆಗಳಿಂದ 75 ಸಾವಿರ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿತ್ತು. ಆದರೆ, ಅತಿವೃಷ್ಟಿಯಿಂದ ಹಸುಗಳು ಕಾಯಿಲೆ ಬಿದ್ದವು. ಇದರ ಮಧ್ಯೆ ಲಂಪಿಸ್ಕಿನ್‌ ವೈರಾಣು ಕಾಟದಿಂದ ಮತ್ತಷ್ಟು ರೋಗಗ್ರಸ್ಥವಾದವು. ಈಗ ಉತ್ಪಾದನೆ 60 ಸಾವಿರ ಲೀಟರ್‌ಗೆ ಕುಸಿದಿದೆ.

ಆಸಕ್ತರಿಗೆ ಸಾಲ, ತರಬೇತಿ

ಹಾಲು ಉತ್ಪಾದನೆಯಲ್ಲಿ ತೊಡಗಲು ಆಸಕ್ತಿ ಇದ್ದವರಿಗೆ ಹಾಲು ಉತ್ಪಾದಕರ ಸೌಹಾರ್ದ ಸಂಘದಿಂದಲೇ ಸಾಲ ಕೂಡ ನೀಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಆಕರಿಸುವ ಬಡ್ಡಿಯನ್ನೇ ಈ ಸಂಘವೂ ಆಕರಿಸುತ್ತಿದೆ. ಸಾಲ ಪಡೆದವರಿಗೆ ಹೈನುಗಾರಿಕೆ ಕುರಿತು ಉಚಿತ ತರಬೇತಿ, ಮಾರ್ಗದರ್ಶನ ಕೂಡ ನೀಡಲಾಗುತ್ತದೆ.

ಗುಣಮಟ್ಟದ ಹಾಲು ಉತ್ಪಾದನೆ, ಎರೆಹುಳು ಗೊಬ್ಬರ ತಯಾರಿ, ವ್ಯರ್ಥ ಪದಾರ್ಥಗಳಿಂದಲೂ ಹಣ ಗಳಿಸುವುದು ಹೇಗೆ ಎಂಬ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಹಲವು ರೈತರು ಪ್ರತಿ ವರ್ಷ ಬೆಳೆ ಸಾಲ ಪಡೆಯುತ್ತಾರೆ. ಅದರ ಬದಲು ಒಂದು ವರ್ಷ ಹೈನುಗಾರಿಕೆಗೆ ಸಾಲ ಪಡೆದರೆ ಸಾಕು; ಆ ಸಾಲ ತೀರಿಸುವುದು ಹೇಗೆ ಎಂಬುದನ್ನೂ ಸಂಘದಿಂದಲೇ ಹೇಳಿಕೊಡುತ್ತೇವೆ ಎನ್ನುವುದು ಆರ್‌.ಕೆ. ಪಾಟೀಲ ವಿವರ.

ಕೆಎಂಎಫ್‌ಗೆ ಲಾಭ ತಂದ ಲಾಕ್‌ಡೌನ್‌!

ಕೊರೊನಾ ವೈರಾಣು ನಿಯಂತ್ರಣಕ್ಕಾಗಿ ಆರು ತಿಂಗಳ ಲಾಕ್‌ಡೌನ್‌ ಪರಿಣಾಮ ಎಲ್ಲ ಉದ್ಯಮಗಳೂ ನೆಲಕಚ್ಚಿದ್ದು, ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿ ನಷ್ಟ ಅನುಭವಿಸಿದ್ದಾರೆ. ಆದರೆ, ಕಲಬುರ್ಗಿ– ಬೀದರ್‌– ಯಾದಗಿರಿ ಹಾಲು ಉತ್ಪಾದಕರ ಸಹಕಾರ ಸಂಘ ಮಾತ್ರ ಇದಕ್ಕೆ ಹೊರತಾಗಿದೆ. ಲಾಕ್‌ಡೌನ್‌ ಪರಿಣಾಮ ಈ ಸಂಘಕ್ಕೆ ಪ್ರತಿ ದಿನವೂ ₹ 1 ಲಕ್ಷ ಲಾಭ ಆಗುತ್ತಿದೆ ಎನ್ನುವುದು ಸಂಘದ ಅಧ್ಯಕ್ಷ ಆರ್‌.ಕೆ. ಪಾಟೀಲ ಅವರ ಹೇಳಿಕೆ.

ಹೌದು. ಅಂತರರಾಜ್ಯ ಸಾರಿಗೆ ಬಂದ್‌ ಮಾಡಿದ್ದರಿಂದ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುತ್ತಿದ್ದ ಹಾಲು ನಿಂತುಹೋಯಿತು. ಇದರಿಂದ ಜಿಲ್ಲೆಯ ರೈತರ ಹಾಲು ಜಿಲ್ಲೆಯಲ್ಲೇ ಬಿಕರಿಯಾಗತೊಡಗಿತು.

ಉಪ ಉತ್ಪನ್ನಗಳಿಗೂ ಹೆಚ್ಚಿದ ಬೇಡಿಕೆ: ಕೆಎಂಎಫ್‌ನಿಂದ ತಯಾರಿಸಲಾಗುವ ಹಾಲಿನ ಉಪ ಉತ್ಪನ್ನಗಳಾದ ಪೇಡಾ, ಪನೀರ್‌, ಬಿಸ್ಕತ್ತುಗಳಿಗೂ ಈಗ ಬೇಡಿಕೆ ಹೆಚ್ಚಾಗಿದೆ. ‘ಸರ್ಕಾರಿ ಹಾಲಿನ ಉತ್ಪನ್ನ’ ಎಂಬ ಭರವಸೆಯಿಂದ ಜನರು ಹೆಚ್ಚಾಗಿ ಇವುಗಳನ್ನು ಖರೀದಿಸುತ್ತಿದ್ದಾರೆ. ಸಂಸ್ಥೆಗೆ ಲಾಭ ಬರಲು ಇದು ಕೂಡ ಕಾರಣ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.