ಜೇವರ್ಗಿ: ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಕಂಡುಬರುತ್ತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಪಟ್ಟಣಕ್ಕೆ ವ್ಯಾಪಾರ-ವಹಿವಾಟಿಗಾಗಿ ನಿತ್ಯ ಸಾವಿರಾರು ಜನರು ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿ-50 ಹಾಗೂ ಬೀದರ- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯೂ ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಬಿಡಾಡಿ ದನಗಳು ರಾತ್ರಿ ಹಗಲೆನ್ನದೆ ರಸ್ತೆಯ ಮೇಲೆ ಮಲಗಿರುವುದರಿಂದ ಅಪಘಾತಗಳು ಸಂಭವಿಸಿ ಹಲವಾರು ದ್ವಿಚಕ್ರವಾಹನ ಸವಾರರು ಗಾಯಗೊಂಡಿದ್ದಾರೆ. ಈ ಕುರಿತು ಎಚ್ಚರ ವಹಿಸಬೇಕಾದ ಪೊಲೀಸ್ ಇಲಾಖೆ ಮತ್ತು ಪುರಸಭೆ ನಿದ್ರೆಗೆ ಜಾರಿದ್ದು, ಬಿಡಾಡಿ ದನಗಳನ್ನು ನಿಯಂತ್ರಿಸುವವರು ಯಾರು ಎಂಬುದು ಸಾರ್ವಜನಿಕರ ಅಹವಾಲಾಗಿದೆ.
ಪಟ್ಟಣದ ಡಾ.ಅಂಬೇಡ್ಕರ್ ಸರ್ಕಲ್ ದಿಂದ ಕನಕದಾಸ ವೃತ್ತದ ವರೆಗಿನ ಮುಖ್ಯ ರಸ್ತೆಯ ಮೇಲೆ ಮಂಗಳವಾರ ನಡೆಯುವ ಸಂತೆಯಲ್ಲೂ ದನಗಳ ಹಾವಳಿ ಮಿತಿಮೀರಿದೆ. ಕಿರಿದಾದ ರಸ್ತೆಯಲ್ಲಿ ಸಂತೆ ನಡೆಯುವ ಕಾರಣ, ಜನರು ತಿರುಗಾಡಲು ಕಷ್ಟ ಪಡುತ್ತಾರೆ. ಇಂತಹ ಸ್ಥಿತಿಯಲ್ಲಿ ಹಣ್ಣು-ತರಕಾರಿಗಾಗಿ ದನಗಳ ಹಿಂಡು ಸಂತೆಯಲ್ಲಿ ನುಗ್ಗಿ ಜನರಿಗೆ ತೊಂದರೆ ಮಾಡುತ್ತಿವೆ.
ಬೀದಿ ಬದಿಯ ಹೂವು-ಹಣ್ಣು ಸೇರಿದಂತೆ ಇತರೆ ದಿನಸಿ ವ್ಯಾಪಾರಿಗಳು ಕೂಡ ಬಿಡಾಡಿ ದನಗಳ ಹಾವಳಿಗೆ ತೀವ್ರ ಬೇಸತ್ತು ಹೋಗಿದ್ದಾರೆ. ವ್ಯಾಪಾರ ನಡೆಸುವುದೇ ದುಸ್ತರವಾಗಿದೆ. ಸ್ವಲ್ಪ ಯಾಮಾರಿದರೂ ತರಕಾರಿಗಳಿಗೆ ಬಾಯಿ ಹಾಕಿ ಚೆಲ್ಲಾಪಿಲ್ಲಿ ಮಾಡುತ್ತವೆ ಎಂಬುದು ತರಕಾರಿ-ಹಣ್ಣು ವ್ಯಾಪಾರಸ್ಥರ ಗೋಳಾಗಿದೆ.
ಪೊಲೀಸ್ ಇಲಾಖೆ ಹಾಗೂ ಪುರಸಭೆ ಆಡಳಿತ ಈಗಲಾದರೂ ಎಚ್ಚೆತ್ತುಕೊಂಡು ಬಿಡಾಡಿ ದನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ದನಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.